Advertisement

Puttur: ಬೀದಿ ಬದಿ ವ್ಯಾಪಾರಿಗಳಿಗೆ ನೆರವಾದ ಪಿಎಂ ಸ್ವನಿಧಿ ಯೋಜನೆ

01:27 PM Oct 17, 2024 | Team Udayavani |

ಪುತ್ತೂರು: ನಾಲ್ಕು ವರ್ಷದ ಹಿಂದೆ ಕೇಂದ್ರ ಸರಕಾರ ಜಾರಿಗೊಳಿಸಿದ ಪಿಎಂ ಸ್ವನಿಧಿ ಯೋಜನೆ ಪುತ್ತೂರಿನ ನಗರದ ಬೀದಿ ವ್ಯಾಪಾರಿಗಳಿಗೆ ನೆರವಾಗಿದೆ.

Advertisement

ಈ ಯೋಜನೆಗೆ ವರ್ಷದಿಂದ ವರ್ಷಕ್ಕೆ ಫಲಾನುಭವಿಗಳ ಸಂಖ್ಯೆ ಹೆಚ್ಚಿದ್ದು ಯೋಜನೆಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿರುವುದನ್ನು ಅಂಕಿ ಅಂಶ ತೆರೆದಿಟ್ಟಿದೆ.

ಏನಿದು ಪಿಎಂ ಸ್ವನಿಧಿ..!
ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಸಹಕಾರ ನೀಡುವ ನಿಟ್ಟಿನಲ್ಲಿ 2020ರಲ್ಲಿ ಆರಂಭಗೊಂಡ ಪ್ರಧಾನಮಂತ್ರಿ ಸ್ಟ್ರೀಟ್‌ ವೆಂಡರ್ಸ್‌ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ 10 ಸಾವಿರದಿಂದ ಗರಿಷ್ಠ 50 ಸಾವಿರದವರೆಗೂ ಸಾಲ ಸೌಲಭ್ಯವನ್ನು ಅನುಷ್ಠಾನಿಸಿತ್ತು.) ನಗರದಲ್ಲಿ ಬೀದಿಬದಿ ವ್ಯಾಪಾರ ನಿರತರಿಗೆ ಈ ಸಾಲ ಸೌಲಭ್ಯದ ಪ್ರಯೋಜನ ಲಭಿಸುತ್ತದೆ. ಪ್ರತೀ ನಗರಾಡಳಿತ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಬೀದಿ ವ್ಯಾಪಾರಿಗಳನ್ನು ಗುರುತಿಸಿ ಈ ಸಾಲ ಸೌಲಭ್ಯ ನೀಡಬೇಕು.

2021ರಲ್ಲಿ ಪುತ್ತೂರು ನಗರದಲ್ಲಿ 360 ಗುರಿ ನಿಗದಿಪಡಿಸಲಾಗಿತ್ತು. ಗುರಿ ಮೀರಿದ ಸಾಧನೆಗಾಗಿ 2022ರಲ್ಲಿ 652, 2023ರಲ್ಲಿ 750 ಗುರಿ ನೀಡಲಾಗಿತ್ತು. 2024ರಲ್ಲಿ 1,070 ಗುರಿ ನೀಡಲಾಗಿದೆ. 10 ಸಾವಿರ ರೂ. ಸಾಲಕ್ಕೆ ಸಂಬಂಧಿಸಿ 760 ಮಂದಿಗೆ, 20 ಸಾವಿರ ರೂ. ಸಾಲಕ್ಕೆ ಸಂಬಂಧಿಸಿ 247 ಮಂದಿಗೆ ಸಾಲ ದೊರಕಿದೆ. 50 ಸಾವಿರ ರೂ.76 ಮಂದಿ ಸಾಲ ಸಿಕ್ಕಿದೆ. 10 ಸಾವಿರ ರೂ. ಸಾಲ ಪಡೆದು ಮರು ಪಾವತಿ ಮಾಡಿದವರು 20 ಸಾವಿರ ರೂ. ಸಾಲ ಪಡೆಯಲು ಅರ್ಹತೆ ಹೊಂದಿ ದ್ದರೆ, 20 ಸಾವಿರ ರೂ. ಸಾಲ ಪಡೆದು ಮರು ಪಾವತಿ ಮಾಡಿದವರು 50 ಸಾವಿರ ರೂ. ಸಾಲ ಪಡೆಯಲು ಅರ್ಹತೆ ಹೊಂದುತ್ತಾರೆ.

ಯಾರು ಅರ್ಹರು ?
ಎಲ್ಲ ಬೀದಿ ಬದಿ ವ್ಯಾಪಾರಿಗಳು, ಲೈನ್‌ ಸೇಲ್‌ ಮಾಡುವವರು, ತಳ್ಳುಗಾಡಿ ವ್ಯಾಪಾರಿಗಳು, ಪೆಟ್ಟಿಗೆ ಅಂಗಡಿಯವರು, ಸಂತೆಯಲ್ಲಿ ತರಕಾರಿ ಇತ್ಯಾದಿ ಮಾರುವವರು, ತಲೆ ಹೊರೆ ವ್ಯಾಪಾರಿಗಳು, ಚರುಮುರಿ ಫಾಸ್ಟ್‌ಫುಡ್‌ ವ್ಯಾಪಾರಿಗಳು, ಹಾಲು ಮಾರುವವರು ಮೊದಲಾದವರು ಈ ಯೋಜನೆ ವ್ಯಾಪ್ತಿಯಲ್ಲಿ ಸೇರಿದ್ದಾರೆ. ಅರ್ಹ ಫಲಾನುಭವಿಗಳು ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸಂಪರ್ಕಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದು.

Advertisement

ಡಿಜಿಟಲ್‌ ವ್ಯವಹಾರ
ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಪಡೆದ ಬೀದಿಬದಿ ವ್ಯಾಪಾರಿಗಳಿಗೆ ಬ್ಯಾಂಕ್‌ ಮೂಲಕ ಕ್ಯುಆರ್‌ ಕೋಡ್‌ ನೀಡಿ ಡಿಜಿಟಲ್‌ ವ್ಯಾಪಾರಕ್ಕೂ ಉತ್ತೇಜನ ನೀಡುವ ಕಾರ್ಯ ನಡೆಯುತ್ತಿದೆ.

ಪುತ್ತೂರಿನಲ್ಲಿ ಈ ಬಾರಿ 1,070 ಗುರಿ ನೀಡಲಾಗಿದ್ದು 860 ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸಾಲ ನೀಡಲು ಬ್ಯಾಂಕ್‌ಗೆ ಶಿಫಾರಸ್ಸು ಪತ್ರ ನೀಡಲಾಗಿದೆ. ಇನ್ನೂ ಅರ್ಹರಿದ್ದರೆ ಅವರಿಗೂ ನೀಡಲಾ ಗುತ್ತದೆ. ಆಯಾ ನಗರದ ನಿವಾಸಿಗಳು ಮಾತ್ರ ಸೌಲಭ್ಯ ಪಡೆಯಬಹುದು.
-ಮಧು ಎಸ್‌. ಮನೋಹರ್‌,ಪೌರಯುಕ್ತ, ನಗರಸಭೆ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next