ಹುಬ್ಬಳ್ಳಿ: ಲಿಂಗಾಯತರ ನಡಿಗೆ ಹುಬ್ಬಳ್ಳಿ ಕಡೆಗೆ ಬೃಹತ್ ರ್ಯಾಲಿಗೆ ಸಕಲ ಸಿದ್ಧತೆಗಳು ನಡೆದಿದ್ದು, ಜಿಲ್ಲಾದ್ಯಂತ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ನ. 5ರಂದು ಹುಬ್ಬಳ್ಳಿ ನೆಹರು ಮೈದಾನದಲ್ಲಿ ನಡೆಯಲಿರುವ ರ್ಯಾಲಿ ಹಿನ್ನೆಲೆಯಲ್ಲಿ ಶನಿವಾರ ಮೂರುಸಾವಿರ ಮಠದ ಆವರಣದ ಸಭಾಂಗಣದಲ್ಲಿ ಕಾರ್ಯಾಲಯ ಉದ್ಘಾಟಿಸಿ ನಂತರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ತಾಲೂಕು, ರಾಜ್ಯದ ವಿವಿಧ ಜಿಲ್ಲೆ ಅಷ್ಟೇ ಅಲ್ಲದೆ ನೆರೆ ರಾಜ್ಯಗಳಿಂದಲೂ ರ್ಯಾಲಿಗೆ ಜನರು ಆಗಮಿಸಲಿದ್ದಾರೆ. ಸುಮಾರು 5 ಲಕ್ಷ ಜನರು ಪಾಲ್ಗೊಳ್ಳಲಿದ್ದು, ಅದಕ್ಕೆ ಬೇಕಾದ ಎಲ್ಲ ತಯಾರಿ ಮಾಡಿಕೊಳ್ಳುವ ಕುರಿತು ಚರ್ಚಿಸಲಾಗಿದೆ ಎಂದರು.
ಈಗಾಗಲೇ ವಿವಿಧೆಡೆ ನಡೆದ ರ್ಯಾಲಿಗಳು ಯಶಸ್ವಿಯಾಗಿದ್ದು, ಹುಬ್ಬಳ್ಳಿಯಲ್ಲಿ ನಡೆಯುವ ರ್ಯಾಲಿ ಹೊಸ ಇತಿಹಾಸ ನಿರ್ಮಿಸಬೇಕು. ಆ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಇದಕ್ಕಾಗಿ ಜಿಲ್ಲೆಯ ಎಲ್ಲ ಪ್ರದೇಶಗಳಲ್ಲಿ ಬಹಿರಂಗ ಸಭೆ ನಡೆಸಿ ಹೆಚ್ಚು ಹೆಚ್ಚು ಜನರನ್ನು ಕರೆತರಬೇಕು.
ಹು-ಧಾ ಅಂಜುಮನ್ ಸಂಸ್ಥೆಯವರು. ಜೈನ್ ಧರ್ಮದವರು, ಮಹಾಜನ್ ಸಮಾಜದವರು ರ್ಯಾಲಿಗೆ ಬೆಂಬಲ ನೀಡಲಿದ್ದಾರೆ ಎಂದರು. ಶ್ರೀ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮದ ಕುರಿತು ನಡೆಯುತ್ತಿರುವ ಹೋರಾಟಕ್ಕೆ ಎಲ್ಲರು ತನು-ಮನ-ಧನದಿಂದ ಸಹಕಾರ ನೀಡಬೇಕು.
ಇದು ಬಸವಣ್ಣನವರ ಕಾರ್ಯ, ಇದಕ್ಕೆ ನಾವೆಲ್ಲರೂ ಕಂಕಣಬದ್ಧರಾಗಬೇಕು. ನ. 2 ರಂದು ಬೈಕ್ ರ್ಯಾಲಿ, 3ರಂದು ಕಾರು ರ್ಯಾಲಿ ನಡೆಸಿ ಪ್ರಚಾರ ನಡೆಸಬೇಕು ಎಂದರು. ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ನೀಲಕಂಠ ಅಸೂಟಿ, ಸದಾನಂದ ಡಂಗನವರ, ರಾಜಣ್ಣಾ ಕೊರವಿ,
-ಅಜ್ಜಪ್ಪ ಬೆಂಡಿಗೇರಿ, ಅನಸೂಯಾ ಅರಕೇರಿ, ರಾಜಶೇಖರ ಮೆಣಸಿನಕಾಯಿ ಮುಂತಾದವರು ಸಲಹೆ-ಸೂಚನೆ ನೀಡಿದರು. ಅರವಿಂದ ಕಟಗಿ, ವೀರಣ್ಣ ಕಲ್ಲೂರ, ಮೋಹನ ಅಸುಂಡಿ, ಈರಪ್ಪ ಎಮ್ಮಿ, ಪ್ರೊ| ಎಸ್.ವಿ. ಪಟ್ಟಣಶೆಟ್ಟಿ, ಬಸವರಾಜ ಬೆಂಡಿಗೇರಿ ಇತರರಿದ್ದರು.