ಹೊಸದಿಲ್ಲಿ: ಕನ್ನಡ ಸಹಿತ ಹಿಂದಿಯೇತರ ಪ್ರಾದೇಶಿಕ ಭಾಷೆಗಳಿಗೆ ಗೌರವ ಕೊಟ್ಟು, ನೀವು ಗೌರವ ಪಡೆಯುವುದನ್ನು ಕಲಿಯಿರಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹಿಂದಿ ಭಾಷಿಗರಿಗೆ ಪಾಠ ಮಾಡಿದ್ದಾರೆ.
ದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವಾಲಯ ಆಯೋಜಿಸಿದ್ದ “ಹಿಂದಿ ದಿವಸ್’ನಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಮೆಟ್ರೋದಲ್ಲಿ ಹಿಂದಿ ವಿರೋಧಿಸಿ ನಡೆದ ಪ್ರತಿಭಟನೆಯನ್ನು ಉಲ್ಲೇಖೀಸಿದರು. ಹಿಂದಿಯೇತರ ಭಾಷೆಗಳಿಗೆ ಗೌರವ ಕೊಟ್ಟು , ಈ ಭಾಷೆಗಳಿಗೂ ಉನ್ನತ ಸ್ಥಾನ ನೀಡಿ ಅವರ ತಜ್ಞರಿಗೂ ಮಾತನಾಡಲು ಅವಕಾಶ ನೀಡಿದರೆ ತನ್ನಿಂತಾನೇ ಅವರೂ ಹಿಂದಿಗೆ ಗೌರವ ಕೊಡುತ್ತಾರೆ. ಇದನ್ನು ಬಿಟ್ಟು ಕೇವಲ ಹಿಂದಿಯ ಉತ್ತೇಜನಕ್ಕೆ ಹೊರಟರೆ ಬಲವಂತವಾಗಿ ಹೇರಲಾಗುತ್ತಿದೆ ಎಂದು ಭಾವಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಪ್ರಾದೇಶಿಕ ಭಾಷೆಗಳಿಗೆ ಹಿಂದಿ ಭಾಷಿ ಗರು ಗೌರವ ಕೊಟ್ಟಿದ್ದರೆ, ಬೆಂಗಳೂರಿನ ಮೆಟ್ರೋದಲ್ಲಿ ಹಿಂದಿ ಬಳಕೆಗೆ ವಿರೋಧ, ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಪ್ರತಿಭಟನೆ ಗಳು ಆಗುತ್ತಿರಲೇ ಇಲ್ಲ. ಆದರೆ ಇಂದು ಪ್ರಾದೇಶಿಕ ಭಾಷೆಗಳನ್ನು ಮಾತನಾಡುವವರು, ಹಿಂದಿ ಭಾಷಿಕರು ತಮ್ಮ ಬಗ್ಗೆ ಪರಿಗಣನೆ ಮಾಡುತ್ತಿಲ್ಲ ಎಂದೇ ಭಾವಿಸುತ್ತಿದ್ದಾರೆ. ನಾವು ಅವರಿಗೆ ಅವಕಾಶ ನೀಡುವುದನ್ನು ಕಲಿಯಬೇಕು. ಆ ಭಾಷೆಗಳನ್ನೂ ಮಾತಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅವರದೇ ಭಾಷೆಯಲ್ಲಿ ಆಧರಿಸಿ: “ತಮಿಳರು ಎದುರಾದರೆ “ವಣಕ್ಕಂ’, ಸಿಕ್ಖ್ ಜನ ಎದುರಾದಾಗ “ಸತ್ ಶ್ರೀ ಅಕಾಲ್’, ಮುಸ್ಲಿಮರು ಭೇಟಿಯಾದಾಗ “ಆದಾಬ್’, ತೆಲುಗು ಭಾಷಿಕರು ಸಿಕ್ಕಿದಾಗ “ಗುರು’ ಎಂದು ಸಂಬೋಧಿಸುವ ಮೂಲಕ ಅವರನ್ನು ಗೌರವಿಸಬೇಕು’ ಎಂದು ಕೋವಿಂದ್ ಸಲಹೆ ನೀಡಿದರು.
“ದೇಶದಲ್ಲಿ ನ್ಯಾಯವಾದಿಗಳು ಹಾಗೂ ವೈದ್ಯರ ಭಾಷೆ ಯಾರಿಗೂ ಅರ್ಥವಾಗುವುದಿಲ್ಲ. ಇತ್ತೀಚೆಗೆ ನ್ಯಾಯಾಲಯಗಳಲ್ಲಿ ಹಿಂದಿ ಜತೆ ಇತರ ಸ್ಥಳೀಯ ಭಾಷೆಗಳ ಬಳಕೆ ಹೆಚ್ಚಾಗಿರುವುದು ಆಶಾದಾಯಕ ಬೆಳವಣಿಗೆ. ಅದೇ ರೀತಿ ವೈದ್ಯರು ಕೂಡ ಪ್ರಿಸ್ಕ್ರಿಪ್ಶನ್ ಕೊಡುವಾಗ ದೇವನಾಗರಿ ಹಾಗೂ ಇತರ ಸ್ಥಳೀಯ ಭಾಷೆಗಳನ್ನೇ ಬಳಸುವುದು ಸೂಕ್ತ’ ಎಂದು ಕೋವಿಂದ್ ಕರೆ ನೀಡಿದರು.