Advertisement

ಬೀಜಾಡಿ : ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಬೀಗ!

02:30 AM Jun 18, 2018 | Team Udayavani |

ಕೋಟೇಶ್ವರ: ಮಳೆಗಾಲದಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚು. ಆರೋಗ್ಯ ಕ್ಷೀಣಿಸುವುದೂ ಇದೇ ಸಂದರ್ಭದಲ್ಲೇ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಕೇಂದ್ರಗಳ ಅಗತ್ಯ ಇನ್ನೂ ಹೆಚ್ಚು. ಆದರೆ ಗೋಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಬೀಜಾಡಿ ಸರಕಾರಿ ಆರೋಗ್ಯ ಉಪಕೇಂದ್ರ ಬಾಗಿಲು ಮುಚ್ಚಿ ವರ್ಷ ಕಳೆದಿದೆ.

Advertisement

2017ರಿಂದ ಮುಚ್ಚಿದ ಕೇಂದ್ರ
ಗೋಪಾಡಿ ಗ್ರಾ.ಪಂ. ಕಟ್ಟಡದ ಸನಿಹದಲ್ಲೇ ಈ ಆರೋಗ್ಯ ಉಪಕೇಂದ್ರವಿದೆ. ಆದರೆ 2017 ಜುಲೈನಿಂದ ಸಿಬ್ಬಂದಿ ಇಲ್ಲದೆ ಬಾಗಿಲು ಮುಚ್ಚಿದೆ. ಆದ್ದರಿಂದ ಬಡರೋಗಿಗಳು ಪರದಾಡಬೇಕಾದ ಸಂದಿಗ್ಧ ಪರಿಸ್ಥಿತಿ ಬಂದೊದಗಿದೆ.

ಮಹಿಳಾ ಆರೋಗ್ಯ ಸಹಾಯಕಿ ಹುದ್ದೆ ಖಾಲಿ 
ಬೀಜಾಡಿ ಉಪಕೇಂದ್ರದಲ್ಲಿ ಬೇಕಾದ ಎಲ್ಲ ಸೌಕರ್ಯ ಹೊಂದಿದ್ದರೂ ಇಲ್ಲಿ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆ ಒಂದು ವರ್ಷದಿಂದ ಖಾಲಿ ಇದೆ. ಆದ್ದರಿಂದ ಈಗ ಬೀಗ ಹಾಕಲಾಗಿದೆ.

ಪ್ರತ್ಯೇಕ ಆರೋಗ್ಯ ಕೇಂದ್ರಗಳಿಗೆ ಬೇಡಿಕೆ 
ಈಗಾಗಲೇ ಬೀಜಾಡಿ ಹಾಗೂ ಗೋಪಾಡಿ ಗ್ರಾಮಗಳು ಪ್ರತ್ಯೇಕಗೊಂಡಿದ್ದು ಗೋಪಾಡಿಯು ನೂತನ ಗ್ರಾ.ಪಂ. ಆಗಿ ಅಸ್ತಿತ್ವಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಎರಡೂ ಗ್ರಾಮಗಳಲ್ಲಿ ಆರೋಗ್ಯ ಉಪಕೇಂದ್ರ ಆಗಬೇಕೆನ್ನುವ ಬೇಡಿಕೆ ಇದೆ. ಈವರೆಗೆ ಗೋಪಾಡಿ ಹಾಗೂ ಬೀಜಾಡಿ ಒಂದೇ ಗ್ರಾ.ಪಂ.ನಲ್ಲಿ ಇದ್ದ ಕಾರಣ ಗೋಪಾಡಿಯಲ್ಲಿ ಬೀಜಾಡಿ ಆರೋಗ್ಯ ಉಪಕೇಂದ್ರವನ್ನು ಆರಂಭಿಸಲಾಗಿತ್ತು. ಆದರೆ ಗ್ರಾಮ ವಿಭಾಗ ಆದ್ದರಿಂದ ಪ್ರತ್ಯೇಕ ಆರೋಗ್ಯ ಕೇಂದ್ರ ಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ. ಈ ಸಂಬಂಧ ಪಂಚಾಯತ್‌ ನಿರ್ಣಯ ಕೈಗೊಂಡು ಆರೋಗ್ಯ ಇಲಾಖೆಯ ಅದಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಆದರೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಮುಚ್ಚಿದ ಆರೋಗ್ಯ ಕೇಂದ್ರೂ ತೆರೆಯಲಿಲ್ಲ.

ಮಂಜೂರಾತಿಗೆ ವಿಳಂಬ
ಆರೋಗ್ಯ ಸಹಾಯಕರಿಲ್ಲದೇ ಕೇಂದ್ರ ಮುಚ್ಚಿದ್ದರಿಂದ ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಲಿಖಿತ ಪತ್ರ ಬರೆಯಲಾಗಿದೆ. ಆದರೆ ಇಲಾಖೆ ಮಂಜೂರಾತಿ ಆಗಿಲ್ಲ. ಪ್ರಸ್ತುತ ಗೋಪಾಡಿಯಲ್ಲಿರುವ ಬೀಜಾಡಿ ಆರೋಗ್ಯ ಉಪಕೇಂದ್ರದ ಹೆಸರನ್ನು ಬದಲಾಯಿಸಿ ಅಲ್ಲಿ ಮಹಿಳಾ ಆರೋಗ್ಯ ಸಹಾಯಕಿಯನ್ನು ನೇಮಕ ಮಾಡಿದಲ್ಲಿ ಒಂದು ಹಂತದ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತಾರೆ ಕುಂಭಾಶಿ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ| ಶೋಭಾ.

Advertisement

ಇಲಾಖೆಗೆ ಮಾಹಿತಿ 
ಖಾಲಿಯಿರುವ 320 ಮಹಿಳಾ ಆರೋಗ್ಯ ಸಹಾಯಕರ ಹುದ್ದೆಯಲ್ಲಿ  190 ಹುದ್ದೆ ಭರ್ತಿಯಾಗಿದೆ. ಉಳಿದ ಹುದ್ದೆಗಳಿಗೆ ತುಂಬಬೇಕಿದೆ. ಇಲಾಖೆಗೆ ಮಾಹಿತಿ ನೀಡಲಾಗಿದೆ. 
– ಶ್ರೀಲತಾ ಎಸ್‌. ಶೆಟ್ಟಿ, ಜಿ.ಪಂ. ಸದಸ್ಯೆ

ಮನವಿ 
ಉಡುಪಿ ಜಿಲ್ಲೆಯಲ್ಲಿ ಭರ್ತಿಯಾಗದೇ ಉಳಿದಿರುವ ಆರೋಗ್ಯ ಸಹಾಯಕಿಯರ ಹುದ್ದೆಯ ನೇಮಕಾತಿಗೆ ಸಂಬಂಧಪಟ್ಟಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನೇಮಕಾತಿಯಾದೊಡನೆ ಹುದ್ದೆ ಭರ್ತಿಮಾಡಲಾಗುವುದು.
– ಡಾ| ರೋಹಿಣಿ, ಡಿ.ಎಚ್‌.ಒ.

ಕ್ರಮ ಕೈಗೊಂಡಿಲ್ಲ
ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆರೋಗ್ಯ ಉಪಕೇಂದ್ರವನ್ನು ಆರಂಭಿಸಲು ಕೇಳಿಕೊಳ್ಳಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. 
– ಸರಸ್ವತಿ ಜಿ.ಪುತ್ರನ್‌, ಅಧ್ಯಕ್ಷರು, ಗ್ರಾ.ಪಂ. ಗೋಪಾಡಿ

— ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next