Advertisement

ಭತ್ತದ ಸಸಿಮಡಿ ಕಾರ್ಯಕ್ಕೆ ಸಿದ್ಧತೆ

12:16 AM Jun 13, 2020 | Sriram |

ಮಡಿಕೇರಿ: ಜಿಲ್ಲೆ ಯಲ್ಲಿ ಮುಂಗಾರು ಸಕಾಲದಲ್ಲಿ ಆರಂಭ ವಾಗಿರುವುದರಿಂದ ಕೃಷಿ ಚಟುವಟಿಕೆ ಗರಿಗೆದರಿದೆ. ಒಂದು ವಾರದಿಂದ ಉತ್ತಮ ಮಳೆ ಯಾಗುತ್ತಿರುವುದರಿಂದ ಭತ್ತ ಸಸಿಮಡಿ ಮಾಡುವ ಕಾರ್ಯಕ್ಕೆ ಸಿದ್ಧತೆಗಳು ನಡೆದಿವೆ.

Advertisement

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ, ಮುಸುಕಿನ ಜೋಳದ ಬೆಳೆಗಳು ಪ್ರಮುಖವಾಗಿವೆ. ಸೋಮವಾರಪೇಟೆ ತಾಲೂಕಿನ 4 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬಿತ್ತನೆ ಮಾಡುವ ಗುರಿ ಇದ್ದು, ಇದರಲ್ಲಿ ಈಗಾಗಲೇ ಶೇ. 10ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಉಳಿದಂತೆ ಬಿತ್ತನೆ ಕಾರ್ಯ ಮುಂದುವರಿದಿದೆ. ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಸಹಾಯ ಧನದಡಿ ವಿತರಣೆ ಮಾಡಲಾಗುತ್ತಿದೆ.

30,400 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಕೃಷಿ ಮಾಡುವ ಗುರಿ ಇದ್ದು, ಭತ್ತ ಸಸಿಮಡಿ ತಯಾರಿಗೆ ಸಿದ್ಧತೆಗಳು ನಡೆಯುತ್ತಿವೆ. ಭತ್ತದ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಸಹಾಯಧನದಡಿ ವಿತರಣೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ 2,600 ಕ್ವಿಂಟಾಲ್‌ ಭತ್ತ, ಮುಸುಕಿನ ಬಿತ್ತನೆ ಬೀಜ ಅಗತ್ಯವಿದ್ದು, ಈಗಾಗಲೇ 950 ಕ್ವಿಂಟಾಲ್‌ ಬಿತ್ತನೆ ಬೀಜ ವಿತರಿಸಲಾಗಿದೆ. ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕೆ. ರಾಜು ಮಾಹಿತಿ ನೀಡಿದ್ದಾರೆ.

ಕೃಷಿಕರು ಭತ್ತ ಸಸಿಮಡಿ ಮಾಡುವ ಸಂದರ್ಭ ಬಿತ್ತನೆ ಬೀಜವನ್ನು ನೀರಿನಲ್ಲಿ ನೆನೆಸಿ ತೆಗೆದ ಅನಂತರ ಮೊಳಕೆಗೆ ಇಡುವ ಮೊದಲು ಪ್ರತಿ ಕೆ.ಜಿ. ಭತ್ತ ಬಿತ್ತನೆ ಬೀಜಕ್ಕೆ 4 ಗ್ರಾಂ. ಬೇವಿಸ್ಟಿನ್‌(ಕಾರ್ಬನ್‌ಡೈಜಿಂ) ಶಿಲೀಧ್ರನಾಶಕ ಪುಡಿಯನ್ನು ಬೆರೆಸಿ ಬೀಜೋಪಚಾರ ಮಾಡುವುದು ಉತ್ತಮ. ದೀರ್ಘಾವಧಿ ತಳಿಗಳಾದ ಇಂಟಾನ್‌, ತುಂಗಾ, ಅತಿರ, ಬಿ.ಆರ್‌.2655 ತಳಿ ಭತ್ತಗಳನ್ನು ಜೂನ್‌ 10ರಿಂದ 20ರೊಳಗೆ ಬಿತ್ತನೆ ಮಾಡಬಹುದಾಗಿದೆ. ಮಧ್ಯಮಾವಧಿ ತಳಿಗಳಾದ ಐ.ಇ.ಟಿ.7191, ಜಯ, ಎಂ.ಟಿ.ಯು 1001 ತಳಿಗಳನ್ನು ಜೂನ್‌ ಮೂರನೇ ಅಥವಾ 4ನೇ ವಾರದಲ್ಲಿ ಬಿತ್ತನೆ ಮಾಡುವುದು. ಅಲ್ಪಾವಧಿ ತಳಿಗಳಾದ ಐ.ಆರ್‌.64, ಹೈಬ್ರಿಡ್‌ ಭತ್ತಗಳನ್ನು ಜುಲೈ ಮೊದಲನೇ ವಾರದ ಅನಂತರ ಬಿತ್ತನೆಗೆ ಬಳಸುವುದು ಸೂಕ್ತವಾಗಿದೆ. ಜಿಲ್ಲೆಯ ಸಹಕಾರ ಸಂಘ ಹಾಗೂ ಖಾಸಗಿ ಅಂಗಡಿಗಳಲ್ಲಿ ಯೂರಿಯಾ, ಡಿ.ಎ.ಪಿ., ಎಂ.ಒ.ಪಿ. ಹಾಗೂ ವಿವಿಧ ಕಾಂಪ್ಲೆಕ್ಸ್‌ ಗೊಬ್ಬರ ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜು ಅವರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next