ಮುಂಬಯಿ: “ಅಂತಾರಾಷ್ಟ್ರೀಯ ಶಾಂತಿ ಮತ್ತು ಸಮಗ್ರತೆ’ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯ ಕೊಡುಗೆಗಾಗಿ ಥಾçಲ್ಯಾಂಡ್ ಬ್ಯಾಂಕಾಕ್‌ನಲ್ಲಿ ಜರಗಿದ “ಗ್ಲೋಬಲ್ ಅಚೀವರ್ಸ್ ಫೌಂಡೇಶನ್’ನ ಶೃಂಗ ಸಭೆಯಲ್ಲಿ ಬಹ್ರೈನ್ ನಿವಾಸಿ, ಅನಿವಾಸಿ ಭಾರತೀಯ ಲೀಲಾಧರ್ ಬೈಕಂಪಾಡಿ ಅವರಿಗೆ ಪ್ರತಿಷ್ಠಿತ “ಪ್ರೈಡ್ ಆಫ್ ಏಷ್ಯಾ ಅಂತಾರಾಷ್ಟ್ರೀಯ ಪ್ರಶಸ್ತಿ’ಯನ್ನು ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಯಿತು.
ಥೈಲ್ಯಾಂಡಿನ ಬ್ಯಾಂಕಾಕ್ ಮಹಾನಗರದ ಹಾಲಿಡೇ ಇನ್° ಸಿಲೋಮ್ ಪಂಚತಾರಾ ಹೊಟೇಲಿನಲ್ಲಿ ಇತ್ತೀಚೆಗೆ ಜರಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಥಾçಲ್ಯಾಂಡಿನ ಮಾಜಿ ಉಪ ಪ್ರಧಾನಿ ಕೋರ್ನ್ ಡೆಬೆರಾನ್ಸಿ ಹಾಗೂ ಫ್ರಾನ್ಸಿನ ರಾಜಕುಮಾರಿ ಇಸಾಬೆಲ್ ಲಫೋರ್ಗ್ ಇವರು ಜಂಟಿಯಾಗಿ ಈ ಪ್ರಶಸ್ತಿಯನ್ನು ಲೀಲಾಧರ್ ಬೈಕಂಪಾಡಿಯವರಿಗೆ ಪ್ರದಾನಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಭಾರತೀಯ ರಾಯಭಾರಿ ಕಚೇರಿ ಬ್ಯಾಂಕಾಕ್ ಪ್ರತಿನಿಧಿ ಡಾ| ಸಂಜಯ್ ಕುಮಾರ್, ಅಮೆರಿಕಾದ ಗ್ಲೋಬಲ್ ಯುನೈಟೆಡ್ ಪೇಜಂಟ್ ಸೌಂದರ್ಯ ಸ್ಪರ್ಧಾ ವಿಜೇತೆ ನಮಿತಾ ಪರಿತೋಷ್ ಕೊಹೊಕ್, ಬಿಜೆಪಿ ಹಿರಿಯ ರಾಷ್ಟ್ರೀಯ ನೇತಾರ ರಮೇಶ್‌ಚಂದ್ರ ರತನ್ ಮತ್ತು ಗ್ಲೋಬಲ್ ಅಚೀವರ್ಸ್ ಫೌಂಡೇಶನ್ ಬ್ಯಾಂಕಾಕ್ ಪ್ರತಿನಿಧಿ ಡಾ| ಕಮಲ್‌ಜಿತ್ ಸಿಂಗ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎರಡು ದಶಕಗಳಿಂದ ಉದ್ಯೋಗ ನಿಮಿತ್ತ ಬಹ್ರೈನ್ ನಿವಾಸಿಯಾಗಿರುವ ಲೀಲಾಧರ್ ಬೈಕಂಪಾಡಿಯವರು ನಿರಂತರವಾಗಿ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಯುವ ಸಂಘಟನೆಯ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ದೇಶ – ವಿದೇಶದಲ್ಲಿ ತನ್ನ ವೈಯಕ್ತಿಕ ನೆಲೆಯಲ್ಲಿ ಹಾಗೂ ವಿವಿಧ ಸಂಘಟನೆಗಳ ಮೂಲಕ ವೈವಿಧ್ಯಮಯ ಸೇವೆ ಮತ್ತು ಸಾಧನೆಗಳನ್ನು ಮಾಡುತ್ತಿದ್ದಾರೆ. ವೃತ್ತಿಯಲ್ಲಿ ವಿತ್ತ ಅಧಿಕಾರಿಯಾಗಿರುವ ಇವರು ಪ್ರವೃತ್ತಿಯಲ್ಲಿ ಪ್ರಗತಿಪರ ವಿಚಾರಧಾರೆಯ, ಸಮಾಜಮುಖೀ ಚಿಂತನೆಯ ಸಮಾಜ ಸೇವಕರಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಓರ್ವ ಚತುರ ಸಂಘಟಕನಾಗಿ ಗುರುತಿಸಿಕೊಂಡಿದ್ದಾರೆ. ದೇಶ, ವಿದೇಶದಲ್ಲಿ ಕೆಲವೊಂದು ಸಾಮುದಾಯಿಕ ಹಾಗೂ ಸಾಮಾಜಿಕ ಸಂಘಟನೆಗಳ ಸಂಸ್ಥಾಪಕರೂ ಹೌದು. ಜನಮುಖೀ ಕಾರ್ಯ ಚಟುವಟಿಕೆಗಳಿಗಾಗಿ ಸದಾ ಮುಂಚೂಣಿಯಲ್ಲಿ ನಿಲ್ಲುವ ಇವರು, ನೇರ ನಡೆ – ನುಡಿಯ ವ್ಯಕ್ತಿತ್ವವನ್ನು ಹೊಂದಿದ್ದಾರೆ.