ಹೊಸದಿಲ್ಲಿ : ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ನೀಡಿದವರ ಮಹೋನ್ನತ ತ್ಯಾಗದಿಂದ ದೇಶದ ಜನರು ಪ್ರೇರಣೆ ಪಡೆದು ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಬೇಕು ಎಂದು ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದು ದೇಶದ 70ನೇ ಸ್ವಾತಂತ್ರ್ಯ ದಿನದ ಮುನ್ನಾ ದಿನ ದೇಶದವನ್ನು ಉದ್ದೇಶಿಸಿ ಕರೆ ನೀಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಕೃತಜ್ಞರಾಗಿದ್ದೇವೆ ಎಂದವರು ಹೇಳಿದರು.
ಸರಕಾರ ಕಾನೂನುಗಳನ್ನು ರೂಪಿಸಬಹುದು, ಅನುಷ್ಠಾನಿಸಬಹುದು, ಬಲಪಡಿಸಬಹುದು; ಆದರೆ ಕಾನೂನಿಗೆ ಬದ್ಧರಾಗಿ ಬದುಕುವುದು ಪ್ರತಿಯೋರ್ವ ಪ್ರಜೆಯ ಕರ್ತವ್ಯ ಎಂದು ರಾಷ್ಟ್ರಪತಿ ನುಡಿದರು.
ಭಾರತವನ್ನು ನಿರ್ಮಲವಾಗಿರಿಸುವ ಸರಕಾರದ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಮತ್ತು ದೇಶವನ್ನು ನಿರ್ಮಲವಾಗಿ ಇರಿಸುವಲ್ಲಿ ಶ್ರಮಿಸಬೇಕು ಎಂದು ರಾಷ್ಟ್ರಪತಿ ಕೋವಿಂದ್ ಹೇಳಿದರು.
“ನವ ಭಾರತದಲ್ಲಿ ಬಡತನಕ್ಕೆ ಸ್ಥಳವೇ ಇಲ್ಲ’ ಎಂದು ಹೇಳಿದ ಕೋವಿಂದ್, ದೇಶದ ಜನರು ದಿವ್ಯಾಂಗರ ಬಗ್ಗೆ ವಿಶೇಷವಾದ ಗಮನ ಹರಿಸುವುದು ಅಗತ್ಯ ಎಂದು 70ನೇ ಸ್ವಾತಂತ್ರ್ಯ ದಿನದ ಮುನ್ನಾ ದಿನ ದೇಶದ ಸಮಸ್ತ ಜನರಿಗೆ ಶುಭ ಹಾರೈಸಿದರು.