ಪ್ರಿಯಾ ಹಾಸನ್ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ಸುದ್ದಿಯಾಗಿದ್ದು ಎರಡು ವಿಷಯಕ್ಕೆ ಒಂದು ಹೊಸ ಸಿನಿಮಾ ನಿರ್ದೇಶನ, ನಟನೆ ಮತ್ತು ನಿರ್ಮಾಣ ಮಾಡುವುದು. ಇನ್ನೊಂದು ಡಾಕ್ಟರೇಟ್ ಪಡೆದಿರುವುದು. ಹೌದು, ಪ್ರಿಯಾಹಾಸನ್ ಈಗ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ “ರಣ ಚತುರೆ’ ಎಂದು ನಾಮಕರಣ ಮಾಡಲಾಗಿದೆ. ಇದು ಪಕ್ಕಾ ಆ್ಯಕ್ಷನ್ ಸಿನಿಮಾ ಆಗಿದ್ದು, ಇದಲ್ಲೂ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ.
ಈ ಹಿಂದೆ “ಬಿಂದಾಸ್ ಹುಡುಗಿ’ ಚಿತ್ರದಲ್ಲೂ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದರು. ಆದರೆ, ಅಲ್ಲಿ ಬೆರಳೆಣಿಕೆ ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಆದರೆ, “ರಣ ಚತುರೆ’ ಪೊಲೀಸ್ ಅಧಿಕಾರಿ ಸುತ್ತವೇ ಸಾಗಲಿದೆ. ಈಗಾಗಲೇ ಹಾಡುಗಳು ಪೂರ್ಣಗೊಂಡಿದ್ದು, ಸ್ಕ್ರಿಪ್ಟ್ ಕೂಡ ಅಂತಿಮಗೊಂಡಿದೆ. ಅಕ್ಟೋಬರ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ. “ರಣ ಚತುರೆ’ ಕೇವಲ ಆ್ಯಕ್ಷನ್ ಚಿತ್ರ ಮಾತ್ರವಲ್ಲ. ಇಲ್ಲಿ ಬಲವಾದ ಸಂದೇಶವೂ ಇರಲಿದೆ.
ಭ್ರಷ್ಟಾಚಾರದ ಅಂಶಗಳೂ ಇಲ್ಲಿದ್ದು, ಅದನ್ನು ತೆರೆಯ ಮೇಲೆ ಜನರಿಗೆ ಹೇಗೆಲ್ಲಾ ತಡೆಯಬಹುದು ಎಂಬುದನ್ನು ಹೇಳುವ ಮೂಲಕ ಒಂದೊಳ್ಳೆಯ ಸಾಮಾಜಿಕ ಸಂದೇಶ ಸಾರುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳುತ್ತಾರೆ ಪ್ರಿಯಾ ಹಾಸನ್. ಚಿತ್ರಕ್ಕೆ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಒಟ್ಟಾರೆ, ಮೂರು ಭರ್ಜರಿ ಆ್ಯಕ್ಷನ್‌ಗಳು ಚಿತ್ರದಲ್ಲಿರಲಿವೆ.
ಈಗಾಗಲೇ ಪ್ರಿಯಾ ಹಾಸನ್ ಅವರನ್ನು ಜನರು ಆ್ಯಕ್ಷನ್ ಮೂಲಕವೇ ಇಷ್ಟಪಟ್ಟಿರುವುದರಿಂದ ಇಲ್ಲೂ ಅದು ಮುಂದುವರೆಯಲಿದ್ದು, ಈ ಚಿತ್ರದ ಮೂಲಕ ನಾಲ್ವರು ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದಾರೆ ಪ್ರಿಯಾ. ವಿಜಯ್ ಎಂಬ ಹೊಸ ಪ್ರತಿಭೆ ಸಂಭಾಷಣೆ ಬರೆದಿದ್ದು, ಗೀತೆಗಳನ್ನೂ ರಚಿಸಿದ್ದಾರೆ. ಈ ಬಾರಿ ಹೊಸ ತಾಂತ್ರಿಕ ತಜ್ಞರು ಕೆಲಸ ಮಾಡುತ್ತಿದ್ದು, ಕನ್ನಡಕ್ಕೊಂದು ಹೊಸರೀತಿಯ ಚಿತ್ರ ಕೊಡುವ ನಿಟ್ಟಿನಲ್ಲಿ ತಯಾರಾಗಿದ್ದಾರೆ ಪ್ರಿಯಾ.
ಇನ್ನು, ಜರ್ಮನ್ ವಿಶ್ವವಿದ್ಯಾಲಯದಿಂದ ಪ್ರಿಯಾ ಹಾಸನ್ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಸಮಾಜ ಸೇವೆ, ಸಿನಿಮಾ ನಿರ್ದೇಶನ, ನಿರ್ಮಾಣ ಮತ್ತು ನಟನೆ ಇದರ ಸಾಧನೆ ಗಮನಿಸಿ ಮತ್ತು ಯಾವುದೇ ಗಾಡ್‌ಫಾದರ್ ಇಲ್ಲದೆ, ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ ಎಂಬುದು ಪ್ರಿಯಾ ಮಾತು. ಅಂದಹಾಗೆ, ಇತ್ತೀಚೆಗೆ ಅವರು ಸಿಂಗಾಪುರ್‌ನಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.