ಧಾರವಾಡ: ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮತ್ತು ರೈತರನ್ನು ಆರ್ಥಿಕ ಸ್ವಾವಲಂಬಿ ಮಾಡಲು ಇತರೆ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಮನ್ಸೂರು ಗ್ರಾಮವನ್ನು ಬೀಜ ಗ್ರಾಮವಾಗಿ ರೂಪಿಸಲಾಗುವುದೆಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪೊ| ಪ್ರಮೋದ ಗಾಯಿ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ದತ್ತು ಗ್ರಾಮ ಮನ್ಸೂರದ ಕಲ್ಮೇಶ್ವರ ದೇವಸ್ಥಾನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಧಾರವಾಡದ ಸರ್ಪನ್ ಹೈಬ್ರಿಡ್ ಸಿಡ್ಸ್ ಕಂಪನಿ ಸಹಯೋಗದಲ್ಲಿ ನಡೆದ ರೈತರಿಗೆ ಬೀಜ ಹಾಗೂ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮದ ರೈತರಿಗೆ ಅನುಕೂಲವಾಗುವಂತೆ ಅವರ ಜಮೀನಿಗೆ ಹೊಂದಿಕೆಯಾಗುವ ಬೆಳೆ ಬೆಳೆಯಲು ಅಗತ್ಯವಿರುವ ಬೀಜ ಹಾಗೂ ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಸರ್ಪನ್ ಹೈಬ್ರಿಡ್ ಸಿಡ್ಸ್ ಕಂಪನಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಗಳಿಸಿದೆ.
ವಿವಿಧ ಹವಾಮಾನುಕ್ಕೆ ಹೊಂದಿಕೆಯಾಗುವಂತ ರೈತರಿಗೆ ಅನುಕೂಲವಾಗುವ ಅನೇಕ ಹೊಸ ತಳಿಗಳನ್ನು ಸಂಶೋಧನೆ ಮಾಡಿದೆ. ತಮ್ಮ ಸಾಮಾಜಿಕ ಹೊಣೆಗಾರಿಕೆ ಪೂರೈಸಲು ನಮ್ಮೊಂದಿಗೆ ಸರ್ಪನ್ ಸಿಡ್ಸ್ ಕಂಪನಿ ಕೈ ಜೋಡಿಸಿದೆ. ರೈತರು ನಂಬಿಕೆ ಮತ್ತು ಪ್ರಾಮಾಣಿಕತೆಯಿಂದ ಕೃಷಿಯಲ್ಲಿ ತೊಡಗಿಸಿಕೊಂಡರೆ ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಸರ್ಪನ್ ಸಿಡ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ| ಎನ್.ಬಿ. ಗದ್ದಗಿಮಠ ಮಾತನಾಡಿ, ರೈತರು ಕೃಷಿಯಲ್ಲಿ ಇಳುವರಿಗೆ ಆದ್ಯತೆ ನೀಡಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಬೇಸಾಯ ಮಾಡುತ್ತಿದ್ದಾರೆ. ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮಾತನಾಡಿ, ಸರಕಾರವು ಕೃಷಿ ಮತ್ತು ರೈತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕೃಷಿ ಹೊಂಡ, ನೀರಿನ ಉಳಿತಾಯ, ಬೀಜ, ಗೊಬ್ಬರ ವಿತರಣೆ, ಬಾಡಿಗೆ ಯಂತ್ರಗಳ ಪೂರೈಕೆ ಕೇಂದ್ರ, ರಾಶಿ ಯಂತ್ರ ಮುಂತಾದವುಗಳನ್ನು ರಿಯಾಯತಿ ದರದಲ್ಲಿ ರೈತರಿಗೆ ನೀಡಲಾಗುತ್ತದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ರುಕ್ಮಿಣಿ ತೇಗೂರ, ಗ್ರಾಮದ ಪ್ರಮುಖರಾದ ಮಲ್ಲನಗೌಡ ಗೌಡರ ಮಾತನಾಡಿದರು. ಕೃಷಿ ಅ ಧಿಕಾರಿ ಶಾಂತವ್ವ ಗಾಳಿ, ಗ್ರಾಪಂ ಸದಸ್ಯರಾದ ಯಲ್ಲವ್ವ ಕೂಡಲಗಿ, ಕರಿಯಪ್ಪ ಯತ್ತಿನಗುಡ್ಡ ಇದ್ದರು. ಸಿದ್ದಪ್ಪ ಹಡಪದ ಸ್ವಾಗತಿಸಿದರು. ಡಾ| ಸುರೇಶ ಹಿರೇಮಠ ನಿರೂಪಿಸಿದರು. ಹಾಲಪ್ಪ ಕುರಬರ ವಂದಿಸಿದರು.