Advertisement

ದೇವೇಗೌಡರ ಕಾಲೆಳೆದ ಪ್ರಧಾನಿ ನರೇಂದ್ರ ಮೋದಿ

06:00 AM Sep 11, 2018 | |

ಬೆಂಗಳೂರು: ಮಾಜಿ ಪ್ರಧಾನಿ ಎಚ್‌ಡಿ. ದೇವೇಗೌಡರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮೀಯತೆ
ಮುಂದುವರಿದಿದೆ. ವಿಕೋಪ ಪರಿಹಾರಕ್ಕೆ ನೆರವು ಕೋರಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ
ನಿಯೋಗ ತಮ್ಮನ್ನು ಭೇಟಿ ಮಾಡಿದಾಗ ಜತೆಗಿದ್ದ ದೇವೇಗೌಡರನ್ನು ತಮ್ಮ ಪಕ್ಕದಲ್ಲೇ ಕುಳ್ಳಿರಿಸಿಕೊಂಡ ಪ್ರಧಾನಿ
ನರೇಂದ್ರ ಮೋದಿ, ನಿಯೋಗದಲ್ಲಿ ನಿಮ್ಮ ಕುಟುಂಬದವರೇ ಅರ್ಧದಷ್ಟಿದ್ದಾರಲ್ಲ ಎಂದು ಕಾಲೆಳೆದರು.

Advertisement

ನೀರಾವರಿ ಸೇರಿ ರಾಜ್ಯದ ಯಾವುದೇ ವಿಚಾರ ಪ್ರಸ್ತಾಪವಾದಾಗ ಪ್ರಧಾನಿ ನರೇಂದ್ರ ಮೋದಿ ಅವರು ಎಚ್‌.ಡಿ.ದೇವೇಗೌಡರನ್ನು ಸ್ಮರಿಸಿಕೊಂಡು ಅವರ ಹಿರಿತನ, ಅನುಭವವನ್ನು ಹೊಗಳುವುದು ಸಾಮಾನ್ಯ. ಅದೇ ರೀತಿ ನಿಯೋಗದಲ್ಲಿ ತಮ್ಮನ್ನು ಭೇಟಿಯಾದ ದೇವೇಗೌಡರನ್ನು ಪಕ್ಕದಲ್ಲೇ ಕೂರಿಸಿಕೊಂಡ ಪ್ರಧಾನಿ, ರಾಜ್ಯದ ಸ್ಥಿತಿಗತಿ
ಕುರಿತಂತೆ ಮಾತನಾಡಿದರು.

ನಿಯೋಗದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವರಾದಆರ್‌.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್‌, ಎಚ್‌.ಡಿ.ರೇವಣ್ಣ, ಕೃಷ್ಣಬೈರೇಗೌಡ
ಇದ್ದರು. ಈ ಪೈಕಿ ಮುಖ್ಯಮಂತ್ರಿ, ಸಚಿವ ರೇವಣ್ಣ ಮತ್ತು ದೇವೇಗೌಡರನ್ನು ಕುರಿತಾಗಿ ಪ್ರಸ್ತಾಪಿಸಿದ ಪ್ರಧಾನಿ,
ನಿಯೋಗದಲ್ಲೇ ನಿಮ್ಮ ಕುಟುಂಬದವರೇ ಅರ್ಧದಷ್ಟಿದ್ದಾರಲ್ಲ ಎಂದು ಕಾಲೆಳೆದರು. ರಾಜ್ಯಕ್ಕೆ ಸಂಬಂಧಿಸಿದ ವಿಷಯವಲ್ಲವೇ ಎಂದ ದೇವೇಗೌಡರು ನಸುನಕ್ಕು ಸುಮ್ಮನಾದರು.

ದೂರ ಉಳಿದ ಬಿಜೆಪಿ
ನಿಯೋಗದ ಮೂಲಕ ಸೋಮವಾರ ಪ್ರಧಾನಿಯವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಆಗಮಿಸುವಂತೆ ಸ್ವತಃ
ಮುಖ್ಯಮಂತ್ರಿಗಳೇ ಆಹ್ವಾನ ನೀಡಿದ್ದರೂ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಸೇರಿ ಬಿಜೆಪಿ
ನಾಯಕರು ಈ ಪ್ರಕ್ರಿಯೆಯಿಂದ ದೂರವೇ ಉಳಿದಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸೋಮವಾರ ಪ್ರಧಾನಿ
ಭೇಟಿ ಮಾಡುವ ಬಗ್ಗೆ ಸೆ. 8ರ ಶನಿವಾರ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳು ಯಡಿಯೂರಪ್ಪ ಅವರಿಗೆ ಪತ್ರ ಬರೆದು ಈ ಕುರಿತು ಮಾಹಿತಿ ನೀಡಿದ್ದರು. ಆದರೂ ಯಡಿಯೂರಪ್ಪ ನಿಯೋಗದಿಂದ ದೂರ ಉಳಿದು ಬೆಂಗಳೂರಿನಲ್ಲೇ ಇದ್ದರು.

ಸೆ. 8ರಂದು ಯಡಿಯೂರಪ್ಪ ಅವರಿಗೆ ಪತ್ರ ಬರೆದು, ಮುಖ್ಯಮಂತ್ರಿಯವರು ಸೋಮವಾರ ಬೆಳಗ್ಗೆ 11 ಗಂಟೆಗೆ ನಿಯೋಗದ ಮೂಲಕ ಪ್ರಧಾನಿಯವರನ್ನು ಭೇಟಿ ಮಾಡಿ ಕರಾವಳಿ ಪ್ರದೇಶದಲ್ಲಿ ಆಗಿರುವ ಮಳೆಹಾನಿ ಮತ್ತು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನೆರವು ಕೋರಿ ಮನವಿ ಸಲ್ಲಿಸಲು ಉದ್ದೇಶಿಸಿದ್ದಾರೆ. ಆದ್ದರಿಂದ ನಿಯೋಗದ ಮೂಲಕ ತೆರಳಲು ಸೋಮವಾರ ಬೆಳಗ್ಗೆ 10 ಗಂಟೆಗೆ ಕರ್ನಾಟಕ ಭವನದಲ್ಲಿ ಉಪಸ್ಥಿತರಿರ ಬೇಕು. ಅಲ್ಲದೆ, ಕರ್ನಾಟಕ ಭವನದಲ್ಲಿ ವಾಸ್ತವ್ಯ, ಸಾರಿಗೆ ವ್ಯವಸ್ಥೆ ಸೇರಿ ಶಿಷ್ಠಾಚಾರದ ಏರ್ಪಾಡು ಮಾಡಲು ಅನುಕೂಲವಾಗುವಂತೆ ಪ್ರವಾಸದ ವಿವರ ನೀಡುವಂತೆ ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಕೋರಿದ್ದರು.

Advertisement

ಆದರೂ ಯಡಿಯೂರಪ್ಪ ಸೋಮವಾರ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಸರ್ಕಾರದ ನಿಯೋಗಕ್ಕೆ ಸಹಕಾರಕೊಡಲಿಲ್ಲವೆಂಬ ಆರೋಪವೂ ಕೇಳಿಬಂದಿದೆ. 

ನನೆಗುದಿಗೆ ಬಿದ್ದ ಅನಿಲಭಾಗ್ಯ
ಜಾರಿಗೆ ಕೇಂದ್ರ ಸರ್ಕಾರಕ್ಕೆ ಮೊರೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗೆ ಗ್ಯಾಸ್‌ ಸಂಪರ್ಕ ಸಿಗದೆಪರದಾಡುತ್ತಿರುವ ರಾಜ್ಯ ಸರ್ಕಾರ, ಇದೀಗ ಸಮಸ್ಯೆ ಬಗೆಹರಿ ಸುವಂತೆ ಕೇಂದ್ರ ಸರ್ಕಾರದ ಮೊರೆ ಹೋಗಿದೆ. ದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಸೋಮವಾರ ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ, ಯೋಜನೆ ಜಾರಿಗೆ ಅಗತ್ಯವಿರುವ ಹೆಚ್ಚುವರಿ ಸಂಪರ್ಕಗಳನ್ನು ಬಿಡುಗಡೆ ಮಾಡಲು ತೈಲ ಕಂಪೆನಿಗಳಿಗೆ ಸೂಚಿಸುವಂತೆ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಪೂರಕವಾಗಿ ರಾಜ್ಯದಲ್ಲಿ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಜಾರಿಗೊಳಿಸಿದ್ದ ಹಿಂದಿನ ಕಾಂಗ್ರೆಸ್‌ ಸರ್ಕಾರ, ಉಜ್ವಲ ಯೋಜನೆಗಿಂತ ಹೆಚ್ಚಿನ ಸೌಲಭ್ಯ (ಸಿಲಿಂಡರ್‌, ಸ್ಟೌ ಜತೆಗೆ ಎರಡು ಹೆಚ್ಚುವರಿ ರಿμಲ್‌) ನೀಡಲು ನಿರ್ಧರಿಸಿತ್ತು. 2 ವರ್ಷದಲ್ಲಿ 30 ಲಕ್ಷ ಫ‌ಲಾನುಭವಿಗಳಿಗೆ ಯೋಜನೆಯ ಸೌಲಭ್ಯ ವಿಸ್ತರಿಸುವ ಗುರಿ ಹೊಂದಿತ್ತು. ಆದರೆ, ಯೋಜನೆ ಜಾರಿಗೆ ಅಗತ್ಯ ಗ್ಯಾಸ್‌ ಸಂಪರ್ಕ ಒದಗಿಸಲು ತೈಲ ಕಂಪೆನಿಗಳು ಸಮ್ಮತಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಸೋಮವಾರ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ, ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಜಾರಿಗೊಳಿಸಲು ಬೆಂಬಲ ನೀಡುವಂತೆ ಹಾಗೂ ಹೆಚ್ಚುವರಿ
ಸಂಪರ್ಕಗಳನ್ನು ಬಿಡುಗಡೆ ಮಾಡಲು ತೈಲ ಮಾರಾಟ ಕಂಪೆನಿಗಳಿಗೆ ಸೂಚಿಸುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರದಾನ್‌, ಈ ವಿಚಾರವನ್ನು ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ವೇಳೆ, ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹಾಜರಿದ್ದರು.

ಪ್ರಧಾನಿಗೆ ಪುಸ್ತಕ ಉಡುಗೊರೆ
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸೋಮವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು
ಭೇಟಿಯಾಗಿ ಖ್ಯಾತ ಪ್ರವಾಸಿ ಲೇಖಕ ಡಾಮ್‌ ಮೊರೇಸ್‌ ಅವರು ಕರ್ನಾಟಕದ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಕುರಿತಾಗಿ ಬರೆದಿದ್ದ ದಿ ಓಪನ್‌ ಐಸ್‌: ಎ ಜರ್ನಿ ಥ್ರೂ ಕರ್ನಾಟಕ ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಈ ಪುಸ್ತಕವನ್ನು ರಾಜ್ಯ ಸರ್ಕಾರದ ಪರವಾಗಿ ವಾರ್ತಾ ಇಲಾಖೆ 1976ರಲ್ಲಿ ಪ್ರಕಟಿಸಿತ್ತು.

ದೆಹಲಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರಧಾನಮಂತ್ರಿ
ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ
ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next