Advertisement

ಅನುಭವ ಮಂಟಪ ಅಡಿಗಲ್ಲಿಗೆ ರಾಷ್ಟ್ರಪತಿ ಆಹ್ವಾನ

03:53 PM Jun 26, 2018 | Team Udayavani |

ಬಸವಕಲ್ಯಾಣ: ನಗರದಲ್ಲಿ ರಾಜ್ಯ ಸರ್ಕಾರದಿಂದ ಸುಮಾರು 600 ಕೋಟಿ ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಿಸಲು ನೀಲ ನಕ್ಷೆ ಸಿದ್ಧಪಡಿಸಲಾಗಿದ್ದು, ಬರುವ ಬಜೆಟ್‌ನಲ್ಲಿ ನೂರು ಕೋಟಿ ಅನುದಾನ ಕಲ್ಪಿಸಿ ಶೀಘ್ರದಲ್ಲಿಯೇ ಅಡಿಗಲ್ಲು ನೆರವೇರಿಸಲಾಗುವುದು ಎಂದು ಶಾಸಕ ಬಿ. ನಾರಾಯಣರಾವ್‌ ಹೇಳಿದರು.

Advertisement

ನಗರದ ಹರಳಯ್ಯ ಗವಿಯಲ್ಲಿ ಅಖೀಲ ಭಾರತ ಲಿಂಗವಂತ ಹರಳಯ್ಯ ಪೀಠ ಹಾಗೂ ಬಿಕೆಡಿಬಿ ಆಶ್ರಯದಲ್ಲಿ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶ ಹಾಗೂ ಅಂಬಿಗರ ಚೌಡಯ್ಯನವರ ವಚನ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೂತನ ಅನುಭವ ಮಂಟಪ ನಿರ್ಮಾಣದ ಅಡಿಗಲ್ಲು ಸಮಾರಂಭಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಲಾಗುವುದು ಎಂದರು.

ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಗುರು ಬಸವಣ್ಣನವರ ನೇತೃತ್ವದಲ್ಲಿ 12ನೇ ಶತಮಾನದಲ್ಲಿ ನಡೆದ ಕ್ರಾಂತಿ ಜಗತ್ತಿಗೆ ಮಾದರಿಯಾಗಿದೆ. ಶರಣರ ಆಚಾರ ವಿಚಾರಗಳನ್ನು ಇಂದು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಶರಣರ ಪುಣ್ಯಭೂಮಿಯನ್ನು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ ಡಾ| ಗಂಗಾಂಬಿಕಾ ಅಕ್ಕ ಮಾತನಾಡಿ, ಸಮಾಜ ಸುಧಾರಣೆಯೇ ಶರಣರ ಪ್ರಧಾನ ಗುರಿಯಾಗಿತ್ತು. ಅದಕ್ಕಾಗಿಯೇ ಶರಣರು ದೇಶದ ಇತರ ಧಾರ್ಮಿಕ ಪುರುಷರಿಗಿಂತ ಭಿನ್ನವಾಗಿದ್ದಾರೆ. ಶರಣ ಅಂಬಿಗರ ಚೌಡಯ್ಯನವರು ತೀಕ್ಷ್ಣ ವಚನಗಳಿಂದ ತಮ್ಮದೇ ಆದ ಛಾಪು ಮೂಡಿಸಿದ್ದರು. ನ್ಯಾಯ, ನಿಷ್ಠುರ, ಖಂಡಿತವಾದಿಯಾಗಿದ್ದರು. ಅವರು ರಚಿಸಿದ 278 ವಚನಗಳು ಲಭ್ಯವಾಗಿವೆ. ಚೌಡಯ್ಯನವರ ವಚನಗಳ ಮೌಲ್ಯ ಅರಿತು ಜೀವನದಲ್ಲಿ ಅಳವಡಿಕೊಳ್ಳಲು ಎಲ್ಲರು ಪ್ರಯತ್ನಿಸಬೇಕು ಎಂದರು.

ಐಎಎಸ್‌ ಅಧಿಕಾರಿ ಅಮರೇಶ್ವರ ಪಾಟೀಲ, ಬಿಕೆಡಿಬಿ ಮಾಜಿ ಸದಸ್ಯ ಶಿವರಾಜ ನರಶಟ್ಟಿ ಮಾತನಾಡಿದರು. ಬಸವರಾಜ ಬೇಲೂರೆ ಷಟ್‌ ಸ್ಥಲ ಧ್ವಜಾರೋಹಣ ನೆರವೇರಿಸಿದರು. ಬಿಡಿಪಿಸಿ ಉಪಾಧ್ಯಕ್ಷ ಜಗನ್ನಾಥ ಖೂಬಾ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಭೀಮಾಶಂಕರ ಕುರಕೋಟೆ, ಬಿಕೆಡಿಬಿ ಕಿರಿಯ ಅಭಿಯಂತರ ಶರಣಬಸಪ್ಪ ವನರೋಟ್ಟಿ, ಚಂದ್ರಕಲಾ ಚಂದನಕೇರೆ ಉಪಸ್ಥಿತರಿದ್ದರು. ನಗರ ಸಭೆ ಸದಸ್ಯ ರವಿ ಕೋಳಕೂರ ಸ್ವಾಗತಿಸಿದರು.ಸುನಿತಾ ಮಹಾಲಿಂಗ ನಿರೂಪಿಸಿದರು.

Advertisement

ಸಮಾವೇಶದ ನಂತರ ಸಾಲಪುರದ ನಾಟ್ಯಯೋಗ ಕಲಾ ತಂಡದವರಿಂದ “ಮೃತ್ಯುವರ್ಮ’ ನಾಟಕ ಪ್ರದರ್ಶನ ಜರುಗಿತು. ಔರಾದನ ವಚನ ಕೀರ್ತನಕಾರ ರಾಮದಾಸ ಬಿರಾದಾರ ತಂಡದಿಂದ ವಚನ ಗಾಯನ ಜರುಗಿತು.

ನಾನು ಶರಣ ತತ್ವ ಪ್ರತಿಪಾದಕ. ನಲವತ್ತು ವರ್ಷಗಳಿಂದ ಅನೇಕ ಏಳು ಬಿಳುಗಳನ್ನು ಕಂಡಿದ್ದೇನೆ. ಶರಣರ ಕಾಯಕ ಭೂಮಿಯ ಪ್ರತಿನಿಧಿಯಾಗಿ ವಿಧಾನ ಸಭೆಗೆ ತೆರಳಬೇಕು ಎನ್ನುವುದು ನನ್ನ ಜೀವನದ ಗುರಿಯಾಗಿತ್ತು. ಶರಣರ ನಾಡಿನ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಸಿಕ್ಕಿರುವ ಅವಕಾಶವನ್ನು ಉಪಯೋಗಿಸಿಕೊಂಡು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.
ಬಿ.ನಾರಾಯಣರಾವ್‌ ಶಾಸಕ ಬಸವಕಲ್ಯಾಣ

Advertisement

Udayavani is now on Telegram. Click here to join our channel and stay updated with the latest news.

Next