ಕುಣಿಗಲ್: ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಸ್ನಾನಕ್ಕೆ ಹೋಗಲು, ಉತ್ತಮ ಪರಿಸರ, ನುರಿತ ಶಿಕ್ಷಕರು ಹಾಗೂ ಮೂಲಭೂತ ಸೌಲಭ್ಯ ಅತ್ಯಗತ್ಯವಾಗಿದೆ. ಹೀಗಾಗಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ಹೇಳಿದರು. ಪಟ್ಟಣದಲ್ಲಿ ಶನಿವಾರ 1.75 ಕೋಟಿ ರೂ. ವೆಚ್ಚದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಆಧುನಿಕ ಯುಗದಲ್ಲಿ ಶಿಕ್ಷಣ ಕ್ಷೇತ್ರ ಅತಿವೇಗವಾಗಿ ಬೆಳೆಯುತ್ತಿದೆ. ಶ್ರೀಮಂತರ, ಉನ್ನತ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಮಕ್ಕಳು ಪೋಷಕರು ಕೋಟ್ಯಂತರ ರೂ. ಖರ್ಚು ಮಾಡಿ ವಿದ್ಯಾಭ್ಯಾಸ ಕೊಡುತ್ತಿದ್ದಾರೆ. ಆದರೆ ಆರ್ಥಿಕ ಸಂಕಷ್ಟದಲ್ಲಿ ಇರುವ ಗ್ರಾಮೀಣ ಪ್ರದೇಶದ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದೆ.
ಗುಣಮಟ್ಟದ ಶಿಕ್ಷಣ ಹಾಗೂ ವಸತಿ ನಿಲಯ, ಊಟ, ಉಪಾಹಾರ, ಪಠ್ಯ ಪುಸ್ತಕ, ಕಂಪ್ಯೂಟರ್ ಮೊದಲಾದ ಮೂಲಸೌಲಭ್ಯ ದೊರಕಿಸಿ ಕೊಡುತ್ತಿದೆ. ಈ ಸೌಲಭ್ಯ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ತಲುಪಿಸುವ ದಿಸೆಯಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಬಿಸಿಎಂ ಹಾಸ್ಟೆಲ್ ಕಟ್ಟಡಕ್ಕೆ 1.75 ಕೋಟಿ ರೂ. ಮಂಜೂರು ಮಾಡಿಸಿದೆ. ಆ ಅನುದಾನದಲ್ಲಿ ಇಂದು ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.
2 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, 7 ಕೊಠಡಿ, ಅಡುಗೆ ಮನೆ, ಊಟದ ಕೋಣೆ, 8 ಸ್ನಾನದ ಗೃಹ, 8 ಶೌಚಗೃಹ, ಗ್ರಂಥಾಲಯ ಒಳಗೊಂಡಿರುತ್ತದೆ. ಕಟ್ಟಡ ಪೂರ್ಣಗೊಂಡ ಬಳಿಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉತ್ತಮ ಕಟ್ಟಡವಾಗಲಿದೆ. ಈ ಕಟ್ಟಡ ತುಮಕೂರು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಗುಣಮಟ್ಟದ ಕಾಮಗಾರಿ ಮಾಡಿಸಬೇಕೆಂದು ಸೂಚಿಸಿದರು.
ಮಕ್ಕಳ ಭವಿಷ್ಯ ಉತ್ತಂಗಕ್ಕೆ ಬರಬೇಕು: ಮಕ್ಕಳು ನಾಡಿನ ಸಂಪತ್ತು. ಹೀಗಾಗಿ ಶಿಕ್ಷಕರು, ಪೋಷಕರು, ಹಾಸ್ಟೆಲ್ ಮೇಲ್ವಿಚಾರಕರು ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ವಿದ್ಯಾಭ್ಯಾಸದ ಜತೆಗೆ ಅಗತ್ಯವಿರುವ ಸೌಲಭ್ಯ ಕೊಡುವತ್ತ ಗಮನ ಹರಿಸಬೇಕು. ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ, ಕಂಪ್ಯೂಟರ್ ಕಲಿಸುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು. ಪುರಸಭೆ ಸದಸ್ಯರಾದ ಕೆ.ಆರ್.ಜಯಲಕ್ಷ್ಮೀ, ರೂಪಿಣಿ, ಉದಯಕುಮಾರ್, ದೇವರಾಜ್, ವಿಸ್ತಾರಣಾಧಿಕಾರಿ ಪಾರ್ವತವ್ವ, ಪುರಸಭೆ ಮಾಜಿ ಅಧ್ಯಕ್ಷ ರೆಹಮಾನ್ ಷರೀಪ್, ಸದಸ್ಯ ಚಂದ್ರಶೇಖರ್, ಗುತ್ತಿಗೆದಾರ ಮಂಜುನಾಥ್ ಇದ್ದರು.
ಕೊರೊನಾ ಭಯಬೇಡ: ನಾನು ಶಾಸಕನಾಗಿದ್ದರೂ ವೃತ್ತಿಯಲ್ಲಿ ವೈದ್ಯನಾಗಿದ್ದೇನೆ. ಕೊರೊನಾ ವೈರಸ್ ಎದುರಿಸುವ ಶಕ್ತಿ ಆಧುನಿಕ ಜಗತ್ತಿಗೆ ಇದೆ. ರೋಗ ತಡೆಗಟ್ಟಲು ರಾಜ್ಯ ಸರ್ಕಾರ ಕೈಗೊಂಡಿರುವ ಎಲ್ಲಾ ಕ್ರಮಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಈ ಸಂಬಂಧ ಎಲ್ಲಾ ರೀತಿ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಅಲ್ಲದೆ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮ ತಾಲೂಕಿನಾದ್ಯಂತ ಹಮ್ಮಿಕೊಂಡಿದೆ. ಇದಕ್ಕೆ ಜನರು ಸಹಕಾರ ನೀಡುವುದರ ಜತೆಗೆ ನಿಮ್ಮ ಸುತ್ತಮುತ್ತಲಿನ ಪರಿಸರ ಸ್ವತ್ಛವಾಗಿಟ್ಟುಕೊಂಡು ರೋಗ ತಡೆಗಟ್ಟುವ ಕೆಲಸ ಮಾಡಬೇಕು ಎಂದು ಹೇಳಿದರು.