Advertisement

ಆಡಳಿತಕ್ಕೆ ಭಧ್ರ ಸರಕಾರ ಬೇಕು

12:30 AM Feb 14, 2019 | Team Udayavani |

ಹೊಸದಿಲ್ಲಿ: ಹದಿನಾರನೇ ಲೋಕಸಭೆ ಹಲವಾರು ಸುಧಾರಣೆಗಳನ್ನು ಹಾಗೂ ಭ್ರಷ್ಟಾಚಾರ ಹತ್ತಿಕ್ಕುವಲ್ಲಿ ಪ್ರಬಲ ಕಾನೂನುಗಳನ್ನು ಜಾರಿ ಮಾಡಿದೆ. ಕೇಂದ್ರದಲ್ಲಿ ಬಹುಮತದ ಸರಕಾರ ಬಂದರೆ ಮಾತ್ರ ಮುಂದೆಯೂ ಇಂಥ ದಕ್ಷ, ದಿಟ್ಟ ಆಡಳಿತ ನೀಡಬಹುದಾಗಿದೆ’  ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಾಲಿ ಸರಕಾರದ ಅಧಿವೇಶನ ಕೊನೆಯ ದಿನ ಪ್ರಧಾನಿ ಮೋದಿ  ಔಪಚಾರಿಕವಾಗಿ ಲೋಕಸಭೆಯಲ್ಲಿ ವಿದಾಯ ಭಾಷಣ ಮಾಡಿದರು. ಜತೆಗೆ ತಮ್ಮ ಸರಕಾರದ ಸಾಧನೆಗಳನ್ನು ಸದನಕ್ಕೆ ಮನವರಿಕೆ ಮಾಡಲು ಯತ್ನಿಸಿದರು. ಜತೆಗೆ, ವಿಪಕ್ಷಗಳ ನಾಯಕರಿಗೆರಿಗೆ ಬಿಸಿ ಮುಟ್ಟಿಸಿದರು.  

Advertisement

 16ನೇ ಲೋಕಸಭೆಯಡಿ ಈವರೆಗೆ ಆಗಿರುವ ಒಟ್ಟು ಕಲಾಪಗಳಲ್ಲಿ ಕನಿಷ್ಠ 8 ಕಲಾಪಗಳಾದರೂ ಶೇ. 100ರಷ್ಟು ಚರ್ಚೆಗಳಾಗಿವೆ. ಸರಾಸರಿ ಶೇ. 85ರಷ್ಟು ಕಲಾಪಗಳು ಯಶಸ್ವಿಯಾಗಿವೆ ಎಂದ ಅವರು, “ನಮ್ಮ ಸರಕಾರದ ಅವಧಿಯಲ್ಲಿ ಭಾರತವು ಹೆಚ್ಚೆಚ್ಚು ಸ್ವಾವಲಂಬಿ ರಾಷ್ಟ್ರವಾಯಿತು. ಇತರ ರಾಷ್ಟ್ರಗಳೊಂದಿಗಿನ ಬಾಂಧವ್ಯ ವೃದ್ಧಿಗೆ ಹೊಸ ಭಾಷ್ಯ ಬರೆಯಲಾಯಿತು ಎಂದರು. 2014ರ ಚುನಾವಣೆಯಲ್ಲಿ ಮೊದಲು ಚುನಾವಣೆ ಗೆದ್ದವರಲ್ಲಿ ತಾವೂ ಒಬ್ಬರು ಎಂದು ಅವರು ಹೇಳಿಕೊಂಡಿದ್ದಾರೆ. ಡಿಜಿಟಲ್‌ ಕ್ಷೇತ್ರದಲ್ಲಿ ದೇಶದ ಸಾಧನೆ ಅನನ್ಯವಾದದ್ದು ಎಂದು ಹೇಳಿದ್ದಾರೆ. ಜಾಗತಿಕ ತಾಪಮಾನದ ಬಗ್ಗೆ ಜಗತ್ತು ಮಾತನಾಡುತ್ತಿದ್ದರೆ, ಭಾರತ ಈ ನಿಟ್ಟಿನಲ್ಲಿ ಸೌರ ಒಕ್ಕೂಟ ರಚಿಸಿಕೊಂಡು ತಾಪಮಾನ ತಗ್ಗಿಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದೆ’ ಎಂದರು.

ಭೂಕಂಪವಾಗಲಿಲ್ಲ: ತಮ್ಮ ಮಾತುಗಳನ್ನು ರಾಹುಲ್‌ ಕಡೆಗೆ ತಿರುಗಿಸಿದ ಅವರು, ಅದರ ಜತೆಯಲ್ಲೇ ರಾಫೆಲ್‌ ಒಪ್ಪಂದದ ಬಗ್ಗೆ ಮಹಾಲೇಖಪಾಲರು ಸಲ್ಲಿಸಿದ ವರದಿಯನ್ನು ವಿರೋಧಿಸಿ ಬುಧವಾರ ಪೇಪರ್‌ ವಿಮಾನಗಳನ್ನು ಸದನದಲ್ಲಿ ತೂರಿಬಿಟ್ಟಿದ್ದನ್ನು ತಮ್ಮ ಟೀಕೆಗಳಿಗೆ ಬಳಸಿಕೊಂಡರು. 

“ಸದನದಲ್ಲಿ ನಾನು ಮಾತನಾಡಲು ಶುರು ಮಾಡಿದರೆ ಭೂಕಂಪವಾಗುತ್ತದೆ ಎಂದು ಸಂಸದರೊಬ್ಬರು ತಿಳಿಸಿದ್ದರು. ಆದರೆ, ಇದುವರೆಗೂ ಒಂದೇ ಒಂದು ಭೂಕಂಪ ಆಗಲಿಲ್ಲ. ಇಂದು ದೊಡ್ಡ ಮನುಷ್ಯರು ವಿಮಾನಗಳನ್ನು ಸದನದಲ್ಲಿ ಹಾರಿಬಿಡುತ್ತಿದ್ದಾರೆ. ಆದರೆ, ಈ ಲೋಕಸಭೆ ಅಂಥ ಅನೇಕ ಭೂಕಂಪಗಳನ್ನು ಜೀರ್ಣಿಸಿಕೊಂಡಿದೆ. ಜತೆಗೆ, ದೈತ್ಯರ ವಿಮಾನಗಳು ತನ್ನ ಉನ್ನತಿಯತ್ತ ಸುಳಿಯಲೂ ಸಾಧ್ಯವಾಗದಂಥ ಎತ್ತರದಲ್ಲಿದೆ’ ಎಂದು ವ್ಯಂಗ್ಯವಾಡಿದರು.  

“ಅಪ್ಪಿಕೊಳ್ಳುವುದು ಅಥವಾ ಹೆಗಲಿಗೆ ಜೋತುಬೀಳು ವುದು. ಇವೆರೆಡರ ಅರ್ಥವೇನೆಂದು ಇದೇ ಸದನದಲ್ಲಿ ನನಗೆ ಮನವರಿಕೆಯಾಯಿತು. ಜತೆಗೆ, ಕಣ್ಣು ಹೊಡೆಯುವುದರ ಮೂಲಕ ಹೇಗೆ ಸದನದ ಗೌರವಕ್ಕೆ ಕುಂದು ತರುವಂತೆ ವರ್ತಿಸಬಹುದು ಎಂಬುದನ್ನೂ ನಾನು ಇಲ್ಲೇ ಕಲಿತೆ’ ಎಂದು ರಾಹುಲ್‌ ವಿರುದ್ಧ ವಾಗ್ಧಾಳಿ ನಡೆಸಿದರು. 

Advertisement

ನೀವು ಮತ್ತೆ ಎಂ ಆಗಬೇಕು
ಪ್ರಧಾನಿ ಮೋದಿ ಮಾತನಾಡುವ ವೇಳೆ ಎಸ್‌ಪಿ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಪ್ರಧಾನಿ ನರೇಂದ್ರ ಮೋದಿಯವರನ್ನುದ್ದೇಶಿಸಿ “ನೀವೇ ಮತ್ತೆ ಪ್ರಧಾನಿಯಾಗಬೇಕು’ ಎಂದರು. “ಸದ್ಯ ಈ ಸದನದಲ್ಲಿ ಸದಸ್ಯರಾಗಿರುವವರೆಲ್ಲರೂ ಮತ್ತೆ ಆಯ್ಕೆಯಾಗಿ ಬರಬೇಕು’ ಎಂದು ಹೇಳಿದರು. ಅವರು ಈ ಮಾತುಗಳನ್ನಾಡುವಾಗ ಬಳಿಯಲ್ಲಿ ಸೋನಿಯಾ ಗಾಂಧಿ ಕುಳಿತಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಮೋದಿ, “ಅದಕ್ಕಾಗಿ ತುಂಬ ಕೆಲಸ ಮಾಡಬೇಕಾಗಿದೆ. ಮುಲಾಯಂ ಸಿಂಗ್‌ ಯಾದವ್‌ ಜೀ ಆಶೀರ್ವಾದ ಮಾಡಿದ್ದಾರೆ. ಅವರಿಗೆ ಆಭಾರಿಯಾಗಿದ್ದೇನೆ’ ಎಂದು ಕೈ ಮುಗಿದರು. ಬಿಜೆಪಿ ಸದಸ್ಯರು ಜೈ ಶ್ರೀರಾಂ ಎಂದು ಘೋಷಣೆ ಹಾಕಿದರು. ಪ್ರತಿಪಕ್ಷಗಳು ಮಹಾಮೈತ್ರಿಕೂಟ ರಚನೆ ಯತ್ನದಲ್ಲಿ ಇರುವಾಗಲೇ ಉ.ಪ್ರ. ಮಾಜಿ ಮುಖ್ಯಮಂತ್ರಿ ಈ ಮಾತು ಹೇಳಿದ್ದಾರೆ.

ಅನುಮೋದನೆಗೊಳ್ಳದ ಮಸೂದೆಗಳು
ಮಹಿಳಾ ಮೀಸಲು, ತ್ರಿವಳಿ ತಲಾಖ್‌,  ಪೌರತ್ವ (ತಿದ್ದುಪಡಿ) ವಿಧೇಯಕ ಈ ಬಾರಿ ಅನುಮೋದನೆಗೊಳ್ಳುವ ವಿಶ್ವಾಸ ಇದ್ದದ್ದು ಹುಸಿಯಾಗಿದೆ. ಲೋಕಸಭೆಯಲ್ಲಿ ತ್ರಿವಳಿ ತಲಾಖ್‌ ವಿಧೇಯಕಕ್ಕೆ ಅನುಮೋದನೆ ಸಿಕ್ಕಿದರೂ ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿಲ್ಲ. ಹಾಲಿ ಲೋಕಸಭೆಯ ಅವಧಿ ಜೂ. 3ರಂದು ಮುಕ್ತಾಯಗೊಳ್ಳಲಿದೆ. ಅದೇ ವೇಳೆಗೆ ಪೌರತ್ವ (ತಿದ್ದುಪಡಿ) ವಿಧೇಯಕ, ತ್ರಿವಳಿ ತಲಾಖ್‌ ವಿಧೇಯಕ ಬಿದ್ದು ಹೋಗಲಿವೆ. ರಾಜ್ಯಸಭೆಯಲ್ಲಿ ಮಂಡನೆಯಾಗಿರುವ ವಿಧೇಯಕಗಳು ಬಿದ್ದು ಹೋಗುವುದಿಲ್ಲ. 

ಬಜೆಟ್‌ ಅಂಗೀಕಾರ: ಕೊನೆಯ ದಿನವಾದ ಬುಧವಾರ ರಾಜ್ಯಸಭೆಯಲ್ಲಿ ಚರ್ಚೆ ನಡೆಸದೆ ಮಧ್ಯಾಂತರ ಬಜೆಟ್‌, ಹಣಕಾಸು ವಿಧೇಯಕಕ್ಕೆ ಅನುಮೋದನೆ ನೀಡಿದೆ. ಲೋಕಸಭೆಯಲ್ಲಿ ಅನಿಯಂತ್ರಿತ ಠೇವಣಿ ನಿಯಂತ್ರಣ ವಿಧೇಯಕ ಅಂಗೀಕರಿಸಲಾಗಿದೆ. ರಾಜ್ಯಸಭೆಯಲ್ಲಿ ವಿವಾಹ ವಿಚ್ಛೇದನಕ್ಕೆ ಪೋಲಿಯೋ ಕಾರಣ ಅಲ್ಲ ಎಂಬ ವಿಧೇಯಕಕ್ಕೆ ಅನುಮೋದನೆ ಪಡೆಯಲಾಗಿದೆ. ಹಿಂದೂ ವಿವಾಹ ಕಾಯ್ದೆ ಸಹಿತ 5 ವೈಯಕ್ತಿಕ ಕಾಯ್ದೆಗಳಿಗೆ ಅದು ಅನ್ವಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next