Advertisement

ಶಾಲೆಯೊಳಗೇ ಪ್ರಿನ್ಸಿಪಾಲ್‌ ಕಗ್ಗೊಲೆ

12:43 PM Oct 15, 2018 | Team Udayavani |

ಬೆಂಗಳೂರು: ಜಮೀನು ಒತ್ತುವರಿ ವಿಚಾರವಾಗಿ ಮನೆ ಕೆಡವಿಸಿದ ಕಾರಣಕ್ಕೆ ಅಗ್ರಹಾರ ದಾಸರಹಳ್ಳಿಯಲ್ಲಿರುವ ಹಾವನೂರು ಪಬ್ಲಿಕ್‌ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಪ್ರಾಂಶುಪಾಲರನ್ನು ಇಬ್ಬರು ಸಹೋದರರು ಐದಾರು ಮಂದಿ ದುಷ್ಕರ್ಮಿಗಳ ಜತೆ ಸೇರಿ ಶಾಲಾ ಆವರಣದಲ್ಲೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

Advertisement

ರಂಗನಾಥ್‌ (62) ಕೊಲೆಯಾದ ಪ್ರಾಂಶುಪಾಲರು. ಕೃತ್ಯವೆಸಗಿದ ಆರೋಪಿಗಳ ಪೈಕಿ ರೌಡಿಶೀಟರ್‌ ಬಬ್ಲಿ ಅಲಿಯಾಸ್‌ ಮುನಿರಾಜುವನ್ನು ಸಂಜೆ ಗುಂಡಿನ ದಾಳಿ ನಡೆಸಿ ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಸಹೋದರರಾದ ಮಹೇಶ, ಪ್ರಸಾದ್‌ ಮತ್ತು  ಶ್ರೀನಿವಾಸ್‌ ಹಾಗೂ ಇತರೆ ಆರೋಪಿಗಳ ಪತ್ತೆಗಾಗಿ ಮೂರು ತಂಡ ರಚಿಸಲಾಗಿದೆ.

ಅಗ್ರಹಾರ ದಾಸರಹಳ್ಳಿಯಲ್ಲಿರುವ ಹಾವನೂರು ಪಬ್ಲಿಕ್‌ ಶಾಲೆ ಮತ್ತು ಕಾಲೇಜಿಗೆ ಸೇರಿದ ಜಮೀನನ್ನು 30 ವರ್ಷಗಳ ಹಿಂದೆ ಗಂಗಮ್ಮ ಎಂಬುವರು ಖರೀದಿಸಿದ್ದರು. ಈ ವೇಳೆ ಗಂಗಮ್ಮ 10 ಅಡಿ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಗಂಗಮ್ಮ ಅನಾರೋಗ್ಯ ಕಾರಣ ಮೃತಪಟ್ಟಿದ್ದರು.

ಬಳಿಕ ಇವರ ಮಕ್ಕಳಾದ ಪ್ರಸಾದ್‌ ಮತ್ತು ಮಹೇಶ್‌ ಇದೇ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಈ ಮಧ್ಯೆ ಶಾಲಾ ಮಂಡಳಿ ಅಧ್ಯಕ್ಷ ರಂಗನಾಥ್‌, ಒಂದೂವರೆ ವರ್ಷದ ಹಿಂದೆ ಅತಿಕ್ರಮ ಪ್ರವೇಶದ ವಿರುದ್ಧ ಕೋರ್ಟ್‌ ಮೊರೆ ಹೋಗಿದ್ದರು. ಈ ಸಂಬಂಧ ಕೋರ್ಟ್‌ ಸಹೋದರರಿಗೆ ಬಾರಿ ಖುದ್ದು ಹಾಜರಾಗುವಂತೆ ಐದಾರು ಬಾರಿ ನೋಟಿಸ್‌ ಜಾರಿ ಮಾಡಿದ್ದರು. ಆದರೆ, ಆರೋಪಿಗಳು ಗೈರಾಗಿದ್ದರು.

ಈ ಹಿನ್ನೆಲೆಯಲ್ಲಿ ಕೋರ್ಟ್‌ ಸೂಚನೆ ಮೇರೆಗೆ ಅ.12ರಂದು ಅತಿಕ್ರಮ ಪ್ರವೇಶದ ಜಾಗದಲ್ಲಿ ನಿರ್ಮಿಸಿದ್ದ ಆರೋಪಿಗಳ ಮನೆಯನ್ನು ಬಿಡಿಎ ಅಧಿಕಾರಿಗಳು ಪೊಲೀಸ್‌ ಭದ್ರತೆಯಲ್ಲಿ ಕೆಡವಿದ್ದರು. ಈ ವೇಳೆ ಆರೋಪಿಗಳಾದ ಮಹೇಶ್‌ ಮತ್ತು ಪ್ರಸಾದ್‌, ಯಾವುದೇ ನೋಟಿಸ್‌ ಕೊಡದೆ ಈ ರೀತಿ ಮನೆ ಕೆಡವುತ್ತಿರುವುದು ಸರಿಯಲ್ಲ. ಹತ್ತಾರು ವರ್ಷಗಳಿಂದ ಇದೇ ಮನೆಯಲ್ಲಿ ವಾಸವಾಗಿದ್ದೇವೆ.

Advertisement

ನಿಮ್ಮ ದೌರ್ಜನ್ಯದಿಂದ ಮನೆಯವರು ಬೀದಿಗೆ ಬರಬೇಕಾಗಿದೆ. ಜಾಗದ ಮೊತ್ತ ನಿಗದಿ ಮಾಡಿದ್ದರೆ ನಾವೇ ಕೊಟ್ಟು ಖರೀದಿ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ್ದ ರಂಗನಾಥ್‌, ಕೋರ್ಟ್‌ಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಿದ್ದರೆ ಯಾವುದೇ ಸಮಸ್ಯೆ ಬರುತ್ತಿರಲಿಲ್ಲ. ಕೋರ್ಟ್‌ ಸೂಚನೆ ಮೇರೆಗೆ ಮನೆ ಕೆಡವಲಾಗಿದೆ ಎಂದಷ್ಟೇ ಹೇಳಿ ಸ್ಥಳದಿಂದ ಹೋಗಿದ್ದರು ಎಂದು ಪೊಲೀಸರು ತಿಳಿಸಿದರು.

ಶಾಲೆಗೇ ಕರೆಸಿಕೊಂಡಿದ್ದರು: ಶನಿವಾರ ಕೂಡ ರಂಗನಾಥ್‌ ಜತೆ ಚರ್ಚಿಸಿದ್ದ ಆರೋಪಿಗಳು ಈಗಲೂ ನೀವು ಮನಸ್ಸು ಮಾಡಿ, ಕೆಡವಿರುವ ಮನೆ ಮತ್ತು ಕಾಂಪೌಂಡನ್ನು ನಾವೇ ಕಟ್ಟಿಕೊಳ್ಳುತ್ತೇವೆ ಎಂದು ಮನವಿ ಮಾಡಿದ್ದರು. ಆದರೆ, ಇದಕ್ಕೆ ಶಾಲಾ ಆಡಳಿತ ಮಂಡಳಿ ನಿರಾಕರಿಸಿತ್ತು. ಭಾನುವಾರ ಶಾಲೆ ರಜೆಯಿದ್ದರಿಂದ ರಂಗನಾಥ್‌ ಅವರೇ ಬೆಳಗ್ಗೆ 10 ಗಂಟೆ ಸುಮಾರಿಗೆ ಶಾಲಾ ಕಚೇರಿಗೆ ಬರುವಂತೆ ಆರೋಪಿಗಳಿಳನ್ನು ಕರೆದಿದ್ದರು.

ಈ ಸಂಬಂಧ ಬೆಳಗ್ಗೆ 10.30ಕ್ಕೆ ಶಾಲಾ ಕಚೇರಿಗೆ ಆಗಮಿಸಿದ ಆರೋಪಿತ ಸಹೋದರರು, ಬರುವಾಗಲೇ ಸಹಚರರನ್ನು ಕರೆತಂದಿದ್ದರು. ಅಲ್ಲದೆ ಎಲ್ಲರೂ ಡ್ರ್ಯಾಗರ್‌, ಚಾಕು ತಂದಿದ್ದರು. ಈ ವೇಳೆ ರಂಗನಾಥ್‌ 10 ಅಡಿ ಜಾಗ ಬೇಕೆಂದರೆ 1 ಕೋಟಿ ರೂ. ಕೊಡುವಂತೆ ಕೇಳಿದ್ದರು ಎಂದು ಹೇಳಲಾಗಿದೆ. ಇದಕ್ಕೆ ನಿರಾಕರಿಸಿದ ಆರೋಪಿಗಳು, 35 ಲಕ್ಷ ರೂ. ಕೊಡುವುದಾಗಿ ಹೇಳಿದ್ದರು.

ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಒಂದು ಹಂತದಲ್ಲಿ ಆಕ್ರೋಶಗೊಂಡ ಆರೋಪಿಗಳು, ಮಾರಕಾಸ್ತ್ರಗಳಿಂದ ರಂಗನಾಥ್‌ ಅವರ ಎದೆ, ಕುತ್ತಿಗೆ ಮತ್ತು ಹೊಟ್ಟೆಗೆ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಕುಳಿತ ಕುರ್ಚಿಯಲ್ಲೇ ರಂಗನಾಥ್‌ ಪ್ರಾಣ ಬಿಟ್ಟಿದ್ದಾರೆ. ಘಟನೆ ವೇಳೆ ರಂಗನಾಥ್‌ ಜತೆಗಿದ್ದ ಶಾಲೆಯ ಇಬ್ಬರು ಸಿಬ್ಬಂದಿ ರಕ್ಷಣೆಗೆ ಕೂಗಿಕೊಳ್ಳುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.

ಆರ್‌ಬಿಐ ನಿವೃತ್ತ ನೌಕರ: ಹತ್ಯೆಯಾದ ರಂಗನಾಥ್‌ ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿದ್ದು, ಕೆಲ ವರ್ಷಗಳ ಹಿಂದಷ್ಟೇ ನಿವೃತ್ತಿ ಹೊಂದಿದ್ದರು. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ರಂಗನಾಥ್‌ 2003ರಲ್ಲಿ ಅಗ್ರಹಾರ ದಾಸರಹಳ್ಳಿಯಲ್ಲಿರುವ ಹಾವನೂರು ಪಬ್ಲಿಕ್‌ ಶಾಲೆಯನ್ನು ಖರೀದಿಸಿದ್ದರು. ಅಂದಿನಿಂದ ಶಾಲೆಯ ಪ್ರಾಂಶುಪಾಲರಾಗಿ, ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು.

ರೌಡಿಶೀಟರ್‌ಗೆ ಗುಂಡೇಟು: ಘಟನೆ ನಂತರ ವಿಜಯನಗರ ಎಸಿಪಿ ಪರಮೇಶ್ವರ್‌ ಹೆಗಡೆ ಅವರು ಆರೋಪಿಗಳ ಪತ್ತೆಗಾಗಿ, ಮಾಗಡಿ ರಸ್ತೆ ಮತ್ತು ಕೆ.ಪಿ.ಅಗ್ರಹಾರ ಠಾಣೆ ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ತಂಡ ರಚಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಮಾಗಡಿ ರಸ್ತೆ ಠಾಣಾಧಿಕಾರಿ ಹೇಮಂತ್‌ ಕುಮಾರ್‌, ಘಟನೆ ನಡೆದ ಕೆಲ ಗಂಟೆಗಳಲ್ಲೇ ಪ್ರಕರಣದ ಆರೋಪಿಗಳ ಪೈಕಿ ರೌಡಿಶೀಟರ್‌ ಬಬ್ಲಿ ಅಲಿಯಾಸ್‌ ಮುನಿರಾಜು (26) ಎಂಬಾತನನ್ನು, ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಪ್ರಮುಖ ಆರೋಪಿಗಳಾದ ಪ್ರಸಾದ್‌, ಮಹೇಶ್‌, ಶ್ರೀನಿವಾಸ್‌ ಸೇರಿ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪೈಕಿ ಮುನಿರಾಜು ಮಹಾಲಕ್ಷ್ಮೀ ಲೇಔಟ್‌ ಠಾಣೆ ವ್ಯಾಪ್ತಿಯ ಕಿರ್ಲೋಸ್ಕರ್‌ ಪೌಲಿó ರಸ್ತೆಯಲ್ಲಿ ಇರುವ ಬಗ್ಗೆ ಮಧ್ಯಾಹ್ನ 3.30ರ ಸುಮಾರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಆರೋಪಿಯನ್ನು ಬಂಧಿಸಲು ತಂಡ ತೆರಳಿತ್ತು.

ಈ ವೇಳೆ ಆರೋಪಿ ಮಾರಕಾಸ್ತ್ರದಿಂದ ಕಾನ್ಸ್‌ಟೆಬಲ್‌ಗ‌ಳಾದ ನವೀನ್‌ ಮತ್ತು ಶ್ರೀನಿವಾಸ್‌ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಕೂಡಲೇ ಎಚ್ಚೆತ್ತ ಇನ್ಸ್‌ಪೆಕ್ಟರ್‌ ಹೇಮಂತ್‌, ಕುಮಾರ್‌ ಮೂರು ಸುತ್ತು ಗುಂಡು ಹಾರಿಸಿದ್ದು, ಆರೋಪಿ ಕಾಲಿಗೆ ಗುಂಡು ತಗುಲಿದೆ. ಆರೋಪಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ವಿರುದ್ಧ ಮಾಗಡಿ ರಸ್ತೆ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next