Advertisement

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

12:51 AM Apr 17, 2024 | Team Udayavani |

ಮಂಗಳೂರು: ಮಂಗಳೂರಿನಲ್ಲಿ ರೋಡ್‌ ಶೋ ಆರಂಭಿಸುವ ಮೊದಲು ಪ್ರಧಾನಿ ನರೇಂದ್ರ ಮೋದಿಯವರು ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ದೊಡ್ಡ ಗೌರವ ಸಲ್ಲಿಸಿದ್ದಾರೆ. ಮಾತ್ರವಲ್ಲದೆ, ದೇಶ ವಿದೇಶಗಳ ಜನರು ಕೂಡ ನಾರಾಯಣ ಗುರುಗಳ ಪ್ರತಿಮೆಯನ್ನು ನೋಡುವಂತೆ ಮಾಡಿದ್ದಾರೆ. ಇದು ತುಂಬಾ ಸಂತಸ ತಂದಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಹೇಳಿದರು.

Advertisement

ಅವರು ಮಂಗಳವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜಕೀಯ ಕಾರಣ ಕ್ಕಾಗಿ ಮಾಲಾರ್ಪಣೆ ಮಾಡಿದ್ದಾರೆ ಎಂದು ಕಾಂಗ್ರೆಸ್‌ನವರು ಹೇಳುವುದು ಸರಿಯಲ್ಲ. ಒಂದು ವೇಳೆ ರಾಜಕೀಯ ಕಾರಣವಾಗಿದ್ದರೆ ಮೋದಿಯವರು ಬರುವ ಮೊದಲು ಕಾಂಗ್ರೆಸ್‌ನವರು ಸಿಎಂ ಸಿದ್ದರಾಮಯ್ಯ ಅವರನ್ನು ಕರೆ ತಂದು ಮಾಲಾರ್ಪಣೆ ಮಾಡಿಸಬಹುದಿತ್ತು. ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡಿರುವುದನ್ನು ಪ್ರಶ್ನಿಸಬಾರದು. ನಾರಾಯಣ ಗುರುಗಳು ಜಗತ್ತಿನ ಶ್ರೇಷ್ಠ ಮಾನವತಾವಾದಿ. ಅವರಿಗೆ ಗೌರವ ನೀಡುವುದರಲ್ಲಿ ಯಾರು ಕೂಡ ಮತ್ಸರ ಮಾಡಬಾರದು ಎಂಬುದಾಗಿ ವಿನಂತಿ ಮಾಡುವುದಾಗಿ ಸತೀಶ್‌ ಹೇಳಿದರು.

ವೃತ್ತ ನಿರ್ಮಿಸಿದ್ದು ಬಿಜೆಪಿಯವರು
ಲೇಡಿಹಿಲ್‌ ನಲ್ಲಿ ನಾರಾಯಣ ಗುರುಗಳ ವೃತ್ತ ನಿರ್ಮಾಣಕ್ಕೆ ಬಿಜೆಪಿ ಹೋರಾಟವನ್ನೇ ಮಾಡಿತ್ತು. ರವಿಶಂಕರ ಮಿಜಾರು ಮುಡಾ ಅಧ್ಯಕ್ಷರಾಗಿದ್ದಾಗ, ಪ್ರೇಮಾನಂದ ಶೆಟ್ಟಿ ಅವರು ಮೇಯರ್‌ ಆಗಿದ್ದಾಗ ದಿವಾಕರ ಪಾಂಡೇಶ್ವರ ಅವರು ವೃತ್ತ ನಿರ್ಮಾಣ ಯೋಜನೆ ಪ್ರಸ್ತಾವಿಸಿದ್ದರು. ಸಂಸದ ನಳಿನ್‌ ಕುಮಾರ್‌, ಶಾಸಕ ವೇದವ್ಯಾಸ ಕಾಮತ್‌ ಅವರು ಮುತುವರ್ಜಿ ವಹಿಸಿ ಕೆಲಸ ಮಾಡಿಸಿದ್ದರು. ಈಗ ಪ್ರಧಾನಿಯವರು ವೃತ್ತದಲ್ಲಿರುವ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಹಾಗಾಗಿ ವೃತ್ತ ನಿರ್ಮಾಣದ ಶ್ರಮ ಕೂಡ ಸಾರ್ಥಕವಾಗಿದೆ ಎಂದು ಸತೀಶ್‌ ಕುಂಪಲ ಹೇಳಿದರು.

ರೋಡ್‌ ಶೋ ಯಶಸ್ವಿ
ಪ್ರಧಾನ ಮಂತ್ರಿಯವರ ರೋಡ್‌ ಶೋದಲ್ಲಿ ಜಿಲ್ಲೆಯ ಜನತೆ ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿದ್ದಾರೆ. ಮಕ್ಕಳು, ಯುವಕರು, ಮಹಿಳೆಯರು ಹೀಗೆ ಕುಟುಂಬ ಸಮೇತವಾಗಿ ಪಾಲ್ಗೊಂಡಿರುವುದು ಅಭಿನಂದನೀಯ. ಅನೇಕ ಮಂದಿ ಕಲಾವಿದರು ಸ್ವಯಂ ಪ್ರೇರಿತವಾಗಿ ಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ರಾಮ, ಕೃಷ್ಣರ ವೇಷ ಧರಿಸಿದ್ದಾರೆ. ಇವರೆಲ್ಲರಿಗೂ ಪಕ್ಷ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಜಿಲ್ಲೆಗೆ ವಿಜಯೇಂದ್ರ, ಅಣ್ಣಾಮಲೈ
ಜಿಲ್ಲೆಯಲ್ಲಿ ಚುನಾವಣ ಪ್ರಚಾರ ಕಾರ್ಯದಲ್ಲಿ ಬಿಜೆಪಿ ಕಾರ್ಯ ಕರ್ತರು ಸಂಪೂರ್ಣವಾಗಿ ತೊಡಗಿಸಿಕೊಂಡಿ ದ್ದಾರೆ. 1,876 ಬೂತ್‌ಗಳಲ್ಲಿ ಪೂರ್ತಿ ಯಾಗಿ ಬೂತ್‌ ಮಟ್ಟದ ಸಭೆ ಮುಗಿ ದಿದೆ. ಮುಂದಿನ 3-4 ದಿನ 2ನೇ ಸುತ್ತಿನ ಬೂತ್‌ ಮಟ್ಟದ ಮನೆ ಸಂಪರ್ಕ ನಡೆಯಲಿದೆ. 61 ಕಡೆ ಸಾರ್ವಜನಿಕ ಸಭೆ ನಡೆಸಲು ನಿರ್ಧರಿಸಲಾಗಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎ. 20ರಂದು ಬಂಟ್ವಾಳ, ಬೆಳ್ತಂಗಡಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಎ. 22ಕ್ಕೆ ಸುಳ್ಯ ಮತ್ತಿತರ ಕೆಲವೆಡೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಯುವ ಮೋರ್ಚಾ, ಎಸ್‌ಸಿ ಮೋರ್ಚಾ, ಒಬಿಸಿ ಮೋರ್ಚಾ, ಮಹಿಳಾ ಮೋರ್ಚಾಗಳು ಸಕ್ರಿಯವಾಗಿ ಪಾಲ್ಗೊಂಡಿವೆ. ಎ. 19ಕ್ಕೆ ವಕೀಲರ ಸಭೆ ನಡೆಯಲಿದ್ದು ರಾಷ್ಟ್ರೀಯ ನಾಯಕ ಗೌರವ್‌ ಭಾಟಿಯಾ ಪಾಲ್ಗೊಳ್ಳಲಿದ್ದಾರೆ ಎಂದು ಕುಂಪಲ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್‌ ಆರುವಾರ್‌, ಲೋಕಸಭಾ ಚುನಾವಣ ಸಂಚಾಲಕ ನಿತಿನ್‌ಕುಮಾರ್‌, ನಾಯಕರಾದ ರವಿಶಂಕರ ಮಿಜಾರು, ಜಗದೀಶ ಶೇಣವ, ಸಂಜಯ ಪ್ರಭು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next