ಶಿಕಾರಿಪುರ: ತಾಲೂಕಿನಲ್ಲಿ ಭೀಕರ ಬರಗಾಲದ ಛಾಯೆ ಇದ್ದು ಕೆರೆಕಟ್ಟೆಗಳು ತುಂಬದೇ ಇರುವುದರಿಂದ ಇಲ್ಲಿಗೆ ಶಾಶ್ವತ ನೀರಾವರಿ ಯೋಜನೆ ಅವಶ್ಯಕತೆ ಕಂಡು ಬರುತ್ತಿದೆ. ಕೇಂದ್ರ ಸರ್ಕಾರ ಜಲ ಸಂಪನ್ಮೂಲ ಇಲಾಖೆಯ ಆದೇಶದ ಪ್ರಕಾರ ವಸ್ತುಸ್ಥಿತಿಯ ಅಧ್ಯಯನಕ್ಕಾಗಿ ನಾವು ಇಲ್ಲಿಗೆ ಆಗಮಿಸಿದ್ದು ಇಲ್ಲಿನ ರೈತರ ಸಂಕಷ್ಟದ ಅರಿವಾಗಿದೆ. ಇದಕ್ಕೆ ಪೂರಕವಾಗಿ ಸಕಾರಾತ್ಮಕ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸುವುದಾಗಿ ಸಿ.ಡಬ್ಲೂ.ಸಿ ಮುಖ್ಯ ಇಂಜಿನಿಯರ್ ಆರ್.ಕೆ. ಜೈನ್ ಹೇಳಿದರು.
ಸಮೀಪದ ಅಂಜನಾಪುರ ಹಾಗೂ ಸುತ್ತ ಮುತ್ತ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನದ ಸಲುವಾಗಿ ಅಧ್ಯಯನ ತಂಡದೊಂದಿಗೆ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಶಿಕಾರಿಪುರ ತಾಲೂಕಿನ ಈ ಯೋಜನೆ ಇಷ್ಟೊಂದು ತೀವ್ರಗತಿಯಲ್ಲಿ ಮುಂದುವರೆಯಲು ಕಾರಣ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಸಂಕಲ್ಪ ಶಕ್ತಿ ಕಾರಣ. ಅವರು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ಅವರೊಂದಿಗೆ ಚರ್ಚಿಸಿ ಈ ಯೋಜನೆ ಅನುಷ್ಠಾನಗೊಳ್ಳಬೇಕೆಂದು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸ್ಥಳೀಯ ಶಾಸಕರು ಅತ್ಯಂತ ಕಾಳಜಿ ವಹಿಸಿ
ಈ ಯೋಜನೆ ಕಾರ್ಯರೂಪಕ್ಕೆ ತರಲು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ರೈತ ದೇಶದ ಬೆನ್ನೆಲೆಬು. ಪ್ರಾಮಾಣಿಕವಾಗಿ ಕಾನೂನಿನ ಚೌಕಟ್ಟಿನಲ್ಲಿ ರೈತರ ಪರವಾಗಿ ವರದಿಯನ್ನು ಸಂಬಂಧಿಸಿದ ಇಲಾಖೆಗೆ ಹಾಗೂ ಅಧಿಕಾರಿಗಳಿಗೆ ಕಳುಹಿಸುತ್ತೇನೆ. ನಿಮ್ಮ ಶಾಸಕರ ರೈತಪರ ಮತ್ತು ಸಾಮಾಜಿಕ ಕಳಕಳಿ ಮೆಚ್ಚುವಂತದ್ದು. ಇದು ಪ್ರಾಥಮಿಕ ವರದಿಯಾಗಿದ್ದು ಶೀಘ್ರದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಚಾಲನೆ ಸಿಗಲಿದೆ ಎಂದರು ನಂತರ ಮಾತನಾಡಿದ ಶಾಸಕ ಬಿ.ವೈ. ರಾಘವೇಂದ್ರ, ತಾಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನ ಯಡಿಯೂರಪ್ಪನವರ ಕನಸು. ಅದು ಈಗ ನನಸಾಗುವ ಕಾಲ ಬಂದಿದೆ. ಈಗ ಅನೇಕ ವರ್ಷಗಳ ಹಿಂದೆ ಸುಮಾರು ಇಪ್ಪತ್ತರಿಂದ ಇಪ್ಪತ್ತೆದು ಸಾವಿರ ಎಕರೆ ಭೂಮಿಯಲ್ಲಿ ಭತ್ತ ಬೆಳೆಯುತ್ತಿದ್ದರು. ಈಗ ಕೇವಲ ಐದು ಸಾವಿರ ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತಿದೆ. ಇದಕ್ಕೆ ಕಾರಣ ನೀರಿನ ಸಮಸ್ಯೆ. ಕಳೆದ ಮೂರ್‍ನಾಲ್ಕು ವರ್ಷಗಳ ಭೀಕರ ಬರಗಾಲದಿಂದ ಶೇ. 33 ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ತಾಲೂಕಿನಲ್ಲಿ ಸುಮಾರು 1200 ಕೆರೆಗಳಿದ್ದರೂ ಎರಡು ಜಲಾಶಯಗಳಿದ್ದರೂ ನಾವು ಬರಗಾಲದಿಂದ ತತ್ತರಿಸಿ ಹೋಗಿದ್ದೇವೆ ಎಂದರು.
ತುಂಗಾ ಮೇಲ್ದಂಡೆಯ ಮುಖ್ಯ ಇಂಜಿನಿಯರ್ ಕುಲಕರ್ಣಿ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ತುಂಗಾ ನೀರನ್ನು ಅಂಜನಾಪುರ ಜಲಾಶಯಕ್ಕೆ ಹರಿಸುವ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಭೆ ನಡೆಸಿದ್ದಾರೆ. 2002-03 ರಲ್ಲಿ ಶಿವಮೊಗ್ಗ
ತಾಲೂಕಿನ ಗೌಡನ ಕೆರೆಯಿಂದ ಅಂಜನಾಪುರ ಜಲಾಶಯಕ್ಕೆ ನೀರು ತರುವ ಯೋಜನೆ ಇತ್ತು. ನಂತರ ಅದು ಕಾರಣಾಂತರಗಳಿಂದ ಪ್ರಸ್ತಾವನೆ ಅನುಷ್ಠಾನಕ್ಕೆ ಬರಲಿಲ್ಲ ಎಂದರು. ಗೌಡನ ಕೆರೆಯಿಂದ ಅಂಜನಾಪುರಕ್ಕೆ ನೀರು ತರಲು ಸಾಧ್ಯವಿಲ್ಲ. ಅದಕ್ಕೆ ಕೆಲವು ಕಾನೂನಿನ ತೊಡಕುಗಳಿವೆ. ಇದು ದೊಡ್ಡದಾದ ಯೋಜನೆ ಆಗಿರುವುದರಿಂದ ತರಾತುರಿಯಲ್ಲಿ ಯಾವದೇ ಕೆಲಸ ಮಾಡಲು ಸಾಧ್ಯವಿಲ್ಲ. ಯೋಜನೆಯ ಸಾಧಕ ಭಾಧಕಗಳನ್ನು
ಪರಾಮರ್ಶಿಸಬೇಕಾಗುತ್ತದೆ. ಈ ಯೋಜನೆಗೆ ಬೇಕಾದಂತಹ ಎಲ್ಲ ರೀತಿಯ ಆಡಳಿತಾತ್ಮಕ ಕಾನೂನು ರೀತಿಯ ಸಹಕಾರವನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದರು.
ಯೋಜನೆಯ ಅನುಷ್ಠಾನಕ್ಕೆ ಅಂಜನಾಪುರ ಹೋಬಳಿಯ ರೈತರ ಪರವಾಗಿ ತಾಪಂ ಅಧ್ಯಕ್ಷ ಪರಮೇಶ್ವರಪ್ಪ ಅಧಿ ಕಾರಿಗಳಿಗೆ ಮನವಿ ಸಲ್ಲಿಸಿದರು. ಹೊಸೂರು ಹಾಗೂ ಕಸಬಾ ಹೋಬಳಿ ಪರವಾಗಿ ಚಂದ್ರೇಗೌಡ ಮನವಿ ಸಲ್ಲಿಸಿದರು. ಜಿಲ್ಲಾ ಜಾಗೃತಿ ಸಮಿತಿಯ ಕೆ.ಎಸ್. ಗುರುಮೂರ್ತಿ, ಹಾಲಪ್ಪ, ಜಿಪಂ ಸದಸ್ಯೆ ಅರುಧಂತಿ. ತಾಪಂ ಸದಸ್ಯ ಸುರೇಶ ನಾಯ್ಕ, ಎಪಿಎಂಸಿ ಅಧ್ಯಕ್ಷ ಸತೀಶ್ ತಾಳಗುಂದ, ನಾಗರಾಜ ಗೌಡ, ರಾಮಾನಾಯ್ಕ, ಪರಶುರಾಮ ಚಾರಗಲ್ಲಿ ಮತ್ತಿತರರು ಇದ್ದರು.