Advertisement

ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ

03:30 PM May 01, 2022 | Team Udayavani |

ಹೊಸಪೇಟೆ: ಜಿಲ್ಲೆಯಲ್ಲಿ ಪ್ರತ್ಯಕ್ಷ ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಪರೋಕ್ಷ ಗಣಿಬಾಧಿತವಾಗಿರುವ ಉಳಿದ ತಾಲೂಕುಗಳ ಸಮಾನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಡಿಎಂಎಫ್‌ ಗೌರ್ನಿಂಗ್‌ ಕೌನ್ಸಿಲ್‌ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಜಯನಗರ ಜಿಲ್ಲೆಯಲ್ಲಿ ತಾಲೂಕಿನಲ್ಲಿ ಶೇ.37.84, ಹರಪನಹಳ್ಳಿ-ಶೇ.26.20, ಕೂಡ್ಲಿಗಿ-ಶೇ.12.29, ಹಗರಿಬೊಮ್ಮನಹಳ್ಳಿ ಮತ್ತು ಕೊಟ್ಟೂರು-ಶೇ.14.04, ಕೂಡ್ಲಿಗಿ-ಶೇ.12.29 ಹೂವಿನಹಡಗಲಿ-ಶೇ.9.63ರಷ್ಟು ಜನರು ಗಣಿ ಚಟುವಟಿಕೆಗಳಿಂದ ಬಾಧಿತರಾಗಿದ್ದು, ಈ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಡಿಎಂಎಫ್‌ ಅಡಿ 2016-17ರಿಂದ 2021-22ರವರೆಗೆ ಒಟ್ಟು 6 ಕ್ರಿಯಾಯೋಜನೆಗಳು ಮಂಜೂರಾಗಿದ್ದು, ಅವಿಭಜಿತ ಬಳ್ಳಾರಿ ಜಿಲ್ಲೆಗೆ 267794.76ಲಕ್ಷ ರೂ. ಹಂಚಿಕೆ ಮಾಡಲಾಗಿದ್ದು, ಅದರಲ್ಲಿ ಶೇ.10ರಷ್ಟು ದತ್ತಿನಿಧಿಗಾಗಿ ಮತ್ತು ಆಡಳಿತಾತ್ಮಕ ವೆಚ್ಚಕ್ಕಾಗಿ ಶೇ.5ರಷ್ಟು ಕಾಯ್ದಿರಿಸಿ 222215.51ಲಕ್ಷ ರೂ.ಗಳ ಕ್ರಿಯಾಯೋಜನೆ ಸಿದ್ದಪಡಿಸಲಾಗಿತ್ತು. ವಿಜಯನಗರ ಜಿಲ್ಲೆಗೆ 63126.56ಲಕ್ಷ ರೂ. ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದರು.

ಪ್ರಸ್ತುತ ಬಳ್ಳಾರಿಯಿಂದ ವಿಜಯನಗರ ಜಿಲ್ಲೆಗೆ ಜಿಲ್ಲಾ ಖನಿಜ ನಿಧಿಯ ಅನುದಾನ ಈಗಾಗಲೇ 105 ಕೋಟಿ ರೂ. ವರ್ಗಾವಣೆ ಆಗಿದೆ. ಅಲ್ಲದೆ, ಕಳೆದ 6 ತಿಂಗಳಲ್ಲಿ ಸುಮಾರು 21 ಕೋಟಿಗಳಷ್ಟು ಸಂಗ್ರಹವಾಗಿದೆ. ವಿವಿಧ ಹಂತಗಳಲ್ಲಿ ಇನ್ನೂ ಕೂಡಾ ಹಣ ವರ್ಗಾವಣೆ ಆಗುತ್ತಿದೆ. ಇದರಲ್ಲಿ ಈಗಾಗಲೇ 29 ಕೋಟಿ ರೂ. ಗಳಷ್ಟು ಹಣವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಮಾಡಿದ್ದೇವೆ ಎಂದರು.

Advertisement

ಜಿಲ್ಲಾ ಖನಿಜ ನಿಧಿ ಅಡಿಯಲ್ಲಿ ಜಿಲ್ಲೆಯಲ್ಲಿ ಸುಮಾರು 1113 ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿತ್ತು. ಅದರಲ್ಲಿ ಈಗಾಗಲೇ 568 ಯೋಜನೆಗಳು ಮುಕ್ತಾಯಗೊಂಡಿದ್ದು ಉಳಿದ ಯೋಜನೆಗಳೂ ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದ ಅವರು, ಗ್ರಾಮೀಣ ಜನರಿಗೆ ಆರೋಗ್ಯ ಸೌಲಭ್ಯ, ಶುದ್ಧ ಕುಡಿಯುವ ನೀರು, ಶಿಕ್ಷಣ ಸೌಲಭ್ಯ, ಉತ್ತಮ ರಸ್ತೆ, ಅಗತ್ಯ ಸಾರಿಗೆ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 136.28 ಕೋಟಿ ಅನುದಾನ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಯಡಿ 2022-23ನೇ ಸಾಲಿನಲ್ಲಿ ಮೈಕ್ರೋ-95.40 ಕೋಟಿ, ಮ್ಯಾಕ್ರೋ 40.88 ಕೋಟಿ ರೂ. ಸೇರಿದಂತೆ ಒಟ್ಟು 136.28 ಕೋಟಿ ರೂ.ಗಳ ಅನುದಾನ ಹಂಚಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್‌ ಮಾಹಿತಿ ನೀಡಿದರು.

40.88ಕೋಟಿ ರೂ. ಮ್ಯಾಕ್ರೋ ಅನುದಾನದಡಿ ಜಿಲ್ಲೆಯಲ್ಲಿ ಪರಿಣಾಮ ಬಿರುವಂತ ಯೋಜನೆಗಳನ್ನು ರೂಪಿಸಲು ಸೂಚಿಸಲಾಗಿದ್ದು, ಅದರಂತೆ 10 ಕೋಟಿ ರೂ.ವೆಚ್ಚದಲ್ಲಿ ವಿಜಯಿಭವ ಯೋಜನೆ ರೂಪಿಸಿ ಅದರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಶಾಲೆಗಳಿಗೆ ಸ್ಮಾರ್ಟ್‌ ಕ್ಲಾಸ್‌, ಗ್ರಂಥಾಲಯ ಸೌಲಭ್ಯ ಸೇರಿ ಇನ್ನಿತರ ಕ್ರಮ ಕೈಗೊಳ್ಳಲಾಗುತ್ತಿದೆ.

ಕರಕುಶಲ ಕಾರ್ಮಿಕರಿಗೆ, ಗುಡಿಕೈಗಾರಿಕೆದಾರರ ಮಾರುಕಟ್ಟೆಗೆ ಅನುಕೂಲವಾಗಲು 3ಕೋಟಿ ರೂ. ವೆಚ್ಚದಲ್ಲಿ ಕೌಶಲ್ಯ ಕೇಂದ್ರ, ಜಿಲ್ಲಾ ಕ್ರೀಡಾಂಗಣ ನಿರ್ಮಾಣ, ಗುಡೇಕೋಟೆ, ಕಮಲಾಪುರ, ಹೊಸಪೇಟೆ ಮತ್ತು ಕೊಟ್ಟೂರು ಹೋಬಳಿಗಳಲ್ಲಿ ರೈತ ಸಂಪರ್ಕ ಕೇಂದ್ರಗಳ ಸ್ಥಾಪನೆ, ವಿಜಯನಗರ ಸ್ತ್ರೀಶಕ್ತಿ ಭವನ, ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡುವ ಜಿಲ್ಲೆಯ ಹಂಪಿ ಹಾಗೂ ಐತಿಹಾಸಿಕ ಮಾಹಿತಿಯುಳ್ಳ ಮಾಹಿತಿ ಕೇಂದ್ರ, ಅಮರಾವತಿ ಅತಿಥಿಗೃಹದ ಮೇಲ್ಭಾಗದಲ್ಲಿ ವಿಐಪಿಗಳ ಆತಿಥ್ಯಕ್ಕೆ ಮತ್ತೂಂದು ಹಂತದ ಸುಸಜ್ಜಿತ ಕೋಣೆಗಳ ನಿರ್ಮಾಣ ಸೇರಿದಂತೆ ವಿವಿಧ ವಿಶಿಷ್ಟ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ವಿವರಿಸಿದರು.

ಅನುದಾನ ಹಂಚಿಕೆ ಸಮಸ್ಯೆ, ಮುಖ್ಯ ಮಂತ್ರಿಗಳೊಂದಿಗೆ ಚರ್ಚೆ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಡಿ ನಂಜುಂಡಪ್ಪ ವರದಿ ಹಾಗೂ ಸಿಡಿಆರ್‌ ಸೂಚ್ಯಂಕದ ಆಧಾರದ ಮೇಲೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದ್ದು, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಸಭೆ ಏರ್ಪಡಿಸುವಂತೆ ಸಂಸದ ಜಿ.ಎಂ. ಸಿದ್ಧೇಶ್ವರ, ಶಾಸಕರಾದ ಪಿ.ಟಿ. ಪರಮೇಶ್ವರ ನಾಯಕ್‌, ಜಿ.ಕರುಣಾಕರರೆಡ್ಡಿ, ಎನ್‌.ವೈ. ಗೋಪಾಲಕೃಷ್ಣ, ಭೀಮಾನಾಯಕ್‌, ಎಸ್‌.ವಿ. ರಾಮಚಂದ್ರ, ವೈ.ಎಂ. ಸತೀಶ ಒತ್ತಾಯಿಸಿದರು.

ಸಂಸದರು ಹಾಗೂ ಶಾಸಕರ ಅಹವಾಲು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಮೇ5 ರಂದು ಕ್ಯಾಬಿನೆಟ್‌ ಸಭೆಯಿದ್ದು, ಸಿಎಂ ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವುದು ಎಂದರು.

ನಗರೋತ್ಥಾನ ಯೋಜನೆ ಅಡಿ ಜಿಲ್ಲೆಗೆ 90 ಕೋಟಿ ರೂ.ಗಳು ಮಂಜೂರಾಗಿದ್ದು, ಅದರಡಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು.

ಸಂಸದ ಜಿ.ಎಂ. ಸಿದ್ಧೇಶ್ವರ, ಶಾಸಕರಾದ ಪಿ.ಟಿ. ಪರಮೇಶ್ವರ ನಾಯಕ್‌, ಜಿ.ಕರುಣಾಕರರೆಡ್ಡಿ, ಎನ್‌. ವೈ. ಗೋಪಾಲಕೃಷ್ಣ, ಭೀಮಾನಾಯಕ್‌, ಎಸ್‌.ವಿ. ರಾಮಚಂದ್ರ, ವೈ.ಎಂ. ಸತೀಶ, ಎಸ್ಪಿ ಡಾ| ಅರುಣ ಕೆ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next