Advertisement

ಖಾಸಗಿ ಬಸ್‌: ಪಾಲನೆ ಆಗದ ಸಾಮಾಜಿಕ ಅಂತರ

12:06 AM Jun 04, 2020 | Sriram |

ಮಂಗಳೂರು: ಮೂರು ದಿನ ಗಳಿಂದ ನಗರದಲ್ಲಿ ಖಾಸಗಿ ಬಸ್‌ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ದೊಡ್ಡ ಸಮಸ್ಯೆಯಾಗಿದೆ.

Advertisement

ಸೀಮಿತ ಸಂಖ್ಯೆಯ ಬಸ್‌ಗಳನ್ನು ರಸ್ತೆಗಿಳಿಸಿರುವ ಕಾರಣ ಬೆಳಗ್ಗೆ ಮತ್ತು ಸಂಜೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಕೆಲವು ಮಾರ್ಗದ ಬಸ್‌ಗಳಲ್ಲಿ ಎಲ್ಲ ಸೀಟುಗಳು ಭರ್ತಿಯಾಗುತ್ತಿವೆ.

ಜಿಲ್ಲೆಯಲ್ಲಿ ಸದ್ಯ 120 ಸಿಟಿ ಬಸ್‌ ಹಾಗೂ ಸುಮಾರು 100ರಷ್ಟು ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಸಾಮಾಜಿಕ ಅಂತರ ಕಾಪಾಡುವ ಬಗ್ಗೆ ಪ್ರಯಾಣಿಕರು ಕೂಡ ಸಾಕಷ್ಟು ಮುತುವರ್ಜಿ ವಹಿಸದಿರುವುದು ಕಂಡು ಬಂದಿದೆ.

ಬಸ್‌ ಮಾಲಕರು ಹೇಳುವುದೇನು ?
ಈಗಾಗಲೇ ಎಲ್ಲ ಬಸ್‌ಗಳ ನಿರ್ವಾಹಕರು ಮತ್ತು ಚಾಲಕರಿಗೆ ಸರಕಾರದ ಸುತ್ತೋಲೆ ಬಗ್ಗೆ ಮಾಹಿತಿ ನೀಡಿ ಅದನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಲಾಗಿದೆ. ಕೆಲವು ಬಸ್‌ಗಳಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡಲಾಗುತ್ತಿಲ್ಲ ಎನ್ನುವುದು ಸತ್ಯ. ಪ್ರಯಾಣಿಕರು ಕೂಡ ಈ ಬಗ್ಗೆ ಗಮನಹರಿಸಬೇಕು. ಕೆಲಸಕ್ಕೆಂದು ಬಂದ ದೂರದ ಊರಿನ ಪ್ರಯಾಣಿಕರನ್ನು ಬಿಟ್ಟು ಹೋಗುವುದಕ್ಕೂ ಆಗುವುದಿಲ್ಲ. ನಿರ್ವಾಹಕರು ಪ್ರಯಾಣಿಕರ ಬಳಿ ಈ ಬಗ್ಗೆ ಹೇಳಿದರೆ ಪ್ರಯಾಣಿಕರೂ ಅವರ ಮಾತು ಕೇಳಲು ತಯಾರಿರುವುದಿಲ್ಲ. ಹೀಗಿರುವಾಗ ನಮ್ಮ ಕಡೆಯಿಂದ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ. ಆಟೋ ರಿಕ್ಷಾ, ಕಾರು, ರೈಲಿನಲ್ಲಿ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ ಎಂದು ಬಸ್‌ ಮಾಲಕರು ಹೇಳುತ್ತಿದ್ದಾರೆ.

30 ಮಂದಿಗೆ 50 ಸಾ.ರೂ.ತೆರಿಗೆ
ರಾಜ್ಯ ಖಾಸಗಿ ಬಸ್‌ ಮಾಲಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಹೇಳುವಂತೆ, “ಸರಕಾರದ ಮಾರ್ಗಸೂಚಿಯಂತೆ ಒಂದು ಬಸ್ಸಿನಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಆದರೆ ರಾಜ್ಯ ಸರಕಾರ ರಸ್ತೆ ತೆರಿಗೆಯಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ. ಮೂರು ತಿಂಗಳ ತೆರಿಗೆ ಒಮ್ಮೆಲೇ ಕಟ್ಟಬೇಕು’ ಎನ್ನುತ್ತಾರೆ.

Advertisement

ನಷ್ಟದಲ್ಲಿ ಕಾರ್ಯಾಚರಣೆ
ಕಳೆದ ಮೂರು ದಿನಗಳಿಂದ ಬಸ್‌ ಸಂಚಾರ ಆರಂಭಗೊಂಡಿದ್ದು, ಸಾರ್ವ ಜನಿಕರಿಗೆ ಪ್ರಯೋಜನವಾಗಲಿ ಎಂದು ನಷ್ಟ ದಲ್ಲಿ ಬಸ್‌ ಓಡಿಸಲಾಗುತ್ತಿದೆ. ಕೆಲವು ಕಡೆ ಸಿಟಿ ಬಸ್‌ಗಳಿಗೆ ದಂಡ ವಿಧಿಸಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಬಸ್‌ ಓಡಿಸುವುದು ಕಷ್ಟವಾಗಬಹುದು. ಬಸ್‌ನಲ್ಲಿ ಸಾಮಾಜಿಕ ಅಂತರದ ಕಾಪಾಡಬೇಕು ಎಂದು ಈಗಾಗಲೇ ತಿಳಿಸಲಾಗಿದೆ. ಸಾರ್ವಜನಿಕರು ಕೂಡ ಸಹಕಾರ ನೀಡಬೇಕು ಎಂದು ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಅವರು ಹೇಳಿದ್ದಾರೆ.

ಮೂಡುಬಿದಿರೆ ವರದಿ
ಮೂಡುಬಿದಿರೆ: ಇಲ್ಲಿಂದ ಮಂಗಳೂರು, ಕಾರ್ಕಳ, ಬಿ.ಸಿ.ರೋಡ್‌, ಶಿರ್ತಾಡಿ, ವೇಣೂರು ಮೊದಲಾದ ಕಡೆಗಳಿಗೆ ಇರುವ ಬಸ್ಸುಗಳ ಪೈಕಿ ಶೇ. 20ರಿಂದ 25ರಷ್ಟು ಮಾತ್ರ ರಸ್ತೆಗಿಳಿದಿದ್ದು, ಪ್ರಯಾಣಿಕರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಮುಂದಿನ ಸೋಮವಾರದಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಬಹುದು ಎಂದು ಹಿರಿಯ ಸಾರಿಗೆ ಉದ್ಯಮಿಗಳು ಅಭಿಪ್ರಾಯ ಪಡುತ್ತಾರೆ.

ಅರ್ಧದಷ್ಟು ಬಸ್‌ಗಳು ರಸ್ತೆಗಿಳಿದಿಲ್ಲ
ನಗರದಲ್ಲಿ ಸುಮಾರು 200ರಷ್ಟು ಬಸ್ಸುಗಳು ಇನ್ನೂ ರಸ್ತೆಗಿಳಿದಿಲ್ಲ. ಬಸ್‌ ಓಡಿಸಿದರೆ ಈ ತಿಂಗಳ ಪೂರ್ತಿ ರಸ್ತೆ ತೆರಿಗೆ ಕಟ್ಟಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಿಟಿ ಬಸ್‌ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಪ್ರಯಾಣಿಕರ ಸಂಖ್ಯೆ ತುಸು ಏರಿಕೆಯಾಗಿದೆಯೇ ಹೊರತು ಮಧ್ಯಾಹ್ನ ಖಾಲಿ ಸಂಚರಿಸುತ್ತಿವೆ. ಹೀಗಿರುವಾಗ, ನಷ್ಟ ಮಾಡಿ ಬಸ್‌ ಕಾರ್ಯಾಚರಣೆ ನಡೆಸಲು ಬಸ್‌ ಮಾಲಕರು ಒಪ್ಪುತ್ತಿಲ್ಲ.

ಪ್ರಯಾಣಿಕರಿಗೆ ಟಿಪ್ಸ್‌
– ಪ್ರಯಾಣಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ.
– ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲನೆ ಮಾಡಿ.
– ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ.
– ನಗರದಲ್ಲಿ ಅನಗತ್ಯವಾಗಿ ತಿರುಗಾಡಬೇಡಿ.
– ಬಸ್‌ ಪ್ರಯಾಣದ ಬಳಿಕ ಸ್ಯಾನಿಟೈಸರ್‌ ಬಳಸಿ
– ಸ್ವಂತ ವಾಹನ ಬಳಕೆ ಹೆಚ್ಚು ಮಾಡಿ.

ಸೂಚನೆ ನೀಡುತ್ತೇವೆ
ಸಿಟಿ ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿಲ್ಲ ಎಂಬ ದೂರು ಬಂದಿದೆ. ಈ ಬಗ್ಗೆ ಬಸ್‌ ಮಾಲಕರಿಗೆ ಎಚ್ಚರಿಕೆ ನೀಡುತ್ತೇವೆ. ಮಾರ್ಗಸೂಚಿ ಪಾಲನೆ ಮಾಡದಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಬಸ್‌ಗಳಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ಮಾಸ್ಕ್ ಹಾಕದ ಪ್ರಯಾಣಿಕರಿಗೆ ಸಂಚಾರಕ್ಕೆ ಅವಕಾಶ ನೀಡಬಾರದು.
 -ಆರ್‌.ಎಂ. ವರ್ಣೇಕರ್‌
ಮಂಗಳೂರು ಆರ್‌ಟಿಒ

ಉಳ್ಳಾಲ: ಬಸ್‌ಗಳಿಗೆ ದಂಡ ವಸೂಲು
ಉಳ್ಳಾಲ: ಕೋವಿಡ್-19 ಮುಂಜಾಗೃತ ಕ್ರಮದ‌ ಆದೇಶವನ್ನು ಉಲ್ಲಂಘಿಸಿ ಮಿತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುತ್ತಿದ್ದ ತಲಪಾಡಿ, ಕೊಣಾಜೆ , ಉಳ್ಳಾಲ ಕಡೆಗೆ ಚಲಿಸುವ ಸುಮಾರು 15ರಷ್ಟು ಬಸ್ಸುಗಳನ್ನು ಮಂಗಳವಾರ ತಡೆದ ನಾಗುರಿ ಸಂಚಾರಿ ಠಾಣಾ ಪೊಲೀಸರು ಜಪ್ಪು ನೇತ್ರಾವತಿ ಸೇತುವೆ ಬಳಿ ಮತ್ತು ನಾಟೆಕಲ್‌ ಸಮೀಪ ದಂಡ ವಿಧಿಸಿದರು.

ಬೆಳಗ್ಗೆ ಸಂಚಾರಿ ಪೊಲೀಸರು ತೊಕ್ಕೊಟ್ಟು ಭಾಗದಿಂದ ಬರುವ ಬಸ್ಸುಗಳನ್ನು ಪಂಪ್‌ವೆಲ್‌ ಬಳಿ ನಿಲ್ಲಿಸಿ ಹೆಚ್ಚುವರಿ ಪ್ರಯಾಣಿಕರನ್ನು ಇಳಿಸಿದರು. ಸಂಜೆ ಹೊತ್ತಿಗೆ ಜಪ್ಪು ಸೇತುವೆ ಮತ್ತು ನಾಟೆಕಲ್‌ ಬಳಿ 15ರಷ್ಟು ಖಾಸಗಿ ಬಸ್ಸುಗಳನ್ನು ತಡೆದು ದಂಡ ವಿಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next