Advertisement

ಮಹಾಮೈತ್ರಿಕೂಟದ ವಿರುದ್ಧ ಪ್ರಧಾನಿ ಮೋದಿ ವಾಗ್ಧಾಳಿ

12:30 AM Mar 01, 2019 | Team Udayavani |

ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕೈಗೊಂಡ “ಮೇರಾ ಬೂತ್‌ ಸಬ್‌ಸೇ ಮಜಬೂತ್‌’ ಕಾರ್ಯಕ್ರಮವು ವಿಶ್ವದಾಖಲೆ ನಿರ್ಮಿಸಿದೆ. 

Advertisement

ಏಕಕಾಲಕ್ಕೆ 15 ಸಾವಿರ ಸ್ಥಳಗಳಲ್ಲಿರುವ ಸುಮಾರು ಒಂದು ಕೋಟಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಅವರು ವಿಡಿಯೋ ಕಾನ್ಫರೆನ್ಸ್‌ ನಡೆಸಿದ್ದು, ಇದು ವಿಶ್ವದಲ್ಲೇ ಅತಿದೊಡ್ಡ ವಿಡಿಯೋ ಸಂವಾದ ಎಂದು ಪಕ್ಷ ಹೇಳಿಕೊಂಡಿದೆ.

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. ಈ ವೇಳೆ ವಿಪಕ್ಷಗಳ ಮಹಾಘಟಬಂಧನದ ವಿರುದ್ಧ ವಾಗ್ಧಾಳಿ ನಡೆಸಿದ ಪ್ರಧಾನಿ ಮೋದಿ, “ಈ ಮಹಾ ಕಲಬೆರಕೆಯು ದೇಶವನ್ನು ತುರ್ತು ನಿಗಾ ಘಟಕಕ್ಕೆ ಕಳುಹಿಸಲಿದೆ’ ಎಂದಿದ್ದಾರೆ. 2014ರ ಚುನಾವಣೆಯು ದೇಶದ ಜನರ ಅಗತ್ಯತೆಗಳನ್ನು ಈಡೇರಿಸುವಂಥ ಚುನಾವಣೆಯಾಗಿದ್ದರೆ, 2019ರದ್ದು ಜನರ ಬಯಕೆಗಳನ್ನು ಈಡೇರಿಸುವ ಚುನಾವಣೆಯಾಗಿದೆ ಎಂದೂ ಹೇಳಿದ್ದಾರೆ.

ಗಿಮಿಕ್‌ ಅಲ್ಲ, ಸಂಸ್ಕಾರ: ಪ್ರಯಾಗ್‌ರಾಜ್‌ನಲ್ಲಿ ನೈರ್ಮಲ್ಯ ಕಾರ್ಮಿಕರ ಪಾದಗಳನ್ನು ತೊಳೆದಿದ್ದು ರಾಜಕೀಯ ಗಿಮಿಕ್‌ ಅಲ್ಲ, ಅದು ನನ್ನ ಸಂಸ್ಕಾರ ಎಂದು ಮೋದಿ ಹೇಳಿದ್ದಾರೆ. ನಾನು ಗುಜರಾತ್‌ ಸಿಎಂ ಆಗಿ ಆಯ್ಕೆಯಾದಾಗ, ನನ್ನ ಅಧಿಕೃತ ನಿವಾಸಕ್ಕೆ ಪ್ರವೇಶಿಸುವ ವೇಳೆ ನಾಲ್ಕನೇ ದರ್ಜೆಯ ನೌಕರರೊಬ್ಬರನ್ನು ಕರೆತರಲು ಹೇಳಿದೆ. ಅವರು ಒಬ್ಬ ದಲಿತನನ್ನು ಕರೆತಂದರು. ಆತನ ಪುತ್ರಿಯ ತಲೆಯ ಮೇಲೆ ಕಳಶವಿಟ್ಟು ನಿವಾಸವನ್ನು ಪ್ರವೇಶಿಸಿದೆ. ಅದು ನನ್ನ ಸಂಸ್ಕಾರ ಎಂದು ನುಡಿದಿದ್ದಾರೆ.

ಕರ್ನಾಟಕ ಪ್ರಸ್ತಾವಿಸಿದ ಮೋದಿ
ತಮಿಳುನಾಡಿನಲ್ಲಿ ಎನ್‌ಡಿಎ ಮೈತ್ರಿಕೂಟ ಉತ್ತಮ ಸಾಧನೆ ಮಾಡಲಿದೆ ಎಂದು ಹೇಳಿದ ಪ್ರಧಾನಿ, “ಬಿಜೆಪಿ ದಕ್ಷಿಣದ ರಾಜ್ಯಗಳಲ್ಲಿ ಗೆಲ್ಲುವುದಿಲ್ಲ ಎಂದು ಮಾಧ್ಯಮಗಳು ವರದಿ ಮಾಡುತ್ತವೆ. ಆದರೆ, 2008ರಲ್ಲಿ ಕರ್ನಾಟಕದ ಚುನಾವಣೆಯಲ್ಲಿ ಅದನ್ನು ನಾವು ಸುಳ್ಳು ಮಾಡಿ ತೋರಿಸಿದ್ದೇವೆ. ನಮ್ಮ ಸರಕಾರವು ಅಭಿವೃದ್ಧಿಗಾಗಿ ಕೆಲಸ ಮಾಡಿದೆ. ಪ್ರಗತಿ ಯನ್ನು ಬಯಸುವಂಥ ದಕ್ಷಿಣ ರಾಜ್ಯಗಳ ಜನರೂ ಇದನ್ನು ಒಪ್ಪುತ್ತಾರೆ’ ಎಂದು ಹೇಳಿದ್ದಾರೆ.

Advertisement

ಇಂಥ ಸಂದರ್ಭದಲ್ಲಿ ಇದು ಬೇಕಿತ್ತಾ?: ವಿಪಕ್ಷಗಳ ಪ್ರಶ್ನೆ
ಇಡೀ ದೇಶವೇ  ವಿಂಗ್‌ ಕಮಾಂಡರ್‌ ಅಭಿನಂದನ್‌ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದರೆ, ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್‌ ದಾಖಲೆ ಮಾಡುವಲ್ಲಿ ನಿರತವಾಗಿದ್ದಾರೆ. ಇಂಥದ್ದೊಂದು ಪ್ರಕ್ಷುಬ್ಧ ಸನ್ನಿವೇಶದಲ್ಲಿ ಈ ರೀತಿಯ ಕಾರ್ಯಕ್ರಮ ಮಾಡಬೇಕಿತ್ತೇ ಎಂದು ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ಪ್ರಶ್ನಿಸಿವೆ. 

ಮೋದಿ ಅವರು ಆದ್ಯತೆಗಳನ್ನೇ ಮರೆತಿದ್ದಾರೆ. ಅವರು ಲೋಕಸಭೆ ಚುನಾವಣೆಯಲ್ಲಿ ಮರು ಆಯ್ಕೆಯ ಬಗ್ಗೆಯೇ ತಲೆಕೆಡಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಇಂದು ನಡೆಯಬೇಕಿದ್ದ ಕಾರ್ಯಕಾರಿ ಸಮಿತಿ ಸಭೆ ಮತ್ತು ಎಲ್ಲ ರ್ಯಾಲಿಗಳನ್ನೂ ರದ್ದು ಮಾಡಿದೆ. ಆದರೆ, ಮೋದಿ ವಿಡಿಯೋ ಕಾನ್ಫರೆನ್ಸ್‌ ದಾಖಲೆ ಮಾಡುವ ತರಾತುರಿಯಲ್ಲಿದ್ದಾರೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ. 

ಇದೇ ವೇಳೆ, ಭಾರತ-ಪಾಕಿಸ್ಥಾನದ ನಡುವೆ ಉದ್ವಿಗ್ನ ವಾತಾವರಣವಿರುವಾಗ ಪ್ರಧಾನಿ ಮೋದಿ ಇಂಥ ಕಾರ್ಯಕ್ರಮ ನಡೆಸುತ್ತಿರುವುದು ರಾಷ್ಟ್ರೀಯ ಭಾವನೆಗಳಿಗೆ ಬಗೆದ ದ್ರೋಹ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ. ಪ್ರಧಾನಿ ಕಾರ್ಯಕ್ರಮದ ವಿರುದ್ದ ಆಮ್‌ ಆದ್ಮಿ ಪಕ್ಷ ಸೇರಿದಂತೆ ವಿಪಕ್ಷಗಳ ವಿವಿಧ ನಾಯಕರು ದಾಖಲೆಯ ವಿಡಿಯೋ ಕಾರ್ಯಕ್ರಮದ ವಿರುದ್ಧ ಪ್ರಬಲವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next