ಹೊಸದಿಲ್ಲಿ: ಕೇಂದ್ರ ಬಜೆಟ್ ಅಧಿವೇಶನದ ಆರಂಭದ ದಿನವಾದ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದರು. ಇಂದಿನ ಭಾಷಣದಲ್ಲಿ ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಉದ್ದೇಶಿಸಿ ಮಾತನಾಡಿ ಇದರಿಂದ ಮಹಾತ್ಮ ಗಾಂಧಿಯವರ ಆಶಯಗಳನ್ನು ಈಡೇರಿದೆ ಎಂದರು. ಇದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.
ಆಯೋಧ್ಯೆ ತೀರ್ಪಿನ ನಂತರ ದೇಶದ ನಾಗರಿಕರ ಶಾಂತಿಯ ವರ್ತನೆ ನಿಜಕ್ಕೂ ಶ್ಲಾಘನೀಯ ಎಂದ ಅವರು ದೇಶದ ನಾಗರಿಕರ ಈ ವರ್ತನೆ ಬೌದ್ದಿಕ ಪರಿಪಕ್ಚತೆಯನ್ನು ತೋರಿಸುತ್ತದೆ ಎಂದರು.
ಜಮ್ಮು ಕಾಶ್ಮೀರದ ವಿಶೇಷಾಧಿಕಾರವಾದ ಆರ್ಟಿಕಲ್ 370 ಮತ್ತು 35ಎಯನ್ನು ರದ್ದು ಪಡಿಸುವ ಮೂಲಕ ಜಮ್ಮು ಕಾಶ್ಮೀರ ಮತ್ತು ಲಡಾಖ್ ನ ಬೆಳವಣಿಗೆಗೆ ಕೇಂದ್ರ ಸರಕಾರ ಸಮಾನ ಅವಕಾಶ ನೀಡಿದೆ ಎಂದು ರಾಷ್ಟ್ರಪತಿಗಳು ಅಭಿಪ್ರಾಯ ಪಟ್ಟರು.
ಪಾಕಿಸ್ಥಾನದ ನೆಲದಲ್ಲಿ ನೆಲೆಸಲು ಇಷ್ಟವಿಲ್ಲದ ಹಿಂದೂಗಳು ಭಾರತಕ್ಕೆ ಮರಳಬಹುದು ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಕೇಂದ್ರ ಸರಕಾರ ಗಾಂಧೀಜಿಯವರ ಆಶಯಗಳನ್ನು ಈಡೇರಿಸಿದೆ ಎಂದರು. ಈ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ ವಿಪಕ್ಷಗಳು ಸದನದಲ್ಲಿ ಗದ್ದಲ ಮಾಡಿ ಸರಕಾರದ ವಿರುದ್ಧ ಘೋಷಣೆ ಕೂಗಿದವು.
ತ್ರಿವಳಿ ತಲಾಖ್, ಗ್ರಾಹಕ ರಕ್ಷಣಾ ಮಸೂದೆ, ಚಿಟ್ ಫಂಡ್ ತಿದ್ದುಪಡಿ ಕಾನೂನು, ಮೋಟಾರು ವಾಹನ ಕಾಯ್ದೆ ಮುಂತಾದ ಪ್ರಮುಖ ಮಸೂದೆಗಳು ಈ ಸಂಸತ್ ನಲ್ಲಿ ಮಂಡನೆಯಾಗಿ ಅನುಮೋದನೆಯಾಗಿದೆ ಎಂದರು.