Advertisement

ಶಿಕ್ಷಣ ಕ್ಷೇತ್ರಕ್ಕೆ ಚುಂಚ ಶ್ರೀಗಳ ಕೊಡುಗೆ ಅಪಾರ

12:02 PM Jan 21, 2018 | |

ಕೆ.ಆರ್‌.ನಗರ: ಸುಮಾರು 1 ಲಕ್ಷಕ್ಕೂ ಅಧಿಕ ಮಂದಿಗೆ ತಮ್ಮ ಜೀವಿತಾವಧಿಯಲ್ಲಿ ವಸತಿ ಊಟದೊಂದಿಗೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ ದೇಶಕ್ಕೆ ಪ್ರತಿಭಾವಂತರನ್ನು ನೀಡಿದ ಕೀರ್ತಿ ಅದಿಚುಂಚನಗಿರಿ ಮಠದ ದಿ.ಶ್ರೀ ಬಾಲಗಂಗಾಧರ ಸ್ವಾಮೀಜಿಗೆ ಸಲ್ಲುತ್ತದೆ ಎಂದು ಚುಂಚನಕಟ್ಟೆ ಆದಿಚುಂಚನಗಿರಿ ಶಾಖಾ ಮಠದ ಶಿವಾನಂದಸ್ವಾಮೀಜಿ ಹೇಳಿದರು.

Advertisement

ಚುಂಚನಕಟ್ಟೆ ಬಾಲಜಗತ್‌ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಲಾಗಿದ್ದ ದಿ.ಬಾಲಗಂಗಾಧರ ಸ್ವಾಮೀಜಿರವರ 73ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರು ಶಿಕ್ಷಣವನ್ನು ಪಡೆದುಕೊಂಡಾಗ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಆದ್ದರಿಂದ ಶಿಕ್ಷಣ ಎಲ್ಲರಿಗೂ ದೊರೆಯಬೇಕೆಂಬ ಕನಸನ್ನು ಶ್ರೀಗಳು ನನಸು ಮಾಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿದರು ಎಂದರು.

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣರ ಅವಧಿಯಲ್ಲಿ ಬಂದ ಬರಗಾಲವನ್ನು ಎದುರಿಸುವ ಸಲುವಾಗಿ ರಾಜಾದ್ಯಂತ ಮನೆಗೊಂದು ಮರ ಎಂಬುದನ್ನು ಮನಗಂಡು ಕೋಟ್ಯಂತರ ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಿ ಸರ್ಕಾರಿ ಜಾಗದಲ್ಲಿ ಗಿಡಗಳನ್ನು ನೆಡಸುವುದರ ಮೂಲಕ ಪರಿಸರ ಉಳಿವಿಗಾಗಿ ಸರ್ಕಾರದೊಂದಿಗೆ ಕೈಜೋಡಿಸಿದ ಗೌರವ ಶ್ರೀಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಶ್ರೀಗಳು ಶಿಕ್ಷಣದ ಜೊತೆಗೆ ಮಧ್ಯಮ ವರ್ಗದವರಿಗೂ ಗುಣಮಟ್ಟದ ಉನ್ನತ ಶಿಕ್ಷಣ ಮತ್ತು ಆರೋಗ್ಯ ಸಿಗಬೇಕೆಂದು ಮಹಾದಾಸೆ ಹೊಂದಿದ್ದರು. ಅವರು ಹಲವಾರು ಕಾಲೇಜು ಮತ್ತು ಆಸ್ಪತ್ರೆಗಳನ್ನು ತೆರೆದು ರಾಜ್ಯ ಮತ್ತು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಶ್ರೀಗಳ ಕೆಲಸಕಾರ್ಯಗಳು ಎಲ್ಲಾ ಮಠಮಾನ್ಯಗಳಿಗೂ ಮಾರ್ಗದರ್ಶಕವಾಗಿದ್ದು, ಅವರ ಅಪೇಕ್ಷೆಯನ್ನು ಈಗಿನ ನಿರ್ಮಲನಂದನಾಥ ಸ್ವಾಮೀಜಿ ಮುಂದುವರಿಸಿಕೊಂಡು ಹೋಗುತ್ತಿದ್ದು, ಇದಕ್ಕೆ ಮಠದ ಎಲ್ಲಾ ಕಿರಿಯ ಮತ್ತು ಹಿರಿಯ ಶ್ರೀಗಳ ಬೆಂಬಲವಿದೆ ಎಂದು ತಿಳಿಸಿದರು.

ಸಂಸ್ಥೆಯ ಸಂಸ್ಕೃತ ಪಾಠ ಶಾಲೆಯ ಮುಖ್ಯಸ್ಥ ಜವರೇಗೌಡ, ಸಂಸ್ಥೆಯ ಪ್ರಾಂಶುಪಾಲ ತಿಮ್ಮೇಗೌಡ, ಮುಖ್ಯ ಶಿಕ್ಷಕರಾದ ಕುಮಾರಪ್ಪ, ಚಾಂದಿನಿ, ಶಿಕ್ಷಕರಾದ ಶಬೀನಾ ಬಾನು, ಗೋವಿಂದನಾಯಕ್‌, ಭಾಸ್ಕರ್‌, ವೃಷಬೇಂದ್ರೇಪ್ಪ, ಸುರೇಶ್‌, ಧರ್ಮರಾಜ್‌, ಲಕ್ಷ್ಮಣ್‌, ಮಹೇಶ್‌ ಕೀರ್ತೆಶ್‌, ಮೋಹನ್‌, ರವಿಕಿರಣ್‌, ಗಿರೀಶ್‌, ಶಶಿಕಾಂತ್‌, ಅನಿಲ್‌, ಕರಿಯಪ್ಪ, ವಿದ್ಯಾ, ರಮ್ಯ, ಲತಾ, ಪುಷ್ಪಲತಾ, ಪವಿತ್ರಾ, ಲತಾ, ನಿರ್ಮಲಾ, ಅನುಷಾ, ಸುಮಾ, ಪುಷ್ಪವತಿ, ಪೂಜಾ, ಕುಮಾರಸ್ವಾಮಿ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಿನಯ್‌ ದೊಡ್ಡಕೊಪ್ಪಲು ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next