Advertisement

ಜನಗಣತಿಗೆ ಪೂರ್ವ ಸಿದ್ಧತೆ: ಅಪರ ಜಿಲ್ಲಾಧಿಕಾರಿ ಸೂಚನೆ

08:25 PM Dec 24, 2019 | Team Udayavani |

ಹಾಸನ: ಜನಗಣತಿ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದ್ದು, ನಿಗದಿತ ಸಮಯದೊಳಗೆ ನಿರ್ವಹಿಸಿ ಯಾವುದೇ ಲೋಪಗಳಿಲ್ಲದಂತೆ ಯಶಸ್ವಿಯಾಗಿ ಜನಗಣತಿ ಪೂರ್ಣಗೊಳ್ಳಲು ಶ್ರಮಿಸಬೇಕೆಂದು ಅಧಿಕಾರಿಗಳು ಮತ್ತು ನೌಕರರಿಗೆ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜನಗಣತಿ 2021ರ ಪೂರ್ವಭಾವಿ ಸಿದ್ಧತೆಗಳ ಕುರಿತು ಅಧಿಕಾರಿಗಳ ಸಭೆ ಹಾಗೂ ವಿಡಿಯೋ ಸಂವಾದ ನಡೆಸಿದ ಅವರು, ಜನಗಣತಿ ನಿರ್ದೇಶನಾಲಯ ಮತ್ತು ಮಾಸ್ಟರ್‌ ಟ್ರೈನರ್‌ಗಳು ನೀಡುವ ಸೂಚನೆ‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನಿಗದಿತ ಸಮಯದಲ್ಲಿ ಜನಗಣತಿ ಕಾರ್ಯವನ್ನು ಯಶಸ್ವಿಯಾಗಿ ಪೂರೈಸುವಂತೆ ಸಂಬಂìಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗಣತಿದಾರರಿಗೆ ತರಬೇತಿ: ಭಾರತದಲ್ಲಿ 10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಕಾರ್ಯಕ್ರಮದ ಸಿದ್ಧತೆ ಪ್ರಾರಂಭವಾಗಿದೆ, ಈಗಾಗಲೇ ಜನಗಣತಿ ನಿರ್ದೇಶನಾಲಯದ ಸೂಚನೆ ಮೇರೆಗೆ ಚಾರ್ಜ್‌ ಅಧಿಕಾರಿಗಳು ಮತ್ತು ನಾಲ್ವರು ಮಾಸ್ಟರ್‌ ಟ್ರೈನರ್‌ಗಳನ್ನು ನೇಮಕಾತಿ ಮಾಡಿದ್ದು, ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ತರಬೇತಿ ನೀಡಲಾಗಿದೆ ಎಂದರು.

ಉತ್ತಮ ಸಂಭಾವನೆ: ಜನಗಣತಿಯ ಎರಡೂ ಹಂತಗಳಲ್ಲಿ (2020ರ ಮನೆ ಪಟ್ಟಿ ತಯಾರಿಕೆ ಮತ್ತು 2021 ರ ಜನಸಂಖ್ಯೆ ಗಣತಿ) ಭಾಗವಹಿಸಿ ತಂತ್ರಜ್ಞಾನದ ಮೂಲಕವೇ ಗಣತಿ ಕಾರ್ಯ ಮಾಡುವವರಿಗೆ ಈ ಸಲ ಉತ್ತಮವಾದ ಸಂಭಾವನೆ ಇರಲಿದೆ. ಈ ಸಂಭಾವನೆಯನ್ನು ನೇರವಾಗಿ ಗಣತಿದಾರರ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಸಂದಾಯವಾಗಲಿದೆ ಎಂದು ಜಗದೀಶ್‌ ಅವರು ಮಾಹಿತಿ ನೀಡಿದರು.

ಮತ್ತೋರ್ವ ಮಾಸ್ಟರ್‌ ಟ್ರೈನರ್‌, ಪ್ರಭಾರಿ ಜಿಲ್ಲಾ ಸಂಖ್ಯಾ ಸಂಗ್ರಹಣಾದಿಕಾರಿ ಗಂಗಪ್ಪ ಮಾತನಾಡಿ,150 ಮನೆಗಳು ಅಥವಾ 600 ರಿಂದ 800 ಜನಸಂಖ್ಯೆಗೆ ಒಂದರಂತೆ ಬ್ಲಾಕ್‌ಗಳನ್ನು ರಚನೆ ಮಾಡಬೇಕು ಈ ಬ್ಲಾಕ್‌ಗಳು ಈಗಾಗಲೇ 2011 ರ ಜನಗಣತಿಯ ಎರಡನೇ ಹಂತದಲ್ಲಿ ಇರುವಂತೆಯೇ ಇದೆ, ಪ್ರತಿ ಬ್ಲಾಕ್‌ಗೆ ಒಬ್ಬರಂತೆ ಗಣತಿದಾರರನ್ನು ನೇಮಿಸಲಾಗಿದೆ.

Advertisement

ಗಣತಿಗೆ ಶಿಕ್ಷಕರ ಬಳಕೆ: ಗಣತಿದಾರರು ಸಾಮಾನ್ಯವಾಗಿ ಪ್ರಾಥಮಿಕ ಶಾಲಾ ಶಿಕ್ಷಕರೇ ಆಗಿದ್ದು, ಪ್ರತಿ ಆರು ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಿಸಬೇಕು. ಮೇಲ್ವಿಚಾರಕರು ಸಾಮಾನ್ಯವಾಗಿ ಪ್ರೌಢಶಾಲಾ ಶಿಕ್ಷಕರು ಅಥವಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಾಗಿರುವರು. ಇದಕ್ಕಾಗಿ ಶಿಕ್ಷಣ ಇಲಾಖೆಯಿಂದ ಶಿಕ್ಷಕರು ಮತ್ತು ಉಪನ್ಯಾಸಕರ ಪಟ್ಟಿಯನ್ನು ಚುನಾವಣೆಯಲ್ಲಿ ಪಡೆಯುವಂತೆ ಶಿಕ್ಷಕರ ಹೆಸರು, ಶಾಲಾ ವಿಳಾಸ, ಬ್ಯಾಂಕ್‌ ಖಾತೆ ಸಂಖ್ಯೆ, ಐಎಫ್ಎಸ್‌ ಕೋಡ್‌, ಆಧಾರ್‌ ಸಂಖ್ಯೆ, ಮೊಬೈಲ್‌ ಸಂಖ್ಯೆಗಳೊಂದಿಗೆ ಪಟ್ಟಿ ಪಡೆಯಬೇಕೆಂದರು ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕೆಂದು ತಿಳಿಸಿದರು.

ಈ ಪ್ರಕ್ರಿಯೆಯು ಗ್ರಾಮಾಂತರ ಮತ್ತು ನಗರ, ಪಟ್ಟಣ ಪ್ರದೇಶಗಳಲ್ಲಿ ಎರಡೂ ಕಡೆ ಕೂಡಲೇ ಪ್ರಾರಂಭಿಸಬೇಕು. ಈಗಾಗಲೇ ಜನಗಣತಿ ನಿರ್ದೆಶನಾಲಯದಿಂದಲೇ ಬ್ಲಾಕ್‌ಗಳನ್ನು ಗುರುತಿಸಲಾಗಿದೆ ಎಂದು ಗಂಗಪ್ಪ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಜನಗಣತಿ ಶಿರಸ್ತೇದಾರರಾದ ಎಸ್‌.ರಮೇಶ್‌ ಅವರು ಮಾತನಾಡಿ ಈಗಾಗಲೇ ಹಾಸನ ಜಿಲ್ಲೆಯಲ್ಲಿ ಜನಗಣತಿ ಕಾರ್ಯ ನಿರ್ವಹಿಸುವ ಅಧಿಕಾರಿ,

ನೌಕರರು ಮತ್ತು ಅಪರೇಟರ್‌ಗಳ ಜಿಲ್ಲಾ ಮಟ್ಟದ ವಾಟ್ಸ್‌ಆಪ್‌ ಗುಂಪನ್ನು ರಚಿಸಲಾಗಿದ್ದು, ನಿರ್ದೇಶನಾಲಯದಿಂದ ಬರುವ ಸೂಚನೆಗಳನ್ನು ಕಚೇರಿಯ ಈ ಮೇಲ್‌ ಮೂಲಕ ಹಾಗೂ ವಾಟ್ಸ್‌ ಆಪ್‌ ಮೂಲಕ ಕಳುಸಲಾಗುವುದು ಆದ್ದರಿಂದ ಪ್ರತಿದಿನ ಈ ವಾಟ್ಸ್‌ ಆಪ್‌ ಮತ್ತು ಆಯಾ ಕಚೇರಿಯ ಇ-ಮೇಲ್‌ ಗಳನ್ನು ಪರಿಶೀಲಿಸಿ ಅದರಂತೆ ನಿಗದಿತ ಸಮಯದೊಳಗೆ ಕ್ರಮ ಕೈಗೊಳ್ಳಬೇಕು.

2011 ರ ಜನಗಣತಿಯ ಎಲ್ಲ ಮಾಹಿತಿಗಳೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೂಡಲೇ ಪಡೆದುಕೊಳ್ಳುವಂತೆ ತಿಳಿಸಿದರು. ತಹಶೀಲ್ದಾರ್‌ ಮೇಘನಾ, ಸಮಾಜ ಕಲ್ಯಾಣಾಧಿಕಾರಿಗಳಾದ ಶ್ರೀಧರ್‌, ಡಿಓಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಹರ್ಷ, ನಗರಸಭೆಯ ಚಾರ್ಜ್‌ ಅಧಿಕಾರಿಗಳು ಹಾಗೂ ತಾಲೂಕುಗಳಲ್ಲಿ ಗ್ರಾಮಾಂತರ ಮತ್ತು ಪಟ್ಟಣ ಪ್ರದೇಶಗಳ ಚಾರ್ಜ್‌ ಅಧಿಕಾರಿಗಳು ಮತ್ತು ಜನಗಣತಿ ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು.

ಗಣತಿಗೆ ಮೊಬೈಲ್‌ ಆ್ಯಪ್‌ ಬಳಕೆ: ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹಾಗೂ ಮಾಸ್ಟರ್‌ ಟ್ರೈನರ್‌ ಬಿ.ಎ.ಜಗದೀಶ್‌ ಅವರು ಜನಗಣತಿಯು ಪ್ರತಿ 10 ವರ್ಷಕ್ಕೊಮ್ಮೆ ನಡೆಯುವ ಪ್ರಕ್ರಿಯೆಯಾಗಿದ್ದು, ಈಗಿನ ಜನಗಣತಿಯು 18 ನೇ ಜನಗಣತಿಯಾಗಿದೆ. 2020 ರಲ್ಲಿ ಏಪ್ರಿಲ್‌ ತಿಂಗಳಿಂದ ಮನೆಪಟ್ಟಿ ತಯಾರಿಕೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಕಾರ್ಯಕ್ರಮವು ನಡೆಯಲಿದೆ.

ಹಾಗೂ 2021 ರ ಫೆಬ್ರವರಿಯಿಂದ ಜನಸಂಖ್ಯಾ ಗಣತಿ ನಡೆಯಲಿದ್ದು, ಈ ಬಾರಿ ತಂತ್ರಜ್ಞಾನವನ್ನು ಅಂದರೆ ಮೊಬೈಲ್‌ ಆಪ್‌ನ್ನು ಬಳಸಿಕೊಂಡು ಗಣತಿ ಮಾಡಬೇಕಾಗಿರುವುದಾಗಿ ಹಾಗೂ ನಿರ್ದೇಶನಾಲಯದ ಸೂಚನೆ ಬಂದ ಬಳಿಕ ತಾಲೂಕು ಮಟ್ಟದಲ್ಲಿ ಕ್ಷೇತ್ರ ತರಬೇತುದಾರರನ್ನು ನೇಮಕಾತಿ ಮಾಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next