Advertisement

ಪರಿಹಾರ ವಿತರಣೆ ಅಕ್ರಮದ ವಿರುದ್ಧ ತನಿಖೆ

07:20 AM Dec 15, 2018 | Team Udayavani |

ವಿಧಾನಸಭೆ: ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆಯಡಿ ರೈತರಿಗೆ ಪರಿಹಾರ ವಿತರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಿ ತಿಂಗಳಲ್ಲಿ ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಕೃಷಿ 
ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಹೇಳಿದರು. ಬೆಳೆ ವಿಮೆಯಡಿ ರೈತರಿಗೆ ವಿಮಾ ಕಂಪೆನಿಗಳು ಪರಿಹಾರ ನೀಡುತ್ತಿಲ್ಲ ಎಂದು
ಸದಸ್ಯರು ಪಕ್ಷಾತೀತವಾಗಿ ಆರೋಪಿಸಿದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರ ಸೂಚನೆಯಂತೆ ಸಚಿವರು ಕ್ರಮ ಕೈಗೊಳ್ಳುವ ಭರವಸೆ
ನೀಡಿದರು.

Advertisement

ಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ ಪ್ರಸ್ತಾಪಿಸಿದ ವಿಚಾರದ ಬಗ್ಗೆ ವಿಸ್ತ್ರತ ಚರ್ಚೆ ನಡೆಯಿತು. ಶಿವಲಿಂಗೇಗೌಡ ಮಾತನಾಡಿ, ಅರಸೀಕೆರೆ ಕ್ಷೇತ್ರದ ವ್ಯಾಪ್ತಿಯ ಗ್ರಾಮ ಪಂಚಾಯ್ತಿ ಪೈಕಿ ಮಾಡಾಳು, ಲಾಳನಕೆರೆ, ಬಾಗೀವಾಳು,
ಪುರಲೇಹಳ್ಳಿ, ಬೆಳಗುಂಬ ಗ್ರಾಪಂ ವ್ಯಾಪ್ತಿಯ ರೈತರಿಗೆ 2017-18ನೇ ಸಾಲಿನ ಬೆಳೆ ವಿಮಾ ಪರಿಹಾರ ವಿತರಿಸದೆ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿದರು. ಕ್ಷೇತ್ರದ 32 ಗ್ರಾಪಂಗೆ ವಿಮಾ ಕಂಪೆನಿ ಪ್ರತಿನಿಧಿಗಳು ಕಟಾವು ಸಮೀಕ್ಷೆಗೆ ಭೇಟಿ ನೀಡಿದಾಗ ನಾನು ಅವರೊಂದಿಗೆ ತೆರಳಿ ಪರಿಶೀಲನೆ ನಡೆಸಿದ ಹಿನ್ನೆಲೆಯಲ್ಲಿ ಅಷ್ಟೂ ಪಂಚಾಯ್ತಿ ರೈತರಿಗೆ ಉತ್ತಮ ವಿಮಾ ಮೊತ್ತ ಸಿಕ್ಕಿದೆ. ಆದರೆ ನಾನು ಪರಿಶೀಲನೆ ವೇಳೆ ಹಾಜರಿರದ ಐದು ಪಂಚಾಯ್ತಿ ರೈತರಿಗೆ ವಿಮಾ ಪರಿಹಾರ ನೀಡಿಲ್ಲ. ಅಷ್ಟು ಪಂಚಾಯ್ತಿಗೆ
ಮಾತ್ರ ಮಳೆ ಸುರಿಯಿತೆ? ಎಲ್ಲಿಂದ ನೀರು ಹರಿಯಿತು ಎಂದು ಪ್ರಶ್ನಿಸಿದರು. 

ಕೆಲ ವಿಮಾ ಕಂಪೆನಿಗಳು ರೈತರಿಗೆ ಮೋಸ ಮಾಡಲು ಬಂದಿರುವ ಢಾಕುಗಳು ಎಂದರೆ ತಪ್ಪಾಗಲಾರದು. ಗ್ರಾಮ ಲೆಕ್ಕಿಗರು, ಕಂಪೆನಿ ಪ್ರತಿನಿಧಿಗಳು, ಕೆಲ ಅಧಿಕಾರಿಗಳು ಶಾಮೀಲಾಗಿ ವಂಚಿಸುತ್ತಿದ್ದಾರೆ. ಈ ವಿಮಾ ಕಂಪೆನಿಗಳು ರೈತರನ್ನು ಸಾಕಷ್ಟು 
ವಂಚಿಸುತ್ತಿವೆ. ನನ್ನ ಆರೋಪದಲ್ಲಿ ಸುಳ್ಳಿದ್ದರೆ ಸದನ ಶಿಕ್ಷೆ ನೀಡಲಿ. ಆರೋಪದಲ್ಲಿ ಸತ್ಯವಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿ. ಕೇಂದ್ರ ಸರ್ಕಾರದೊಂದಿಗೆ ಜಂಟಿಯಾಗಿ ಫ‌ಸಲ್‌ ಬಿಮಾ ಯೋಜನೆ ಜಾರಿಗೊಳಿಸುವ ಬದಲಿಗೆ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ವಿಮಾ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಆಗ ಸಚಿವ ಶಿವಶಂಕರರೆಡ್ಡಿ, ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

ಇದಕ್ಕೆ ಸಮಾಧಾನಗೊಳ್ಳದ ಬಿಜೆಪಿಯ ಆರಗ ಜ್ಞಾನೇಂದ್ರ, ಬಹಳಷ್ಟು ಮಂದಿ ವಿಮಾ ಕಂತುಗಳನ್ನು ಪಾವತಿಸಿದ್ದು, ಕೆಲವರಿಗಷ್ಟೇ ಪರಿಹಾರ ಮೊತ್ತ ಸಿಕ್ಕಿದೆ. ಇಲಾಖೆ ಕೆಲ ಅಧಿಕಾರಿಗಳು ಹಾಗೂ ಕೆಲ ವಿಮಾ ಕಂಪೆನಿ ಏಜೆಂಟರು ಶಾಮೀಲಾಗಿ ಮೋಸ
ಮಾಡುತ್ತಿದ್ದಾರೆ. ಹೀಗೆ ಮುಂದುವರಿದರೆ ಪ್ರಧಾನ ಮಂತ್ರಿ ಫ‌ಸಲ್‌ ಬಿಮಾ ಯೋಜನೆಯ ಬಗ್ಗೆ ವಿಶ್ವಾಸವೇ ಇಲ್ಲದಂತಾಗುತ್ತದೆ ಎಂದು ಹೇಳಿದರು. ಜೆಡಿಎಸ್‌ನ ಸಿ.ಎನ್‌.ಬಾಲಕೃಷ್ಣ, ಹಾಸನದಲ್ಲೂ ಇದೇ ರೀತಿ ನಡೆ ದಿದ್ದು, ರೈತರಿಗೆ ತೊಂದರೆಯಾಗಿದೆ. ವಿಮಾ ಕಂಪೆನಿ ಗಳು ಲಾಭ ಪಡೆಯುತ್ತಿವೆ ಎಂದು ದೂರಿದರು. 

ಕೊನೆಗೆ ಮಾತನಾಡಿದ ಸಭಾಧ್ಯಕ್ಷ ರಮೇಶ್‌ ಕುಮಾರ್‌, ಎಲ್ಲ ವಿಮಾ ಕಂಪೆನಿಗಳು ವಂಚಿಸುತ್ತವೆ ಎಂದು ಹೇಳುವುದಿಲ್ಲ. ರೈತರಿಗೆ ಅನ್ಯಾಯವಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕೂಡಲೇ ಈ ಬಗ್ಗೆ ತನಿಖೆ ನಡೆಸಬೇಕು. ತಿಂಗಳಲ್ಲಿ ವರದಿ ಪಡೆದು ಅಕ್ರಮದಲ್ಲಿ ಶಾಮೀಲಾಗಿರುವವರನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಕೆಲವರಾದರೂ ಶಿಕ್ಷೆಗೆ ಗುರಿಯಾಗಿ ಜಾಮೀನಿಗೆ
ನಿಲ್ಲುವಂತಾಗಲಿ ಎಂದು ಸಲಹೆ ನೀಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ತನಿಖೆ ನಡೆಸಿ ತಿಂಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಮಂಗನ ಕಾಯಿಲೆ ನಿಯಂತ್ರಣಕ್ಕೆ ಮನವಿ
ಸೊರಬ, ತೀರ್ಥಹಳ್ಳಿ, ಸಾಗರ ಸೇರಿ ಶಿವಮೊಗ್ಗ ಭಾಗದಲ್ಲಿ ಕಾಣಿಸಿಕೊಂಡಿರುವ ಮಂಗನ ಕಾಯಿಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಬಿಜೆಪಿಯ ಆರಗ ಜ್ಞಾನೇಂದ್ರ, ಹಾಲಪ್ಪ ಆಗ್ರಹಿಸಿದರು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ
ಅವರು, ಮಂಗನ ಕಾಯಿಲೆಯಿಂದ ಜನರ ಸಾವು ಪ್ರಕರಣಗಳು ಸಂಭವಿಸುತ್ತಿದೆ. ಸರ್ಕಾರ ತಕ್ಷಣ ವಿಷಯ ಗಂಭೀರವಾಗಿ ಪರಿಗಣಿಸ ಬೇಕೆಂದು ಒತ್ತಾಯಿಸಿದರು. ಆರೋಗ್ಯ ಸಚಿವರು ಅನುಮತಿ ಪಡೆದು ಗೈರು ಹಾಜರಾಗಿದ್ದು, ಸೋಮವಾರ ಉತ್ತರ ಕೊಡಿಸುವುದಾಗಿ ಸೀ³ಕರ್‌ ರಮೇಶ್‌ಕುಮಾರ್‌ ಭರವಸೆ ನೀಡಿದರು.

ರಾಜ್ಯದಲ್ಲಿ ಭೀಕರ ಬರ ಕಾಣಿಸಿಕೊಂಡಿದೆ. ಪ್ರಧಾನ ಮಂತ್ರಿ ಫ‌ಸಲ್‌ ಬಿಮಾ ಯೋಜನೆಯಡಿ ರೈತರಿಗೆ ಪ್ರಯೋಜನವಾಗಬೇಕು. ಕೆಲ ವಿಮಾ ಕಂಪೆನಿಗಳು ವಂಚಿಸುತ್ತಿದ್ದು, ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು. ಕೂಡಲೇ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರು ಬೀದಿಗಿಳಿಯುತ್ತಾರೆ.
 ●ಬಿ.ಎಸ್‌.ಯಡಿಯೂರಪ್ಪ, ಪ್ರತಿಪಕ್ಷ ನಾಯಕ 

Advertisement

Udayavani is now on Telegram. Click here to join our channel and stay updated with the latest news.

Next