ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ರೀತಿ ಫಂಚರ್ ಆದ ಬಸ್ ಇದ್ದಂತೆ. ಯಾವಾಗ ಏನಾಗುತ್ತೋ ಗೊತ್ತಿಲ್ಲ. ಏನು ಬೇಕಾದರೂ ಆಗಬಹುದು. ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಲಿದೆ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಕಥೆ ಆಗಲೇ ಮುಗಿದಿದೆ. ಅದನ್ನು ಸುಡಬೇಕೋ ಉಳಬೇಕೋ ಎನ್ನುವುದೇ ಸದ್ಯ ಇರುವ ಪ್ರಶ್ನೆ. ಬಸವಕೃಪಾ (ಲಿಂಗಾಯತ) ಆದರೆ ಊಳಬೇಕು. ಕೇಶವ ಕೃಪಾ (ಆರ್‌ಎಸ್‌ಎಸ್) ಆದರೆ ಸುಡಬೇಕು ಎನ್ನುವ ಸ್ಥಿತಿಯಿದೆ ಎಂದರು.
ಇದನ್ನೂ ಓದಿ:ಧರ್ಮ ಗ್ರಂಥಕ್ಕೆ ಬೆಂಕಿ: ಪಾಕಿಸ್ಥಾನದಲ್ಲಿ ಗುಂಪಿನಿಂದ ವ್ಯಕ್ತಿಯ ಬರ್ಬರ ಹತ್ಯೆ
ಬಿಜೆಪಿಯವರಿಗೆ ರಾಮ ಮಂದಿರ ಆಯಿತು, ಗೋ ಹತ್ಯೆ ಆಯಿತು. ಈಗ ಹಿಜಾಬ್ ಹಿಡಿದಿದ್ದಾರೆ. ಹಿಜಾಬ್ ಅಂದರೆ ಬಿಜೆಪಿಯವರಿಗೆ ಅರ್ಥವೇ ಗೊತ್ತಿಲ್ಲ. ಹಿಜಾಬ್ ಅಂದರೆ ತಲೆ ಮೇಲೆ ಸೆರಗು ಹೊತ್ತುಕೊಳ್ಳುವುದು. ಕೆಲ ಮಹಿಳೆಯರು ಮುಖದ ತುಂಬ ಸೆರಗು ಹೊತ್ತುಕೊಳ್ಳುತ್ತಾರೆ. ಅದು ತಪ್ಪಾ. ಅವರು ಸಮವಸ್ತ್ರ ಮಾಡಲಿ. ಮಕ್ಕಳು ವೇಲ್ ಹೆಗಲ ಮೇಲೆ ಹಾಕಿಕೊಳ್ಳುತ್ತಾರೆ. ಅದೇ ವೇಲ್ ತಲೆ ಮೇಲೆ ಹಾಕಿಕೊಂಡರೆ ಇವರಿಗೆ ಏನು ಕಷ್ಟ ಎಂದು ಪ್ರಶ್ನಿಸಿದರು.