Advertisement

ಯುದ್ಧಕ್ಕೆ ನಡೆದಿದೆ ಸಿದ್ಧತೆ

07:58 AM Oct 10, 2017 | Team Udayavani |

ಲಂಡನ್‌/ವಾಷಿಂಗ್ಟನ್‌: ವಿಶ್ವವನ್ನೇ ಎದುರು ಹಾಕಿಕೊಂಡು ಪರಮಾಣು, ಕ್ಷಿಪಣಿ ಪರೀಕ್ಷೆ ನಡೆಸುತ್ತಿರುವ ಉತ್ತರ ಕೊರಿಯಾ ವಿರುದ್ಧ ಅಮೆರಿಕ ಮತ್ತು ಬ್ರಿಟನ್‌ ಯುದ್ಧಕ್ಕೇ ಮುಂದಾಗಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗಾಗಲೇ ಮುನ್ಸೂಚನೆ ನೀಡಿದ್ದು, ಅದಕ್ಕೆ ಪೂರಕವಾಗಿ ಅಮೆರಿಕ ರಕ್ಷಣಾ ಸಚಿವ ಜಿಮ್‌ ಮ್ಯಾಟಿಸ್‌ ಯುದ್ಧಕ್ಕೆ ಸಿದ್ಧರಾಗಿ ಎಂದು ಸೈನಿಕರಿಗೆ ಸೋಮವಾರ ಸೂಚಿಸಿದ್ದಾರೆ. 

Advertisement

ಇದಕ್ಕೆ ಇಂಬು ಎಂಬಂತೆ ಬ್ರಿಟನ್‌ ಕೂಡ ರಹಸ್ಯವಾಗಿ ಸಿದ್ಧತೆ ನಡೆಸುತ್ತಿದೆ. ಅದಕ್ಕಾಗಿ ಇತ್ತೀಚೆಗಷ್ಟೇ ಸೇವೆಗೆ ಬಿಡುಗಡೆಯಾಗಿರುವ ವಿಮಾನ ವಾಹಕ ನೌಕೆ ಎಚ್‌ಎಂಎಸ್‌ ಕ್ವೀನ್‌ ಎಲಿಜಬೆತ್‌ ಅನ್ನು ಉತ್ತರ ಕೊರಿಯಾದತ್ತ ನಿಯೋಜಿಸಲಾಗಿದೆ. ಭಾನುವಾರವಷ್ಟೇ ಅಧ್ಯಕ್ಷ ಟ್ರಂಪ್‌ ಟ್ವೀಟ್‌ ಮಾಡಿ ಉತ್ತರ ಕೊರಿಯಾ ಜತೆ ರಾಜತಾಂತ್ರಿಕ ಮಾರ್ಗದಲ್ಲಿ ಕೈಗೊಳ್ಳುವ ಎಲ್ಲ ದಾರಿಗಳೂ ಮುಚ್ಚಿವೆ ಎಂದು ಬರೆದುಕೊಂಡಿದ್ದರು. ಅಮೆರಿಕ ಸೇನಾಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅಲ್ಲಿನ ರಕ್ಷಣಾ ಸಚಿವ ಜಿಮ್‌ ಮ್ಯಾಟಿಸ್‌ ಉತ್ತರ ಕೊರಿಯಾ ವಿರುದ್ಧ ಸಮರ ಸಾರಲು ಕಡ್ಡಾಯವಾಗಿ ಸಿದ್ಧವಾಗಬೇಕು ಎಂದಿದ್ದಾರೆ. “ಉತ್ತರ ಕೊರಿಯಾ ನಡೆಸುತ್ತಿರುವ ಉದ್ಧಟತನದ ಕೃತ್ಯಗಳಿಗೆ ರಾಜತಾಂತ್ರಿಕವಾಗಿ, ಆರ್ಥಿಕವಾಗಿ ನಿಯಂತ್ರಣ ಹೇರಲು ಪ್ರಯತ್ನಿಸಿ ಯಾವುದೇ ಫ‌ಲ ಕಂಡಿಲ್ಲ. ಜತೆಗೆ ಆ ದೇಶದ ಸರ್ಕಾರದ ಮನವೊಲಿಸುವ ಪ್ರಯತ್ನಗಳನ್ನೂ ನಡೆಸಲಾಯಿತು. ಅವುಗಳಿಗೆ ಯಾವುದಕ್ಕೂ ಬೆಲೆ ಇಲ್ಲದಂತಾಗಿದೆ. ಈಗ ಕೊನೆಯ ಮಾರ್ಗವನ್ನೇ ಬಳಸಬೇಕಾಗಿದೆ’ ಎಂದಿದ್ದಾರೆ. ಈ ಮೂಲಕ ಕಿಮ್‌ ಜಾಂಗ್‌ ಉನ್‌ ನೇತೃತ್ವದ ಸರ್ಕಾರ ಇರುವ ಉತ್ತರ ಕೊರಿಯಾ ವಿರುದ್ಧ ಯುದ್ಧ ಸಾರುವ ಮಾತನಾಡಿದ್ದಾರೆ ಜಿಮ್‌ ಮ್ಯಾಟಿಸ್‌. ಸದ್ಯಕ್ಕೆ ಬೇರೆ ದಾರಿಯೇ ಇಲ್ಲ ಎಂದು ಹೇಳಿರುವ ಜಿಮ್‌ ಮ್ಯಾಟಿಸ್‌, ಸೇನೆಗೆ ಸಿದ್ಧತೆಯಲ್ಲಿರುವಂತೆ ಸೂಚಿಸಲು ಅಧ್ಯಕ್ಷ ಟ್ರಂಪ್‌ ಹೇಳಿದ್ದಾರೆ ಎಂದರು. 

ಉತ್ತರ ಕೊರಿಯಾ ವಿರುದ್ಧ ಆರ್ಥಿಕ, ರಾಜತಾಂತ್ರಿಕ ದಾರಿಗಳ ಮೂಲಕ ಬಗ್ಗಿಸಲು ವಿಶ್ವಸಂಸ್ಥೆ ಮಾಡಿದ ಪ್ರಯತ್ನಕ್ಕೆ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಇದೆ ಎಂದು ಹೇಳಿಕೊಂಡಿದ್ದಾರೆ. ಇಷ್ಟೆಲ್ಲ ಇದ್ದರೂ ಅಮೆರಿಕದ ಸೇನೆ ಯುದ್ಧಸನ್ನದ್ಧವಾಗಿರಬೇಕು ಎಂದು ಮ್ಯಾಟಿಸ್‌ ಹೇಳಿದ್ದಾರೆ. ಕಳೆದ ಶುಕ್ರವಾರವಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶ್ವೇತಭವನದಲ್ಲಿ ಸೇನೆಯ ಹಿರಿಯ ಅಧಿಕಾರಿಗಳ ಜತೆ ಒಂದು ವೇಳೆ ಯುದ್ಧವನ್ನೇ ಮಾಡಬೇಕಾದಂಥ ಪರಿಸ್ಥಿತಿ ಬಂದೊದಗಿದರೆ ಏನಾಗಬಹುದು ಎಂದು ಗಹನವಾಗಿ ಚರ್ಚಿಸಿದ ನಂತರ ಜಿಮ್‌ ಮ್ಯಾಟಿಸ್‌ ಯುದ್ಧ ಸನ್ನದ್ಧತೆಯ ಘೋಷಣೆ ಮಾಡಿದ್ದಾರೆ.

ಬೆಂಬಲ ಸೂಚಿಸಿ: ಅಮೆರಿಕ ಸಂಸತ್‌ಗೆ ಮನವಿ ಮಾಡಿರುವ ಅಧ್ಯಕ್ಷ ಟ್ರಂಪ್‌ ನಂಬಿಕಸ್ಥ ಮ್ಯಾಟಿಸ್‌ “ಯುದ್ಧ ಸಂಭವಿಸಿದ್ದೇ ಆದಲ್ಲಿ ಅದಕ್ಕೆ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದ್ದಾರೆ. ಅಧ್ಯಕ್ಷ ಟ್ರಂಪ್‌ “ದೇಶದ ಹಿಂದಿನ ಅಧ್ಯಕ್ಷರು 25 ವರ್ಷಗಳಿಂದ ಉತ್ತರ ಕೊರಿಯಾ ಜತೆ ಮಾತುಕತೆ ನಡೆಸುತ್ತಲೇ ಇದ್ದಾರೆ. ಆದರೆ ಆ ದೇಶದ ಮೇಲೆ ಯಾವುದೇ ನಿಯಂತ್ರಣ ಹೇರುವಲ್ಲಿ ವಿಫ‌ಲರಾಗಿದ್ದಾರೆ. ಅದಕ್ಕಾಗಿ ಹೇರಳವಾಗಿ ಹಣಕಾಸು ವ್ಯರ್ಥವಾಗಿದೆ’ ಎಂದು ಟ್ವೀಟ್‌ ಮಾಡಿದ್ದರು. 

ಯುದ್ಧ ನೌಕೆ ರವಾನೆ: ಈ ನಡುವೆ ಬ್ರಿಟನ್‌ ಕೂಡ ಅಮೆರಿಕದ ಜತೆಗೂಡಲು ಮುಂದಾಗಿದೆ ಎಂದು ಹೇಳಲಾಗಿದೆ. ಅದಕ್ಕೆ ಪೂರಕವಾಗಿ ವಿಮಾನ ವಾಹಕ ನೌಕೆ ಎಚ್‌ಎಂಎಸ್‌ ಕ್ವೀನ್‌ ಎಲಿಜಬೆತ್‌ ಅನ್ನು ಉತ್ತರ ಕೊರಿಯಾದತ್ತ ಕಳುಹಿಸಲಾಗಿದೆ.

Advertisement

ಸಂಯಮ ವಹಿಸಿ: ಅಮೆರಿಕ ರಕ್ಷಣಾ ಸಚಿವ ಜಿಮ್‌ ಮ್ಯಾಟಿಸ್‌ ಯುದೊತ್ಸಾಹದ ಕೂಗು ಹಾಕುತ್ತಿರುವಂತೆಯೇ ಉತ್ತರ ಕೊರಿಯಾದ ಪರಮಾಪ್ತ ರಾಷ್ಟ್ರ ಚೀನಾ ಮತ್ತು ರಷ್ಯ ಸಂಯಮ ವಹಿಸಬೇಕು ಎಂದು ಪ್ರತಿಪಾದಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next