ಬೀದರ್: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದ್ದು, ಮಂಗಳವಾರ (ಜ.07) ಡಿಐಜಿಪಿ ಶಾಂತನು ಸಿನ್ಹಾ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ರಾಜಕೀಯ ವಲಯದಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿರುವ ಆತ್ಮಹತ್ಯೆ ಪ್ರಕರಣ ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗಿಳಿಸಿ ವರದಿ ಸಲ್ಲಿಸಲು ಮುಂದಾಗಿದೆ. ಹೀಗಾಗಿ ಕಳೆದ ಐದಾರು ದಿನಗಳಿಂದ ಬೀದರದಲ್ಲೇ ಬೀಡು ಬಿಟ್ಟಿರುವ ಸಿಐಡಿ ಅಧಿಕಾರಿಗಳ ತಂಡ ಪ್ರತಿಯೊಂದು ಆಯಾಮದಲ್ಲಿ ತನಿಖೆ ನಡೆಸುತ್ತಿದೆ.
ಸಿಐಡಿ ಡಿಐಜಿಪಿ ಶಾಂತನು ಸಿನ್ಹಾ ಅವರು ಘಟನೆ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆದ್ದಾರಲ್ಲದೆ ಈವರೆಗಿನ ತನಿಖೆಯ ಮಾಹಿತಿಯನ್ನು ರೈಲ್ವೆ ಪೊಲೀಸರು ಮತ್ತು ಸಿಐಡಿ ಡಿವೈಎಸ್ಪಿ ಸುಲೇಮಾನ್ ತಹಸೀಲ್ದಾರ್ ನೇತೃತ್ವದ ತಂಡದಿಂದ ಪಡೆದರು.
ಟೆಂಡರ್ ವಂಚನೆ ಮತ್ತು ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಸಚಿನ್ ಪಾಂಚಾಳ್ ಡಿ.26 ರಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಕಲಬುರಗಿಯ ಕಾಂಗ್ರೆಸ್ ಮುಖಂಡ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿದಂತೆ ಆರು ಜನರ ಹೆಸರನ್ನು ಉಲ್ಲೇಖಿಸಿದ್ದ. ಹಾಗಾಗಿ ಈ ಪ್ರಕರಣ ಸಚಿವ ಖರ್ಗೆ ಜತೆಗೆ ತಳಕು ಹಾಕಿಕೊಂಡಿದೆ. ಹಾಗಾಗಿ ಈ ಪ್ರಕರಣ ಭಾರಿ ಸದ್ದು ಮಾಡುತ್ತಿದೆ.
ಸಿಐಡಿ ಡಿಐಜಿಪಿ ಶಾಂತನು ಸಿನ್ಹಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಏನು ಹೇಳಲು ಬರುವುದಿಲ್ಲ ಎಂದರು.