Advertisement

“ಪ್ರೀಮಿಯರ್‌ ಪದ್ಮಿನಿ’ಗೆ ಕೃತಿಚೌರ್ಯ ಆರೋಪ

09:12 AM May 12, 2019 | Lakshmi GovindaRaj |

ಕೆಲವಾರಗಳ ಹಿಂದೆ ಬಿಡುಗಡೆಯಾದ “ಪ್ರೀಮಿಯರ್‌ ಪದ್ಮಿನಿ’ ಚಿತ್ರ, ಸಿನಿಪ್ರಿಯರಿಂದ, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತ ಸದ್ಯ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದ ಯಶಸ್ವಿ ಪ್ರದರ್ಶನ ಚಿತ್ರತಂಡದ ಮೊಗದಲ್ಲಿ ನಗು ತರಿಸುತ್ತಿದ್ದಂತೆ, ಇದೀಗ “ಪ್ರೀಮಿಯರ್‌ ಪದ್ಮಿನಿ’ಯ ವಿರುದ್ದ ಕೃತಿ ಚೌರ್ಯ ಆರೋಪ ಕೇಳಿಬಂದಿದೆ.

Advertisement

ಕನ್ನಡದ ಖ್ಯಾತ ಬರಹಗಾರ ವಸುಧೇಂದ್ರ ಅವರ “ವರ್ಣಮಯ’ ಪ್ರಬಂಧದಲ್ಲಿ ಬರುವ “ನಂಜುಂಡಿ’ ಎನ್ನುವ ಹೆಸರಿನ ಪಾತ್ರ ಮತ್ತು “ಪ್ರೀಮಿಯರ್‌ ಪದ್ಮಿನಿ’ ಚಿತ್ರದ ಹಲವು ದೃಶ್ಯಗಳನ್ನು ತನ್ನ ಪ್ರಬಂಧದಿಂದ ನಿರ್ದೇಶಕರು ಯಥಾವತ್ತಾಗಿ ಬಳಸಿಕೊಂಡಿದ್ದಾರೆ ಎಂದು ವಸುಧೇಂದ್ರ ಆರೋಪಿಸಿದ್ದಾರೆ. ಈ ಮೂಲಕ ಸಕ್ಸಸ್‌ಫ‌ುಲ್‌ ಜರ್ನಿಯಲ್ಲಿರುವ “ಪ್ರೀಮಿಯರ್‌ ಪದ್ಮಿನಿ’ ಕೃತಿ ಚೌರ್ಯದ ಆರೋಪ ಕೇಳಿಬಂದಿದೆ.

ವಸುಧೇಂದ್ರ ಆರೋಪ: ತಮ್ಮ ಕೃತಿ ಚೌರ್ಯ ಆರೋಪದ ಬಗ್ಗೆ ಮಾತನಾಡಿರುವ ಲೇಖಕ ವಸುಧೇಂದ್ರ, “ಪ್ರೀಮಿಯರ್‌ ಪದ್ಮಿನಿ’ ಸಿನಿಮಾದಲ್ಲಿರುವ ನಂಜುಂಡಿ ಪಾತ್ರವು ನನ್ನ “ವರ್ಣಮಯ’ ಪುಸ್ತಕದಲ್ಲಿರುವ ಸುದೀರ್ಘ‌ ಪ್ರಬಂಧ “ನಂಜುಂಡಿ’ಯಿಂದ ತೆಗೆದುಕೊಂಡದ್ದು. ಅದರ ಬಹುತೇಕ ವಿವರಗಳನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ.

ನಿರ್ದೇಶಕರು ಮೊದಲಿಗೆ ನನ್ನನ್ನು ಭೇಟಿಯಾಗಿ, ನನ್ನ ಎರಡು ಪ್ರಬಂಧಗಳನ್ನು ಬಳಸಿಕೊಂಡು ಸಿನಿಮಾ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಸಂಭಾವನೆಯನ್ನೂ ನಿಗದಿ ಪಡಿಸಲಾಗಿತ್ತು. ಅನಂತರ ಕರಾರು ಪತ್ರವನ್ನು ಶುಭದಿನದಂದು ಮಾಡಿಕೊಳ್ಳೋಣ ಎಂದು ಹೇಳಿ ಹೋದವರು ಮತ್ತೆ ವಾಪಾಸಾಗಲಿಲ್ಲ. ನನ್ನ ಒಪ್ಪಿಗೆ ಇಲ್ಲದೆ ಸಿನಿಮಾ ಆಗಿರುವುದು ಇಷ್ಟವಾಗಲಿಲ್ಲ ಸಿನಿಮಾ ಬಿಡುಗಡೆಗೆ ಮುಂಚೆ ಕರೆ ಮಾಡಿ, ಸಿನಿಮಾ ಮಾಡಿಬಿಟ್ಟೆ ಸಾರ್‌.

ಆ ಪ್ರಬಂಧದ ಪ್ರೇರಣೆ ನನಗೆ ಸಾಕಷ್ಟಿದೆ. ಅದನ್ನು ಟೈಟಲ್‌ ಕಾರ್ಡ್‍ನಲ್ಲಿ ಹಾಕಬಹುದೆ? ಎಂದು ವಿಚಾರಿಸಿದರು. ನನ್ನ ಒಪ್ಪಿಗೆ ಇಲ್ಲದೆ ಸಿನಿಮಾ ಆಗಿರುವುದು ನನಗೆ ಇಷ್ಟವಾಗಲಿಲ್ಲ. ಪ್ರೇರಣೆಯನ್ನು ಪಡೆದುಕೊಂಡಿದ್ದರೆ ನನಗೆ ಸಮಸ್ಯೆಯಿಲ್ಲ. ಆದರೆ ಪ್ರಬಂಧದ ದೃಶ್ಯಗಳನ್ನು ತೆಗೆದಕೊಳ್ಳುವಂತಿಲ್ಲ. ಯಾವುದೋ ಮತ್ತೂಂದು ಕತೆಯ ಭಾಗವಾಗಿ ನನ್ನ ಪಾತ್ರಗಳು ಬರುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದೆ.

Advertisement

ಅನಂತರ ಅವರು ಸುಮ್ಮನಾಗಿಬಿಟ್ಟರು. ಈಗ ಸಿನಿಮಾದಲ್ಲಿ ಬಹುತೇಕ “ನಂಜುಂಡ’ ಪಾತ್ರದ ದೃಶ್ಯಗಳು ನನ್ನ ಪ್ರಬಂಧದಿಂದ ನೇರವಾಗಿ ತೆಗೆದುಕೊಳ್ಳಲಾಗಿದೆ. ಸಿನಿಮಾದ ಬಹುತೇಕ ಮಂದಿಗೆ ಲೇಖಕರು ಮತ್ತು ಕತೆಗಾರರ ಬಗ್ಗೆ ಇರುವ ಅಲಕ್ಷ ಈ ಘಟನೆಯಿಂದ ಗೊತ್ತಾಗುತ್ತದೆ. ಇಲ್ಲಿ ಸಮಸ್ಯೆ ಇರುವುದು ಹಣದ್ದಲ್ಲ. ಅಂತಹ ದೊಡ್ಡ ಹಣದ ವ್ಯವಹಾರವೇನೂ ಸಾಹಿತಿಗಳ ಮಧ್ಯೆ ನಡೆಯುವುದಿಲ್ಲ.

ಆದರೆ ಯಾವುದೋ ನನಗೆ ಒಪ್ಪಿಗೆಯಾಗದ ಅಸೂಕ್ಷ್ಮ ಕತೆಯ ಸಿನಿಮಾವೊಂದರ ಭಾಗವಾಗಿ ನನ್ನ ಪಾತ್ರಗಳನ್ನು ಬಳಸಿಕೊಳ್ಳುವುದನ್ನು ನಾನು ವಿರೋಧಿಸುತ್ತೇನೆ. ಇಂತ ಘಟನೆಗಳು ಕನ್ನಡದಲ್ಲಿ ಮತ್ತೆ ನಡೆಯದಿರಲಿ ಇದು ಮತ್ತೂಬ್ಬ ಕತೆಗಾರನಿಗೆ ಆಗಬಾರದು ಎನ್ನುವ ಕಾಳಜಿಯೇ ಈ ವಿರೋಧದ ಮೂಲ ಉದ್ದೇಶ. ಸಿನಿಮಾದ ಮೂಲಕ ಜನಪ್ರಿಯತೆ ಗಳಿಸುವ ಹಪಹಪಿಯೂ ನನಗಿಲ್ಲ.

ಏಕೆಂದರೆ ಈಗಾಗಲೇ ನನ್ನ ಪುಸ್ತಕಗಳು ಹಲವಾರು ಮುದ್ರಣಗಳನ್ನು ಕಂಡು ಓದುಗರ ಮನ್ನಣೆ ಗಳಿಸಿವೆ. ಅದಕ್ಕೆ ಸಿನಿಮಾ ಮಂದಿಯ ಮುದ್ರೆ ಬೇಕಿಲ್ಲ. ಈಗ ನನ್ನ ಸುದೀರ್ಘ‌ ಪ್ರಬಂಧವನ್ನು ಮತ್ತೂಬ್ಬರು ಸಿನಿಮಾ ಮಾಡುವುದಕ್ಕೂ ಸಾಧ್ಯವಿಲ್ಲ. ಅದನ್ನು ಅರ್ಧಂಬರ್ಧ, ತಮ್ಮ ಮನಸ್ಸಿಗೆ ತೋಚಿದಂತೆ ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಇಂತಹ ಘಟನೆಗಳು ಕನ್ನಡದಲ್ಲಿ ಮತ್ತೆ ನಡೆಯದಿರಲಿ ಎನ್ನುವುದಷ್ಟೇ ನನ್ನ ಕಳಕಳಿ. ಪ್ರೀತಿ ಅಭಿಮಾನ ತೋರಿಸುವ ನನ್ನೆಲ್ಲಾ ಓದುಗರು ನನಗೆ ಸಾಕು. ಅವರಿಗೆ ಯಾವತ್ತೂ ಋಣಿ’ ಎಂದಿದ್ದಾರೆ.

ನಿರ್ಮಾಪಕಿ ಶ್ರುತಿ ನಾಯ್ಡು ಪ್ರತಿಕ್ರಿಯೆ: ಲೇಖಕ ವಸುಧೇಂದ್ರ ಅವರ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ಚಿತ್ರದ ನಿರ್ಮಾಪಕಿ ಶ್ರುತಿ ನಾಯ್ಡು, “ಸಿನಿಮಾ ಬಿಡುಗಡೆಯಾಗಿ ಎಲ್ಲಾ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿರುವ ವೇಳೆಯೇ ಇಂಥದ್ದೊಂದು ಆರೋಪ ಕೇಳಿಬರುತ್ತಿದೆ. ಬಹುಶಃ ಸಿನಿಮಾ ಸೋತಿದ್ದರೆ ಯಾರು ಈ ಬಗ್ಗೆ ಮಾತನಾಡುತ್ತಿರಲಿಲ್ಲ.

ಆದ್ರೀಗ ಸಕ್ಸಸ್‌ ಆಗಿದ್ದಕ್ಕೆ ವಿರೋಧಗಳು ಕೇಳಿ ಬರುತ್ತಿದೆ. ವಸುಧೇಂದ್ರ ಅವರ ಒಂದು ಪ್ರಬಂಧವನ್ನು ನಾವು “ಪ್ರೀಮಿಯರ್‌ ಪದ್ಮಿನಿ’ ಚಿತ್ರ ಮಾಡಿದ್ದೀವಿ ಅಂತ ಆರೋಪ ಕೇಳಿ ಬರುತ್ತಿದೆ. ಪ್ರಬಂಧದಿಂದ ಚಿತ್ರದಲ್ಲಿ ಮೂರು ದೃಶ್ಯಗಳನ್ನು ನಿರ್ದೇಶಕ ರಮೇಶ್‌ ಇಂದಿರ ಸ್ಫೂರ್ತಿ ಪಡೆದುಕೊಂಡು ಬಳಸಿಕೊಂಡಿದ್ದಾರೆ. ಆ ದೃಶ್ಯಗಳು ಚಿತ್ರದಲ್ಲಿ ಚಾಲಕ ಮತ್ತು ಮಾಲಿಕನ ನಡುವೆ ಕೇವಲ ಕೆಲವೆ ನಿಮಿಷಗಳಲ್ಲಿ ಬಂದು ಹೋಗುತ್ತೆ ಅಷ್ಟೆ.

ಅಲ್ಲದೆ ಚಿತ್ರದಲ್ಲಿ ಆ ಮೂರು ದೃಶ್ಯಗಳನ್ನು ಬಳಸಿಕೊಂಡಿದಕ್ಕೆ ಅವರಿಗೆ ಸಂಭಾವನೆ ಕೊಡುವುದಾಗಿ ಹೇಳಿದ್ದೇವೆ. ಈ ಬಗ್ಗೆ ನಾವು ಅವರನ್ನು ಸಂಪರ್ಕಿಸಿದ್ದೇವೆ. ಅಲ್ಲದೆ ಚಿತ್ರದ ಟೈಟಲ್‌ ಕಾರ್ಡ್‌ನಲ್ಲೂ ಅವರಿಗೆ ಕೃತಜ್ಞತೆ ತಿಳಿಸಿದ್ದೇವೆ. ಅದನ್ನು ಹೊರತುಪಡಿಸಿದರೆ ಅವರ ಕೃತಿಗೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಈಗ, “ಯಾಕೆ ನಿಮ್ಮ ಸಿನಿಮಾ ಸಂಪೂರ್ಣವಾಗಿ ನನ್ನ ಪ್ರಬಂಧವನ್ನು ಆಧರಿಸಿದೆ’ ಎಂದು ಹೇಳುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ.

ಈ ಬಗ್ಗೆ ಅನುಮಾನವಿದ್ದರೆ, ದಯವಿಟ್ಟು ಎಲ್ಲರು ಅವರ ಪ್ರಬಂಧ ಓದಿ ಮತ್ತು ನಮ್ಮ ಸಿನಿಮಾವನ್ನು ನೋಡಿ ಕೇವಲ ಮೂರು ದೃಶ್ಯಗಳನ್ನು ಬಿಟ್ಟರೆ ಬೇರೆಯಾವುದಾದರು ಬಳಸಿಕೊಂಡರೆ ನಮಗೆ ತಿಳಿಸಿ. ಈ ಚಿತ್ರ ಸೋತಿದ್ದರೆ ಯಾರು ಮಾತನಾಡುತ್ತಿರಲ್ಲ. ಆದ್ರೀಗ ಚಿತ್ರ ಸಕ್ಸಸ್‌ ಆಗಿದೆ ಹಾಗಾಗಿ ಆರೋಪಿಸುತ್ತಿದ್ದಾರೆ’ ಎಂದು “ಪ್ರೀಮಿಯರ್‌ ಪದ್ಮಿನಿ’ ಚಿತ್ರದ ಬಗ್ಗೆ ಮತ್ತು ನಿರ್ದೇಶಕ ರಮೇಶ್‌ ಇಂದಿರ ಅವರ ವಿರುದ್ಧ ಕೇಳಿ ಬರುತ್ತಿರುವ ಕೃತಿ ಚೌರ್ಯ ಆರೋಪವನ್ನು ತಳ್ಳಿ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next