ಹಾವೇರಿ: ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಆನ್‌ಲೈನ್ ಖರೀದಿ, ಆನ್‌ಲೈನ್ ಸಭೆ, ಆನ್‌ಲೈನ್ ಬ್ಯಾಂಕಿಂಗ್, ಆನ್‌ಲೈನ್ ಶಿಕ್ಷಣ ಸೇರಿದಂತೆ ವಿವಿಧ ಸೇವೆ, ವ್ಯವಹಾರಗಳು ಈಗ ಆನ್ ಲೈನ್‌ನಲ್ಲಿಯೇ ನಡೆಯುತ್ತಿದ್ದು ಇವುಗಳ ಸಾಲಿಗೆ ಈಗ ಆನ್‌ಲೈನ್ ಆರೋಗ್ಯ ಸೇವೆಯೂ ಸೇರಿಕೊಂಡಿದೆ.
ಜಿಲ್ಲೆಯ ಕೆಲ ಖಾಸಗಿ ಆಸ್ಪತ್ರೆಗಳು ಟೆಲಿ ಕನ್ಸಲ್ಟಿಂಗ್, ವಿಡಿಯೋ ಕಾಲಿಂಗ್, ವಾಟ್ಸ್‌ಆ್ಯಪ್ ಮೂಲಕ ಆನ್ ಲೈನ್‌ನಲ್ಲಿಯೇ ರೋಗಿಗಳ ಆರೋಗ್ಯ ತಪಾಸಣೆ, ಔಷಧೋಪಚಾರ, ಆರೋಗ್ಯ ಸಲಹೆ, ಆನ್ ಲೈನ್‌ನಲ್ಲಿ ವೈದ್ಯರ ಭೇಟಿಗೆ ಬುಕ್ಕಿಂಗ್ ಜತೆಗೆ ಆನ್ ಲೈನ್‌ನಲ್ಲಿಯೇ ಸೇವಾ ಶುಲ್ಕ ಪಡೆಯುವ ಯೋಜನೆ ರೂಪಿಸಿಕೊಂಡಿವೆ.
ಬದಲಾದ ಪರಿಸ್ಥಿತಿಗೆ ಪೂರಕವಾಗಿ ಖಾಸಗಿ ಆಸ್ಪತ್ರೆಗಳು ರೂಪಿಸಿಕೊಂಡ ಆನ್‌ಲೈನ್ ಆರೋಗ್ಯ ಸೇವೆಯಿಂದ ಜನರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುವುದಕ್ಕೆ ಕಡಿವಾಣ ಬೀಳುತ್ತಿದೆ. ಆಸ್ಪತ್ರೆಗಳಿಗೆ ಅನಗತ್ಯ ಓಡಾಟ, ಆಸ್ಪತ್ರೆಯ ಇತರ ರೋಗಿಗಳ ಸಂಪರ್ಕ ಹೊಂದುವುದಕ್ಕೆ ಬ್ರೇಕ್ ಬೀಳುತ್ತಿದೆ. ಜನರು ಮನೆಯಲ್ಲಿಯೇ ಇದ್ದು ತಮ್ಮ ಆರೋಗ್ಯ ಸಮಸ್ಯೆಗಳಿಗೆ ವೈದ್ಯರಿಂದ ಸಲಹೆ, ಔಷಧೋಪಚಾರ ಸೇವೆ ಪಡೆಯಲು ಉಪಯುಕ್ತವಾಗಿದೆ.
ಹೀಗಿದೆ ಆನ್‌ಲೈನ್ ಸೇವೆ: ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇದ್ದವರು ಆಸ್ಪತ್ರೆಗೆ ದೂರವಾಣಿ ಕರೆ ಮಾಡಿ ಹೆಸರು ನೋಂದಾಯಿಸಬೇಕು. ಬಳಿಕ ಮೊಬೈಲ್ ಮೂಲಕವೇ ಆನ್‌ಲೈನ್‌ನಲ್ಲಿ ಆಸ್ಪತ್ರೆ ನಿಗದಿಪಡಿಸಿರುವ ಸೇವಾ ಶುಲ್ಕಪಾವತಿಸಬೇಕು. ಬಳಿಕ ವೈದ್ಯರು ವಿಡಿಯೋ ಕಾಲ್ ಮಾಡಿ ರೋಗಿಯೊಂದಿಗೆ ಸಮಾಲೋಚನೆ ನಡೆಸುತ್ತಾರೆ. ರೋಗಿಯ ಈ ಹಿಂದಿನ ಚಿಕಿತ್ಸಾ ವರದಿಗಳಿದ್ದರೆ ಅದನ್ನೂ ಮೊಬೈಲ್‌ನಲ್ಲಿ ತರಿಸಿಕೊಂಡು ನೋಡುತ್ತಾರೆ. ರೋಗಿಯ ಸಮಸ್ಯೆ ಆಧರಿಸಿ ಮೊಬೈಲ್‌ನಲ್ಲಿಯೇ ಔಷಧ ಚೀಟಿ ಬರೆದು ಫೋಟೋ ಕಳುಹಿಸುತ್ತಾರೆ. ಒಂದು ವೇಳೆ ಸಮಸ್ಯೆ ಗಂಭೀರವಾಗಿದ್ದು ನೇರವಾಗಿ ರೋಗಿಯ ಆರೋಗ್ಯ ತಪಾಸಣೆ, ಇಲ್ಲವೇ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅವರನ್ನು ಆಸ್ಪತ್ರೆಗೆ ಭೇಟಿ ನೀಡಲು ಸಲಹೆ ನೀಡುತ್ತಾರೆ.
ತಲೆಕೆಳಗಾದ ನಿಯಮ: ಕೋವಿಡ್-19 ವೈರಸ್ ಹರಡುವ ಮೊದಲು “ಶಾಲೆಯಲ್ಲಿ ಮೊಬೈಲ್ ನಿಷೇಧ. ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರ ಇರಬೇಕು’ ಎಂದೆಲ್ಲ ನಿಯಮವಿತ್ತು. ಕೋವಿಡ್ ಸೋಂಕು ಬಂದ ಬಳಿಕ ಈಗ ಮೊಬೈಲ್‌ನಲ್ಲಿಯೇ ಶಾಲೆ, ಮೊಬೈಲ್ ನಲ್ಲಿಯೇ ಮಕ್ಕಳಿಗೆ ಶಿಕ್ಷಕರಿಂದ ಪಾಠ ಶುರುವಾಗಿದೆ. ಅದೇ ರೀತಿ ವೈದ್ಯಕೀಯ ಕ್ಷೇತ್ರದಲ್ಲಿಯೂ ಯಾವ ವೈದ್ಯರೂ ರೋಗಿಯನ್ನು ನೇರವಾಗಿ ತಪಾಸಣೆ ಮಾಡದೆ ದೂರವಾಣಿ ಇಲ್ಲವೇ ಇತರೆ ಯಾವುದೇ ಸಂಪರ್ಕ ಮಾಧ್ಯಮದ ಮೂಲಕ ಔಷಧೋಪಚಾರ, ಸಲಹೆ ನೀಡಬಾರದು ಎಂಬ ನಿಯಮವಿತ್ತು. ಆದರೆ, ಈಗ ಈ ನಿಯಮವೂ ತಲೆಕೆಳಗಾಗಿದ್ದು ವೈದ್ಯರೇ ಮೊಬೈಲ್ ಮೂಲಕ ಆರೋಗ್ಯ ಸೇವೆ ನೀಡಲು ಮುಂದಾಗಿದ್ದಾರೆ.
ಇಬ್ಬರಿಗೂ ಅನುಕೂಲ: ಕೋವಿಡ್ ಆರ್ಭಟ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಜನರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗಾಗಿ ಆಸ್ಪತ್ರೆಗಳಿಗೆ ಹೋಗುವುದು ಕಡಿಮೆ ಮಾಡಿದ್ದಾರೆ. ಜನರ ಈ ಮನೋಭಾವದಿಂದ ಖಾಸಗಿ ಆಸ್ಪತ್ರೆಗಳು ಈ ಸಂದರ್ಭದಲ್ಲಿ ರೋಗಿಗಳ ಅಭಾವ ಎದುರಿಸುತ್ತಿದ್ದವು. ಆನ್‌ಲೈನ್ ಆರೋಗ್ಯ ಸೇವೆ ಖಾಸಗಿ ಆಸ್ಪತ್ರೆಗಳು ಎದುರಿಸುತ್ತಿದ್ದ ರೋಗಿಗಳ ಕೊರತೆ ನೀಗಿಸಿದೆ. ಜತೆಗೆ
ರೋಗಿಗಳಿಗೆ ಮನೆಯಲ್ಲಿಯೇ ಸುರಕ್ಷತೆಯೊಂದಿಗೆ ಸೇವೆ ಪಡೆಯಲು ಅನುಕೂಲ ಕಲ್ಪಿಸಿದೆ. ಒಟ್ಟಾರೆ “ರೋಗಿ ಬಯಸಿದ್ದೂ ಹಾಲು-ಅನ್ನ. ವೈದ್ಯ ಹೇಳಿದ್ದೂ ಹಾಲು-ಅನ್ನ’ ಎಂಬಂತೆ ಆನ್‌ಲೈನ್ ಆರೋಗ್ಯ ಸೇವೆ ಪದ್ಧತಿ ಖಾಸಗಿ ವೈದ್ಯರಿಗೂ- ರೋಗಿಗಳಿಗೂ ಅನುಕೂಲವಾಗಿದೆ.
ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಜನರು ಆಸ್ಪತ್ರೆಗಳಿಗೆ ಓಡಾಡುವುದನ್ನು ತಪ್ಪಿಸಲು ಆನ್‌ಲೈನ್ ಸೇವೆ ಆರಂಭಿಸಲಾಗಿದೆ. ಇದರಿಂದ ಆರೋಗ್ಯ ಸಮಸ್ಯೆ ಇರುವವರು ಆಸ್ಪತ್ರೆಗಾಗಿ ಹೊರಗಡೆ ಓಡಾಡುವುದು ತಪ್ಪುತ್ತದೆ. ಮನೆಯಲ್ಲಿಯೇ ಸೂಕ್ತ ಔಷಧೋಪಚಾರ, ಸಲಹೆ ಸಿಗುತ್ತದೆ.
–ಡಾ|ರಮೇಶ ಮಲ್ಲಾಡದ, ಖಾಸಗಿ ಆಸ್ಪತ್ರೆ
–ಎಚ್.ಕೆ. ನಟರಾಜ