Advertisement

ಭಾರತವೇ ನಮಗೆ ದೊಡ್ಡಣ್ಣ; ಚೀನ ನಂಬಿದ್ದ ಲಂಕಾಕ್ಕೆ ಜ್ಞಾನೋದಯ

02:44 AM Apr 07, 2022 | Team Udayavani |

ಕೊಲೊಂಬೊ: ಚೀನ ರೂಪಿಸಿದ ಸಾಲದ ಖೆಡ್ಡಾದಲ್ಲಿ ಬಿದ್ದು ನರಳುತ್ತಿರುವ ಶ್ರೀಲಂಕಾಕ್ಕೆ ಕೊನೆಗೂ ಭಾರತವೇ ಶ್ರೇಷ್ಠ ಎಂಬ ಜ್ಞಾನೋದಯವಾಗಿದೆ.

Advertisement

“ಭಾರತ ನಮಗೆ ದೊಡ್ಡಣ್ಣ ಇದ್ದಂತೆ. ಭಾರತವನ್ನು ಅನುಸರಿಸುವುದೇ ಉತ್ತಮ’ ಎಂದು ಪ್ರತಿಪಕ್ಷ ಮುಖಂಡ, ಮಾಜಿ ಕ್ರಿಕೆಟಿಗ ಅರ್ಜುನ ರಣತುಂಗ, ಲಂಕಾ ಸರಕಾರಕ್ಕೆ ಬುದ್ಧಿ ಹೇಳಿದ್ದಾರೆ.

“ಹಣಕ್ಕಾಗಿ ನಾವು ಇಡೀ ಜಗತ್ತನ್ನು ಬೇಡುವಂಥ ದುಃಸ್ಥಿತಿ ಬಂದಿದೆ. ಅದೃಷ್ಟವಶಾತ್‌ ಭಾರತದಂಥ ದೇಶಗಳು ನಮಗೆ ಸಾಕಷ್ಟು ಸಹಾಯ ಮಾಡುತ್ತಿವೆ. ಪೆಟ್ರೋಲ್‌, ಔಷಧ, ಮೂಲಭೂತ ಆವಶ್ಯಕ ವಸ್ತುಗಳನ್ನು ನೀಡಿ ಭಾರತ ಔದಾರ್ಯ ತೋರಿದೆ’ ಎಂದು ಸ್ಮರಿಸಿದ್ದಾರೆ.

“ರಾಜಪಕ್ಸ ಸರಕಾರ, ದೇಶದ ಆರ್ಥಿಕತೆಯ ನಿರ್ವಹಣೆಯಲ್ಲಿ ಸಂಪೂರ್ಣ ಸೋತಿದೆ. ಜನರ ಈಗಿನ ಆಕ್ರೋಶ ರಕ್ತಪಾತಕ್ಕೆ ಕಾರಣವಾಗದಿದ್ದರೆ ಸಾಕು. ರಾಜಪಕ್ಸ ಸರಕಾರ ಅಸ್ತಿತ್ವದಲ್ಲಿದ್ದಷ್ಟು ದೇಶಕ್ಕೇ ಅಪಾಯ. ಆದಷ್ಟು ಬೇಗ ವಿಸರ್ಜನೆಗೊಳ್ಳಬೇಕು’ ಎಂದಿದ್ದಾರೆ.

ಭಾರತದಿಂದ ಮತ್ತಷ್ಟು ಇಂಧನ: ಕೇವಲ 24 ಗಂಟೆಗಳಲ್ಲಿ ಭಾರತ 36 ಸಾವಿರ ಮೆಟ್ರಿಕ್‌ ಟನ್‌ ಪೆಟ್ರೋಲ್‌, 40 ಸಾವಿರ ಮೆಟ್ರಿಕ್‌ ಟನ್‌ ಡೀಸೆಲ್‌ ಅನ್ನು ಶ್ರೀಲಂಕಾಕ್ಕೆ ತಲುಪಿಸಿದೆ. ಇದುವರೆಗೆ ಭಾರತ 2,70,000 ಮೆಟ್ರಿಕ್‌ ಟನ್‌ ಇಂಧನ ಪೂರೈಸಿದೆ ಎಂದು ಕೊಲೊಂಬೊದಲ್ಲಿನ ಭಾರತೀಯ ಹೈಕಮಿಷನ್‌ ಕಚೇರಿ ತಿಳಿಸಿದೆ.

Advertisement

ಇದಲ್ಲದೆ, ಏರ್‌ಪೋರ್ಟ್‌, ಆಸ್ಪತ್ರೆ ನಿರ್ಮಾಣಗಳಿಗೂ ಅಪಾರ ನೆರವಾಗಿದೆ.

ತುರ್ತು ಪರಿಸ್ಥಿತಿ ವಾಪಸ್‌: ಎ.1ರಂದು ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ ದೇಶಾದ್ಯಂತ ಪ್ರತಿಭಟನೆ ತೀವ್ರಗೊಂಡ ಕಾರಣ, ರಾಷ್ಟ್ರಾಧ್ಯಕ್ಷ ಗೋಟಬಯ ರಾಜಪಕ್ಸ ಅವರು ತುರ್ತು ಪರಿಸ್ಥಿತಿ ನಿಲುವನ್ನು ಮಂಗಳವಾರ ರಾತ್ರಿ ಹಿಂಪಡೆದಿದ್ದಾರೆ.

ಆದಾಗ್ಯೂ, ಸಂಸತ್‌ನ ಬಳಿ “ಗೋಟ ಗೋ ಹೋಮ್‌’ ಎಂಬ ಘೋಷಣೆಯ ಪ್ಲಕಾರ್ಡ್‌ ಗಳನ್ನು ಹಿಡಿದ ಸಹಸ್ರಾರು ಜನ ಬುಧವಾರ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಸೈನಿಕರು ಗುಂಡು ಪ್ರಯೋಗಿಸಬೇಕಾಯಿತು.

ಜಪ್ಪಯ್ಯ ಅಂದ್ರೂ ಕೆಳಗಿಳಿಯಲ್ಲ!
ಸರಕಾರದ ಬೆಂಬಲ ಅಲ್ಪ ಮೊತ್ತಕ್ಕೆ ಕುಸಿದಿದ್ದರೂ, ರಾಷ್ಟ್ರಾಧ್ಯಕ್ಷ ಗೋಟಬಯ ರಾಜಪಕ್ಸ ತಮ್ಮ ಮೊಂಡು ನಡೆ ಮುಂದುವರಿಸಿದ್ದಾರೆ. “ಎಂಥ ಸನ್ನಿವೇಶ ವನ್ನೂ ನಮ್ಮ ಸರಕಾರಎದುರಿಸಲು ಸಿದ್ಧ. ರಾಷ್ಟ್ರಾಧ್ಯಕ್ಷರು ಯಾವುದೇ ಸಂದರ್ಭದಲ್ಲೂ ರಾಜೀನಾಮೆ ನೀಡುವುದಿಲ್ಲ’ ಎಂದು ಸಚಿವ ಜಾನ್‌ಸ್ಟನ್‌ ಫ‌ರ್ನಾಂಡೋ, ಸಂಸತ್‌ಗೆ ತಿಳಿಸಿದ್ದಾರೆ.

ದಿನದ ಬೆಳವಣಿಗೆಗಳೇನು?
-ಎಸ್‌ಎಲ್‌ಪಿಪಿ ಮೈತ್ರಿಕೂಟ ಸರಕಾರದ 42 ಸಂಸದರು, ತಾವು ಸರಕಾರದಿಂದ ಪ್ರತ್ಯೇಕಗೊಂಡಿದ್ದು, ಸ್ವತಂತ್ರವಾಗಿ ಜನಸೇವೆ ನಡೆಸುವುದಾಗಿ ಸಂಸತ್‌ನಲ್ಲಿ ಘೋಷಿಸಿದ್ದಾರೆ.
-ಆಸ್ಪತ್ರೆಗಳಲ್ಲಿ ಚಿಕಿತ್ಸೆಗೂ ಹಣವಿಲ್ಲದ ಕಾರಣ, ವೈದ್ಯರು ಸರಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ರೋಗಿಗಳ ಪರದಾಟ ಹೇಳತೀರದಾಗಿದೆ.
-ಶ್ರೀಲಂಕಾದಲ್ಲಿ ಹಸಿವಿನಿಂದ ಭಾರೀ ಅನಾಹುತ ಸಂಭವಿ ಸಬಹುದು ಎಂದು ಸ್ಪೀಕರ್‌, ಸಂಸತ್‌ನಲ್ಲಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next