Advertisement

ಅಧಿಕಾರ ವಹಿಸಿಕೊಳ್ಳದಂತೆ ಕನ್ನಡಿಗರಿಂದ ತಡೆ

01:00 AM Feb 20, 2019 | Harsha Rao |

ಕಾಸರಗೋಡು: ಬಂದಡ್ಕ ಸರಕಾರಿ ಹೈಸ್ಕೂಲ್‌ನ ಕನ್ನಡ ಮಾಧ್ಯಮ ತರಗತಿಯ ಫಿಸಿಕಲ್‌ ಸಯನ್ಸ್‌ ವಿಭಾಗಕ್ಕೆ ಪೈವಳಿಕೆ ಶಾಲೆಯಿಂದ ವರ್ಗಾವಣೆ ಪಡೆದು ಬಂದ ಕನ್ನಡ ಅರಿಯದ ಮಲಯಾಳಿ ಅಧ್ಯಾಪಕ ಸುಹಿರಿ ಅವರನ್ನು ಶಾಲಾ ಪಿ.ಟಿ.ಎ., ವಿದ್ಯಾರ್ಥಿಗಳ ಹೆತ್ತವರು ಗಡಿನಾಡ ಕನ್ನಡ ಸಂಘದ ನೇತೃತ್ವದಲ್ಲಿ ಅಧಿಕಾರ ಸ್ವೀಕರಿಸದಂತೆ ತಡೆದರು.

Advertisement

ಪೈವಳಿಕೆ ಶಾಲೆಯ ಕನ್ನಡ ವಿದ್ಯಾರ್ಥಿಗಳಿಗೆ ಈ ಅಧ್ಯಾಪಕನನ್ನು ನೇಮಿಸಲಾಗಿತ್ತು. ಆದರೆ ಅಲ್ಲಿ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಜೆಯಲ್ಲಿ ತೆರಳಿದ್ದ ಅಧ್ಯಾಪಕ ಸುಹಿರಿಯನ್ನು ಬಂದಡ್ಕ ಶಾಲೆಗೆ ವರ್ಗಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಫೆ. 19ರಂದು ಬೆಳಗ್ಗೆ ಬಂದಡ್ಕ ಶಾಲೆಗೆ ಬಂದಿದ್ದ ಅಧ್ಯಾಪಕ ಸುಹಿರಿಯನ್ನು ಕನ್ನಡಿಗರು ಅಧಿಕಾರ ಸ್ವೀಕರಿಸದಂತೆ ತಡೆದರು.

ಈ ಸಂದರ್ಭದಲ್ಲಿ ಗಡಿನಾಡ ಕನ್ನಡ ಸಂಘ ಬಂದಡ್ಕ ಘಟಕದ ಅಧ್ಯಕ್ಷ ಪುರುಷೋತ್ತಮ  ಬೊಡ್ಡನಕೊಚ್ಚಿ, ಪಿಟಿಎ ಉಪಾಧ್ಯಕ್ಷ ಚರಣ್‌ ಕುಮಾರ್‌, ಸಿರಿ ಚಂದನ ಯುವ   ಬಳಗದ   ರಾಜೇಶ್‌ ಎಸ್‌.ಪಿ.,   ಭವ್ಯಶ್ರೀ,  ರಂಜಿತ್‌, ಮಹೇಂದ್ರ ಪಾಲಾರು, ತಾರಾ, ಕಸ್ತೂರಿ, ಸಂಜೀವ, ವಿನಯ, ರವೀಶ, ವಿದ್ಯಾರ್ಥಿಗಳ ಹೆತ್ತವರು, ವಿದ್ಯಾರ್ಥಿಗಳು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಊರವರು ಮೊದಲಾದವರಿದ್ದರು.

ಫೆ. 5ರಂದು ಬಂದಡ್ಕದ ಕನ್ನಡಿಗರು ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಆಡ್ಮಿನಿಸ್ಟ್ರೇಶನ್‌ ಅಸಿಸ್ಟೆಂಟ್‌ ರಾಧಾಕೃಷ್ಣನ್‌ ಅವರನ್ನು ಭೇಟಿಯಾಗಿ ಕನ್ನಡ ಅರಿಯದ ಮಲಯಾಳಿ ಅಧ್ಯಾಪಕನನ್ನು ನೇಮಿಸ ದಂತೆ ವಿನಂತಿಸಿದ್ದರು. 

ಹುಸಿಯಾದ ಭರವಸೆ
 ಮನವಿಗೆ ಸ್ಪಂದಿಸಿದ ಆಡ್ಮಿನಿಸ್ಟ್ರೇಶನ್‌ ಅಸಿಸ್ಟೆಂಟ್‌ ಮಲಯಾಳಿ ಅಧ್ಯಾಪಕನನ್ನು ಕಳುಹಿಸುವುದಿಲ್ಲ ಎಂದು ಭರವಸೆ ನೀಡಿದ್ದರು. ಅಲ್ಲದೆ ಈ ಶಾಲೆಯಲ್ಲಿ ಇದೀಗ ತಾತ್ಕಾಲಿಕವಾಗಿ ದುಡಿಯುತ್ತಿರುವ ಅಧ್ಯಾಪಕರನ್ನು ಮುಂದು ವರಿಸುವುದಾಗಿಯೂ ಹೇಳಿದ್ದರು.

Advertisement

ಆದರೂ ಮಂಗಳವಾರದಂದು ಸುಹಿರಿ ಬಂದಡ್ಕ ಶಾಲೆಯಲ್ಲಿ ಅಧಿಕಾರ ಸ್ವೀಕರಿಸಲು ಬಂದಿದ್ದರು. ಈ ಸಂದರ್ಭದಲ್ಲಿ ಪಿಟಿಎ, ಗಡಿನಾಡ ಕನ್ನಡ ಸಂಘದ  ನೇತೃತ್ವದಲ್ಲಿ ಕನ್ನಡಿಗರು ಅಧಿಕಾರ ಸ್ವೀಕರಿಸದಂತೆ ತಡೆದಿದ್ದು, ಇದರಂತೆ ಅಧ್ಯಾಪಕ ವಾಪಸಾಗಿದ್ದಾರೆ.

ಜಿಲ್ಲಾಧಿಕಾರಿಗೆ ಮನವಿ  ಸಲ್ಲಿಸಿದ್ದರೂ..
ಭಾಷಾ ಅಲ್ಪಸಂಖ್ಯಾಕ ಪ್ರದೇಶ ಕಾಸರಗೋಡಿನಲ್ಲಿ ಕನ್ನಡಿಗರ ಸಂವಿಧಾನ ಬದ್ಧವಾದ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿರುವಂತೆಯೇ ಕನ್ನಡ ತಿಳಿಯದ ಮಲಯಾಳಿ ಅಧ್ಯಾಪಕರನ್ನು ಬಂದಡ್ಕ ಸರಕಾರಿ ಹೈಸ್ಕೂಲ್‌ನ ಕನ್ನಡ ಮಾಧ್ಯಮ ಫಿಸಿಕಲ್‌ ಸಯನ್ಸ್‌ ವಿಭಾಗಕ್ಕೆ  ನೇಮಿಸದಂತೆ ಫೆ. 5ರಂದು ಜಿಲ್ಲಾಧಿಕಾರಿ ಡಾ| ಸಜಿತ್‌ಬಾಬು ಅವರಿಗೆ ಮನವಿ ಸಲ್ಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next