ಧಾರವಾಡ: ಭ್ರಷ್ಟಾಚಾರ ನಿರ್ಮೂಲನೆಗೆ ನಗದು ರಹಿತ ವಹಿವಾಟು ಒಂದೇ ಉತ್ತಮ ದಾರಿ ಆಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ನಗರದ ಕವಿವಿಯ ಮನಸೋಲ್ಲಾಸ ಸಭಾಂಗಣದಲ್ಲಿ ಕವಿವಿ ರಾಷ್ಟ್ರೀಯ ಸೇವಾ ಯೋಜನೆಯ ಕೋಶದಡಿಯಲ್ಲಿ ಸ್ಥಳೀಯ ಮಹಾವಿದ್ಯಾಲಯಗಳ ಸುಮಾರು 200 ಸ್ವಯಂ ಸೇವಕರಿಗೆ ಹಮ್ಮಿಕೊಂಡಿದ್ದ ವಿತ್ತೀಯ ಸಾಕ್ಷರತಾ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಪ್ರಪಂಚದಲ್ಲೇ ಅತೀ ನಿಪುಣ ಹಾಗೂ ಬುದ್ಧಿವಂತಿಕೆವುಳ್ಳ ಮಾನವ ಸಂಪನ್ಮೂಲ ಹೊಂದಿರುವ ರಾಷ್ಟ್ರವಾಗಿದೆ. ಆದರೂ ಪ್ರಪಂಚದಲ್ಲೇ ಅಪಾರ ಭ್ರಷ್ಟಾಚಾರ ಹೊಂದಿರುವ ರಾಷ್ಟ್ರವಾಗಿದ್ದು,ಇದರ ನಿರ್ಮೂಲನೆಗೆ ವಿತ್ತೀರಹಿತ ವಹಿವಾಟು ನಡೆಸುವುದೇ ಮೂಲತಂತ್ರವಾಗಿದೆ ಎಂದರು.
ಶಿಬಿರದಲ್ಲಿ ತರಬೇತಿ ಹೊಂದಿದ ಪ್ರತಿಯೊಬ್ಬ ಯುವಕರು ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರಿಗೆ ಹಾಗೂ ನೆರೆಹೊರೆಯವರಿಗೆ ವಿತ್ತೀಯ ಸಾಕ್ಷರತಾ ತರಬೇತಿ ನೀಡಿದರೆ ನಿಮ್ಮ ಜೀವನ ಸಾರ್ಥಕವಾಗುವುದರೊಂದಿಗೆ ದೇಶವು ಪ್ರಕಾಶಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ| ಪ್ರಮೋದ ಗಾಯಿ ಮಾತನಾಡಿ, ಕೇಂದ್ರ ಸರಕಾರವು ಕೈಗೆತ್ತಿಕೊಂಡ ಡಿಜಿಟಲ್ ಎಕಾನಮಿ ಮುಂದಿನ ಅಭಿವೃದ್ಧಿಗೆ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಸೂಕ್ತ ಸಾಧನವಾಗಿದೆ. ಭಾರತದಲ್ಲಿ ನಡೆದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಹೆಚ್ಚಿನ ಪ್ರಮಾಣದ ವಿತ್ತೀಯ ವ್ಯವಹಾರ ಮಾಡುವಂತೆ ಮಾನವ ಸಂಪನ್ಮೂಲದ ಸಚಿವರು ಆದೇಶ ನೀಡಿದ್ದು,
ಅದರನ್ವಯ ಕವಿವಿಯ ಎಲ್ಲ ವಹಿವಾಟುಗಳು ಭಾಗಶಃ ವಿತ್ತೀಯರಹಿತವಾಗಿರುತ್ತವೆ. ಕರ್ನಾಟಕ ವಿಶ್ವವಿದ್ಯಾಲಯದ ದತ್ತು ಗ್ರಾಮ ಮನಸೂರನ್ನು ಪರಿಪೂರ್ಣವಾಗಿ ಡಿಜಿಟಲ್ ಗ್ರಾಮವನ್ನಾಗಿಸುತ್ತೇವೆ ಎಂದರು. “ವಿತ್ತೀಯ ಸಾಕ್ಷರತಾ ಅಭಿಯಾನಕ್ಕೊಂದು ಕನ್ನಡದ ಕೈಪಿಡಿ’ ಬಿಡುಗಡೆಗೊಳಿಸಲಾಯಿತು. ಕುಲಸಚಿವ ಪ್ರೊ|ಎಮ್.ಎನ್.ಜೋಶಿ, ಮೌಲ್ಯಮಾಪನ ಕುಲಸಚಿವ ಡಾ|ನಿಜಲಿಂಗಪ್ಪ ಮಟ್ಟಿಹಾಳ ಇದ್ದರು.
ವೆಂಕಟೇಶ, ಕೃಷ್ಣಾಜಿ, ಪರಿಸರ ಪರಿವಾರದ ಸದಸ್ಯರಾದ ವೀರೇಶ ಹಿರೇಮಠ ಅವರು, ಹ್ಯಾಂಡ್ಸ್ ಆನ್ ತರಬೇತಿ ನೀಡಿದರು. ಪ್ರೊ|ಎಸ್.ಬಿ.ಮೋರೆ, ಪ್ರೊ|ಮಾನಸ್ ಸಿ.ಟಿ., ಪ್ರೊ|ನ್ಯಾಮತಿ, ಪ್ರೊ|ಭರ್ಚಿವಾಲೆ, ಪ್ರೊ|ಜಾಕೀರ್, ಪ್ರೊ|ಬೆಣ್ಣಿ, ಪ್ರೊ|ನಾಗರಾಜ ಟಿ., ಪ್ರೊ|ಉಡಕೇರಿ ಇದ್ದರು. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ|ಎಲ್.ಟಿ.ನಾಯಕ ಸ್ವಾಗತಿಸಿದರು. ಎಸ್. ಕೆ.ಸಜ್ಜನ ವಂದಿಸಿದರು. ಶೃತಿ ಘೋರ್ಪಡೆ, ಶಿವಾನಿ ಪಾಠಕ್ ನಿರೂಪಿಸಿದರು.