Advertisement

Groundnut: ಕರಾವಳಿಯಲ್ಲಿ ಶೇಂಗಾ ಕೃಷಿಗೆ ತಯಾರಿ; 1,800 ಹೆಕ್ಟೇರ್‌ನಲ್ಲಿ ಕೃಷಿ ನಿರೀಕ್ಷೆ

09:38 AM Nov 24, 2023 | Team Udayavani |

ಕೋಟ: ಕರಾವಳಿಯಲ್ಲಿ ಶೇಂಗಾ ಕೃಷಿ ಚಟುವಟಿಕೆ ಜೋರಾಗಿ ನಡೆಯುತ್ತಿದ್ದು, ಗದ್ದೆಯನ್ನು ಹದಮಾಡಿ ಬೀಜ ಬಿತ್ತನೆಗೆ ತಯಾರಿ ಆರಂಭಗೊಂಡಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ (ಕೋಟ ಹೋಬಳಿ) ಹಾಗೂ ಬೈಂದೂರು, ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬೆಳೆಯಲಾಗುತ್ತದೆ. ಇಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಶೇಂಗಾ ಬೆಳೆಗಾರರಿದ್ದು, ಅಂದಾಜು 1,700-2,000 ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತದೆ.

Advertisement

ಕರಾವಳಿಯಲ್ಲಿ ಸಂಪೂರ್ಣ ಒಣಭೂಮಿಯಲ್ಲಿ ಶೇಂಗಾ ಬೆಳೆಯುವುದರಿಂದ ನವೆಂಬರ್‌ ಆರಂಭದಲ್ಲಿ ಭೂಮಿಯನ್ನು ಹದಮಾಡಲು ಆರಂಭಿಸಿ ಡಿಸೆಂಬರ್‌ ನಲ್ಲಿ ಬೀಜ ಬಿತ್ತನೆ ನಡೆಸಲಾಗುತ್ತದೆ. ಅದೇ ರೀತಿ ಒಣಭೂಮಿಯಲ್ಲಿ ಅತೀ ಹೆಚ್ಚಿನ ಫಸಲು ದಾಖಲಿಸುವಲ್ಲಿ ಕರಾವಳಿ ಭಾಗ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.

ಕರಾವಳಿಯ ಶೇಂಗಾಕ್ಕೆ ಬಹು ಬೇಡಿಕೆ: ಕರಾವಳಿಯಲ್ಲಿ ಬೆಳೆಯುವ ಶೇಂಗಾ ಉತ್ತಮ ಗುಣಮಟ್ಟ, ರುಚಿ ಹಾಗೂ ಅಧಿ ಕ ಎಣ್ಣೆಯಂಶ ಹೊಂದಿರುವುದರಿಂದ ಹೊರ ಜಿಲ್ಲೆಗಳಲ್ಲಿ ಹೆಚ್ಚಿನ ಬೇಡಿಕೆ ಇದೆ ಮತ್ತು ಫಸಲು ಕೂಡ ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ. ಭತ್ತಕ್ಕೆ ಹೋಲಿಕೆ ಮಾಡಿದರೆ ಹೆಚ್ಚಿನ ಲಾಭ ಕೂಡ ಸಿಗುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಭತ್ತದ ಅನಂತರ ವಾಣಿಜ್ಯ ಬೆಳೆಯಾಗಿ ಶೇಂಗಾ ದೊಡ್ಡ ಪ್ರಮಾಣದಲ್ಲಿ ಗುರುತಿಸಿಕೊಂಡಿದೆ.

ಶೇಂಗಾ ಕೃಷಿಗೆ 2 ರೀತಿಯ ತಳಿಗಳಿದ್ದು, 120 ದಿನದಲ್ಲಿ ಹಾಗೂ 90 ದಿನಗಳಲ್ಲಿ ಬೆಳೆಯುವ ಬೀಜಗಳಿವೆ. ಕುಂದಾಪುರ, ಬೈಂದೂರು, ಕೋಟ ಭಾಗದಲ್ಲಿ ಉಪ್ಪು ನೀರಿನ ಪ್ರಭಾವವೂ ಜಾಸ್ತಿಯಿರುವುದರಿಂದ ಕಡಿಮೆ ತೇವಾಂಶ ಹಾಗೂ ಕಡಿಮೆ ದಿನಗಳಲ್ಲಿ ಬೆಳೆಯುವ ಬೀಜದ ಮೊರೆ ಹೋಗಲಾಗುತ್ತದೆ.

ಸ್ವಲ್ಪ ಪ್ರಮಾಣದಲ್ಲಿ ಕುಸಿತ
ಭತ್ತದ ಬೆಳೆಯ ರೀತಿಯಲ್ಲೇ ಶೇಂಗಾ ಕೂಡ ಸ್ವಲ್ಪ ಮಟ್ಟಿನ ಕುಸಿತ ಕಂಡಿದೆ. ಸುಮಾರು ಏಳೆಂಟು ವರ್ಷದ ಹಿಂದೆ 2 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತಿತ್ತು. ಆದರ ಪ್ರಸ್ತುತ ಅದರ ಪ್ರಮಾಣ ಕುಸಿತವಾಗಿದ್ದು, 1,700-1,800 ಹೆಕ್ಟೇರ್‌ನಷ್ಟಿದೆ.

Advertisement

600 ಕ್ವಿಂಟಾಲ್‌ ಬೀಜ ಬೇಡಿಕೆ
ಕುಂದಾಪುರ ಹೋಬಳಿಯಲ್ಲಿ 100-125 ಕ್ವಿಂಟಾಲ್‌, ಕೋಟ 225 ಕ್ವಿಂಟಾಲ್‌, ಬೈಂದೂರು 300 ಕ್ವಿಂಟಾಲ್‌ ಸೇರಿದಂತೆ ಜಿಲ್ಲೆಯಲ್ಲಿ 625-650 ಕ್ವಿಂಟಾಲ್‌ ತನಕ ಇಲಾಖೆ ಮೂಲಕ ಶೇಂಗಾ ಬೀಜದ ಬೇಡಿಕೆ ಇದೆ. ಶೇಂಗಾದಲ್ಲೂ ಆಧುನಿಕತೆ
ಈ ಹಿಂದೆ ಶೇಂಗಾ ಬಿತ್ತನೆಯ ಉಳುಮೆಗೆ ಕೋಣ ಗಳನ್ನೇ ಅವಲಂಬಿಸಲಾಗಿತ್ತು ಹಾಗೂ ಮಾನವ ಶ್ರಮದ ಮೂಲಕವೇ ಬೀಜ ಬಿತ್ತನೆ ಮಾಡಲಾಗುತಿತ್ತು. ಆದರೆ ಪ್ರಸ್ತುತ ಯಾಂತ್ರೀಕರಣ ಈ ಕ್ಷೇತ್ರವನ್ನು ಆವರಿಸಿದ್ದು ಟಿಲ್ಲರ್‌, ಟ್ರ್ಯಾಕ್ಟರ್‌ ಮೂಲಕ ಉಳುಮೆ, ಕೂರಿಗೆ  ವಿಧಾನದ ಮೂಲಕ ಬೀಜ ನಾಟಿ ಮಾಡಲಾಗುತ್ತಿದೆ ಹಾಗೂ ಹೆಚ್ಚಿನ ಲಾಭ ಗಳಿಕೆಗಾಗಿ ಆಧುನಿಕ ವಿಧಾನಗಳನ್ನು
ಅನುಸರಿಸಲಾಗುತ್ತಿದೆ.

ಬೀಜ ದಾಸ್ತಾನು
ಜಿಲ್ಲೆಯಲ್ಲಿ 625-650ಕ್ವಿಂಟಾಲ್‌ ಶೇಂಗಾ ಬೀಜದ ಬೇಡಿಕೆ ಇದ್ದು ಪ್ರಸ್ತುತ ಸ್ವಲ್ಪ ಪ್ರಮಾಣದ ದಾಸ್ತಾನು ಇದೆ. ಮುಂದೆ ಬೇಡಿಕೆಗೆ ತಕ್ಕಂತೆ ಬೀಜದ ಪೂರೈಕೆ ಮಾಡಲು ಕ್ರಮಕೈಗೊಳ್ಳಲಾಗುತ್ತದೆ.
ಸೀತಾ, ಜಂಟಿ ಕೃಷಿ ನಿರ್ದೇಶಕರು ಉಡುಪಿ ಜಿಲ್ಲೆ

ಪೂರಕ ವಾತಾವರಣ
ಕಳೆದ ವರ್ಷ ನವೆಂಬರ್‌ ಅಂತ್ಯದಲ್ಲಿ ಮಳೆ ಯಾದ್ದರಿಂದ ಶೇಂಗಾ ಬಿತ್ತನೆ ಡಿಸೆಂಬರ್‌ ಕೊನೆ ವಾರದಲ್ಲಿ ಮಾಡಲಾಗಿತ್ತು. ಆದರೆ ಈ ಬಾರಿ ಮಳೆಯ ಸಮಸ್ಯೆಯಾಗಿಲ್ಲ. ಹೀಗಾಗಿ ಪ್ರಸ್ತುತ ವಾತಾವರಣ ಬಿತ್ತನೆಗೆ ಪೂರಕವಾಗಿದೆ. ಶೇಂಗಾದಲ್ಲಿ ಟಿಎಂವಿ-2 ಅಥವಾ ಜಿ2-52 ತಳಿಯನ್ನು ಉಪಯೋಗಿಸಿದರೆ ಅತ್ಯಂತ ಉಪಯುಕ್ತವಾಗಲಿದೆ.
ಡಾ| ಧನಂಜಯ್‌, ಕೃಷಿ
ವಿಜ್ಞಾನಿ, ಕೃಷಿ ಕೇಂದ್ರ ಬ್ರಹ್ಮಾವರ

*ರಾಜೇಶ್‌ ಗಾಣಿಗ ಅಚ್ಲಾಡಿ

 

Advertisement

Udayavani is now on Telegram. Click here to join our channel and stay updated with the latest news.

Next