ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಕರೆದಿದ್ದ ವಿಪಕ್ಷಗಳ ಸಭೆಗೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತು ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ ಎಸ್, ಶಿರೋಮಣಿ ಅಕಾಲಿದಳ ಮತ್ತು ಬಿಜು ಜನತಾದಳ ಪಕ್ಷಗಳು ಗೈರು ಹಾಜರಾಗಿದ್ದವು.
ಇದನ್ನೂ ಓದಿ:ಹುಕ್ಕೇರಿ : ನಿವೃತ್ತ ಪಿಎಸ್‌ಐ ಪತ್ನಿಯ ಬರ್ಬರ ಹತ್ಯೆ ; ಚಿನ್ನಾಭರಣ ದೋಚಿ ಪರಾರಿ
ಬ್ಯಾನರ್ಜಿ ದೆಹಲಿಯಲ್ಲಿ ಕರೆದ ವಿಪಕ್ಷಗಳ ಸಭೆಗೆ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಸಿಪಿಐಎಂಎಲ್, ಆರ್ ಎಸ್ ಪಿ, ಶಿವಸೇನಾ, ಎನ್ ಸಿಪಿ, ಆರ್ ಜೆಡಿ, ಸಮಾಜವಾದಿ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಜೆಡಿಎಸ್, ಡಿಎಂಕೆ, ಆರ್ ಎಲ್ ಡಿ, ಐಯುಎಂಎಲ್, ಜೆಎಂಎಂ ಸೇರಿದಂತೆ 17 ಪಕ್ಷಗಳ ಮುಖಂಡರು ಭಾಗವಹಿಸಿದ್ದರು.
ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ವಾರ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ 22 ವಿಪಕ್ಷಗಳ ಮುಖಂಡರಿಗೆ ಪತ್ರ ಬರೆದು ಜೂನ್ 15ರಂದು ನಡೆಯುವ ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡಿದ್ದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೇರಿದಂತೆ ಬಿಜೆಪಿಯೇತರ ಪಕ್ಷಗಳ ಮುಖಂಡರು ಪಾಲ್ಗೊಳ್ಳುವಂತೆ ಬ್ಯಾನರ್ಜಿ ಮನವಿ ಮಾಡಿಕೊಂಡಿದ್ದರು.