Advertisement

ಕುಡಿವ ನೀರಿನ ಯೋಜನೆಗೆ ಆದ್ಯತೆ ನೀಡಿ

02:26 PM Sep 01, 2017 | |

ಶಿವಮೊಗ್ಗ: ಕುಡಿಯುವ ನೀರಿನ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಗುರುವಾರ ನಡೆದ ತಾಲೂಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಕೇಳಿಬಂತು.

Advertisement

ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸದಸ್ಯ ಗಿರೀಶ್‌ ಮಾತನಾಡಿ, ವಿವಿಧ ಶೀರ್ಷಿಕೆಯಡಿ ಕೊಳವೆ ಬಾವಿ ಕೊರೆಸಲಾಗಿದೆ. ಆದರೆ ಇದುವರೆಗು ವಿದ್ಯುತ್‌ ಸಂಪರ್ಕ ನೀಡಿಲ್ಲ. ಪೈಪ್‌ಲೈನ್‌ ಕಾಮಗಾರಿ ಸರಿಯಾಗಿ ನಡೆಸಿಲ್ಲ ಎಂದು ಆರೋಪಿಸಿದರು. ನೀರು ಸರಬರಾಜು ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೊಮ್ಮನಾಳು ಗ್ರಾಮದಲ್ಲಿ ತರಾತುರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಲಾಗಿದೆ. ಉದ್ಘಾಟಿಸಿದ 3 ದಿನಗಳಲ್ಲಿಯೇ
ಹಾಳಾಗಿದೆ ಎಂದು ದೂರಿದರು.

ಇದಕ್ಕೆ ಉತ್ತರಿಸಿದ ನೀರು ಸರಬರಾಜು ಇಲಾಖೆಯ ಮುಖ್ಯ ಇಂಜಿನಿಯರ್‌ ಹರೀಶ್‌, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಹೀಗಾಗಿ ಎಲ್ಲೆಲ್ಲಿ ಕುಡಿಯುವ ನೀರಿನ ಅಗತ್ಯವಿದೆಯೋ ಅಂತಹ ಕಡೆಗಳಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಿದರೆ ಅದನ್ನು ಸರ್ಕಾರಕ್ಕೆ ಕಳಿಸಿ ಅನುಮೋದನೆ ಪಡೆಯಲಾಗುತ್ತದೆ ಎಂದರು. ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುವಾಗ ಹಾಗೂ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆ ಮಾಡುವಾಗ ತಮ್ಮ ಗಮನಕ್ಕೂ ತರುತ್ತಿಲ್ಲ. ಇದರಿಂದಾಗಿ ಅರ್ಹರಿಗೆ ಸೌಲಭ್ಯ ಕೊಡಿಸಲು
ಸಾಧ್ಯವಾಗುತ್ತಿಲ್ಲ ಎಂದು ತಾಪಂನ ಕೆಲ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದಿಂದಲೇ ನೇರವಾಗಿ ಫಲಾನುಭವಿಗಳ ಅಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ನಾವೇನು ಜನಪ್ರತಿನಿಧಿಗಳು ಅಲ್ಲವೇ? ಕ್ಷೇತ್ರದ ಜನತೆ ಪ್ರಶ್ನೆ ಮಾಡುತ್ತಾರೆ. ಏನು ಉತ್ತರ ಕೊಡಬೇಕು ? ಎಂದು ಪ್ರಶ್ನಿಸಿದರು. ಕೋಳಿ, ದನ, ಕುರಿ ಸಾಕಣೆ ಮಾಡುವಂತಹ ಫಲಾನುಭವಿಗಳಿಗೂ ಒಂದು ಸೌಲಭ್ಯ ಕೊಡಸಲು ಆಗುತ್ತಿಲ್ಲ. ಎಲ್ಲವನ್ನು ಶಾಸಕರ ನೇತೃತ್ವದ ಸಮಿತಿ, ಸರ್ಕಾರದ ಮಟ್ಟದಲ್ಲಿ ಮಾಡುವುದಾದರೆ ನಮಗೇನು
ಕೆಲಸ. ಇಲ್ಲಿ ಬಿಸ್ಕೆಟ್‌ ತಿಂದು, ಚಹ ಕುಡಿದು ಹೋಗಲು ಬರಬೇಕೆ ? ಫೋನ್‌ ಮಾಡಿದರೆ ಅಧಿಕಾರಿಗಳು ಕೂಡ ದೂರವಾಣಿ ಕರೆ ಸ್ವೀಕರಿಸಿ ಸರಿಯಾದ ಉತ್ತರ ನೀಡುತ್ತಿಲ್ಲ. ಕೆಲವು ಯೋಜನೆಳ ಕುರಿತು ಮಾಹಿತಿ ಇಲ್ಲವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ವೈದ್ಯರಿಲ್ಲ: ಆಯನೂರು ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ಸೇವೆ ನೀಡುವುದಾಗಿ ಹೇಳಲಾಗಿದೆ. ಆದರೆ ಅಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರೇ ಇರುವುದಿಲ್ಲ. ಶಸ್ತ್ರ ಚಿಕಿತ್ಸಾ ಕೊಠಡಿ ಇದ್ದರೂ ಪ್ರಯೋಜನ ಸಿಗುತ್ತಿಲ್ಲ ಎಂದು ಅಲ್ಲಿನ ಗ್ರಾಪಂ ಅಧ್ಯಕ್ಷರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ತಾಲೂಕು ವೈದ್ಯಾಧಿಕಾರಿ ಅಲ್ಲಿದ್ದ ವೈದ್ಯರು ವರ್ಗಾವಣೆಯಾಗಿದ್ದಾರೆ. ಹೀಗಾಗಿ ವೈದ್ಯರ ಕೊರತೆ ಇತ್ತು. ಈಗ ಹಾರನಹಳ್ಳಿ ಹಾಗೂ ಚೋರಡಿ ಆಸ್ಪತ್ರೆಯ ವೈದ್ಯರನ್ನು ರಾತ್ರಿ ಪಾಳಿಗೆ ನಿಯೋಜನೆ ಮಾಡಲಾಗಿದೆ ಎಂದು ಉತ್ತರಿಸಿದರು.

Advertisement

ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ಕೇಂದ್ರ ಆರಂಭಿಸಲು ಸರ್ಕಾರ ಆಸಕ್ತವಾಗಿದೆ. ಆದರೆ ಅರವಳಿಕೆ ತಜ್ಞರಲಭ್ಯತೆ ಇಲ್ಲ. ತಜ್ಞರನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ಜಾಹೀರಾತು ನೀಡಲಾಗಿತ್ತಾದರೂ ವೈದ್ಯರು ಬಂದಿಲ್ಲ ಎಂದರು.  ಲೂಕಿನಲ್ಲಿ ಡೆಂಘೀ ಪ್ರಕರಣಗಳು  ಹೆಚ್ಚುತ್ತಿದ್ದು ಸ್ವತ್ಛತೆ ಇಲ್ಲವಾಗಿದೆ. ಫಾಗಿಂಗ್‌ ಕಾರ್ಯ ನಡೆಸುತ್ತಿಲ್ಲ ಎಂಬ ಸದಸ್ಯರ ಆರೋಪಕ್ಕೆ ಉತ್ತರಿಸಿದ ತಾಲೂಕು ವೈದ್ಯಾಧಿಕಾರಿ ಡಾ| ದಿನೇಶ್‌, ಇಲಾಖೆಯಲ್ಲಿ ಒಂದೇ ಒಂದು ಫಾಗಿಂಗ್‌ ಯತ್ರವಿದೆ. ಹೀಗಾಗಿ ಸಣ್ಣ ಸಣ್ಣ ಗ್ರಾಮಗಳಲ್ಲಿ ಫಾಗಿಂಗ್‌ ಮಾಡಲು ಸಾಧ್ಯವಿಲ್ಲ.

ಗ್ರಾಪಂಗಳಲ್ಲಿ ಫಾಗಿಂಗ್‌ ಯಂತ್ರ ಖರೀದಿಸಿದರೆ ಅದಕ್ಕೆ ಬೇಕಾದ ರಾಸಾಯನಿಕ ಪೂರೈಸುವುದಾಗಿ ಹೇಳಿದರು. ಸಭೆಯಲ್ಲಿ ತೋಟಗಾರಿಕೆ, ಹೈನುಗಾರಿಕೆ, ಕೃಷಿ ಮೊದಲಾದ ಇಲಾಖೆಗಳ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಉಪಾಧ್ಯಕ್ಷೆ ನಿರ್ಮಲಾ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಮುನಿರತ್ನ , ಇಒ ಸದಾಶಿವ, ಸಹಾಯಕ ಲೆಕ್ಕಾಧಿಕಾರಿ ಶಿವಾನಂದರಾವ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next