Advertisement

ವಿದ್ಯುತ್‌ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿ  

06:02 PM Mar 30, 2022 | Team Udayavani |

ಕಾರವಾರ: ಸಾರ್ವಜನಿಕ ಸ್ಮಶಾನ ಭೂಮಿ ಸಮಸ್ಯೆ, ಗನ್‌ ಲೈಸೆನ್ಸ್‌ ನವೀಕರಣ, ಗೋಮಾಳ, ಪಿಂಚಣಿ, ರೇಶನ್‌ ಕಾರ್ಡ್‌, ಆಧಾರ ಕಾರ್ಡ್‌ ದೊರೆಯದೇ ಇರುವ ಮತ್ತು ಫಾರ್ಮ್ 57 ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಮೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ಆದೇಶಿಸಿದರು.

Advertisement

ಅವರು ಡಿಸಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಏ.16 ರ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ವೀಡಿಯೋ ಕಾನ್ಫರೆನ್ಸ್‌ ಮೂಲಕ ನಡೆಸಿ ಮಾತನಾಡಿದರು. ಕಂದಾಯ ಸಚಿವರ ಗ್ರಾಮ ವಾಸ್ತವ್ಯ, ಸಚಿವರು ವಾಸ್ತವ್ಯ ಮಾಡುವ ಗ್ರಾಮಕ್ಕೆ ಮಾತ್ರ ಸೀಮಿತವಾಗಿಲ್ಲ, ಜಿಲ್ಲೆಯ ಎಲ್ಲ ಗ್ರಾಮಗಳನ್ನು ಅದು ಅಂದು ಪ್ರತಿನಿಧಿಸುತ್ತದೆ. ಆದ್ದರಿಂದ ಎಲ್ಲ ಇಲಾಖೆಗಳು ಭಾಗವಹಿಸಬೇಕು ಮತ್ತು ಆಯಾ ಇಲಾಖೆಗಳು ವಿವಿಧ ಯೋಜನೆಗಳ ಫಲಾನುಭವಿಗಳನ್ನು ತರಬೇಕು. ಇದಕ್ಕಾಗಿ ಗ್ರಾಮಗಳಲ್ಲಿ ಯಾವ ಅರ್ಹ ಫಲಾನುಭವಿಗೆ ಪಿಂಚಣಿ ಸಿಗುತ್ತಿಲ್ಲ ಮತ್ತು ನಿಂತು ಹೋಗಿದೆ, ಯಾವ ಮನೆಗೆ ವಿದ್ಯುತ್‌ ಸೌಕರ್ಯವಿಲ್ಲ ಎಂಬುದನ್ನು ಮತ್ತು ವಿಕಲಚೇತನರ ಕುರಿತು ಏ.5 ಅಥವಾ 6 ರೊಳಗೆ ಸಮೀಕ್ಷೆ ಮಾಡಿ, ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯವನ್ನು ಸಚಿವರಿಂದ ಕೊಡಿಸುವ ಕಾರ್ಯವಾಗಬೇಕು ಎಂದರು.

ಜನ ಸೇವೆಗಳಿಗೆ ಸಂಬಂಧಿಸಿದ ಗ್ರಾಮ ಒನ್‌ ಸೆಂಟರ್‌ ಮುಖ್ಯಮಂತ್ರಿಯವರ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದನ್ನು ಯಶಸ್ವಿಗೊಳಿಸಬೇಕು. ಜಿಲ್ಲೆಯಲ್ಲಿ 221 ಕೇಂದ್ರಗಳು ಕೆಲಸ ಮಾಡುತ್ತಿದ್ದು, ಕೇವಲ 15 ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಸ್ವೀಕೃತವಾಗಿರುತ್ತವೆ. ನಿರೀಕ್ಷೆ ಮಟ್ಟದಲ್ಲಿ ಅರ್ಜಿಗಳು ಬಂದಿಲ್ಲ, ಯಾವ ಇಲಾಖೆಯ ಯಾವ ಯಾವ ಸೇವೆಯನ್ನು ಗ್ರಾಮ ಒನ್‌ ಸೆಂಟರ ಮೂಲಕ ಅರ್ಜಿ ಸಲ್ಲಿಸಬಹುದು ಎಂಬುದನ್ನು ಪ್ರಚಾರಗೊಳಿಸಿ, ಗ್ರಾಮದ ಪ್ರತಿಯೊಬ್ಬರಿಗೂ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಕಾರ್ಡ್‌ ಒದಗಿಸುವಂತಾಗಬೇಕು. ಇದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು. ಇನ್ನುಳಿದಂತೆ ಅಂದಿನ ಕಾರ್ಯಕ್ರಮವನ್ನು ಅತ್ಯಂತ ಸುವ್ಯವಸ್ಥಿತವಾಗಿ ಆಯೋಜಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆ ಸಾಧಿಸಿ, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅವರು ಸಲಹೆ ನೀಡಿದರು.

ಜಿಪಂ ಸಿಇಒ ಪ್ರಿಯಾಂಕಾ, ಎಡಿಸಿ ರಾಜು ಮೊಗವೀರ, ಎಸಿ ಜಯಲಕ್ಷ್ಮೀ ರಾಯಕೋಡ, ತಹಶೀಲ್ದಾರ್‌ ಎನ್‌.ಎಫ್‌. ನೊರೋನಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next