Advertisement

ದಸರಾ ಆಚರಣೆಗೆ ರೂಪುರೇಷೆ ಸಿದ್ಧಪಡಿಸಿಕೊಳ್ಳಿ

09:45 PM Aug 23, 2019 | Team Udayavani |

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಕಾರ್ಯಕ್ರಮಗಳನ್ನು ಈ ಬಾರಿ ವಿಶೇಷವಾಗಿ ಆಯೋಜಿಸಲು ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರು.

Advertisement

ಸ್ತಬ್ಧಚಿತ್ರ: ಶುಕ್ರವಾರ ದಸರಾ ಪೂರ್ವಭಾವಿ ಸಭೆ ನಡೆಸಿದ ಅವರು, ದಸರಾ ಕಾರ್ಯಕ್ರಮಗಳು ನಾವೀನ್ಯತೆಯೊಂದಿಗೆ ಚುರುಕಾಗಿ ನಡೆಯಬೇಕು. ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧಚಿತ್ರಗಳ ವಿವರವನ್ನು ಎಲ್ಲಾ ಜಿಲ್ಲೆ ಹಾಗೂ ಇಲಾಖೆಗಳಿಗೆ ಪತ್ರ ಬರೆದು ಸ್ತಬ್ಧಚಿತ್ರಗಳ ಭಾಗವಹಿಸುವ ಬಗ್ಗೆ ಖಾತ್ರಿ ಪಡೆದುಕೊಳ್ಳುವಂತೆ ತಿಳಿಸಿದರು.

ರೈತ, ಮಹಿಳಾ ದಸರಾ: ರೈತ ದಸರಾ ಹಾಗೂ ಮಹಿಳಾ ದಸರಾ ಎರಡು ಸಹ ಜೆ.ಕೆ.ಮೈದಾನದಲ್ಲಿ ನಡೆಯುವುದರಿಂದ ಜನಸಂದಣಿ ಹೆಚ್ಚಾಗುತ್ತದೆ ಹಾಗೂ ಉಪಸಮಿತಿಗಳಿಂದ ಹೆಚ್ಚಿನ ಕಾರ್ಯಕ್ರಮಗಳು ಆಯೋಜಿಸುವುದು ಕಷ್ಟಕರವಾಗುತ್ತದೆ. ಇದಕ್ಕಾಗಿ ಮಹಿಳಾ ದಸರಾವನ್ನು ಬೇರೆ ಸ್ಥಳದಲ್ಲಿ ಆಯೋಜಿಸುವುದು ಉತ್ತಮ. ಮಹಿಳಾ ದಸರಾ ಆಚರಣೆಗೆ ಸ್ಥಳ ಗುರುತಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕುಸ್ತಿ ಪಂದ್ಯ: ದೇವರಾಜ ಅರಸು ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 8ಲಕ್ಷ ರೂ. ಬಿಡುಗಡೆಯಾಗಿದ್ದು, ನೆರೆ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲು ಸಾಧ್ಯವಾಗಿಲ್ಲ. ಈ ಅನುದಾನವನ್ನು ದಸರಾ ಕುಸ್ತಿ ಪಂದ್ಯಾವಳಿಗೆ ಬಳಸಿಕೊಳ್ಳುವುದು ಸೂಕ್ತ ಎಂದರು.

ದೀಪಾಲಂಕಾರ: ವಿದ್ಯುತ್‌ ದೀಪಾಲಂಕಾರವನ್ನು ಹೆಚ್ಚು ಜನರು ಓಡಾಡುವ ರಸ್ತೆಗಳಲ್ಲಿ ಹಾಕಬೇಕು ಹಾಗೂ ಪಾರಂಪರಿಕ ಕಟ್ಟಡಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಬೇಕು. ಹೊಸ ವಿನ್ಯಾಸ ಹಾಗೂ ಚಿಂತನೆಗಳೊಂದಿಗೆ ದೀಪಾಲಂಕಾರ ಮಾಡಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿ ಎಂದು ತಿಳಿಸಿದರು.

Advertisement

ಆಹಾರ ಮೇಳ: ಆಹಾರ ಮೇಳವನ್ನು ವೈವಿಧ್ಯತೆಯಿಂದ ನಡೆಸಬೇಕು. ಜೈನರು, ಸಿಖVರು, ಟಿಬೇಟಿಯನ್‌ ಸೇರಿದಂತೆ ವಿವಿಧ ಸಂಘಗಳೊಂದಿಗೆ ಚರ್ಚಿಸಿ ಅವರಿಗೆ ಆಹಾರ ಮಳಿಗೆಗಳನ್ನು ನೀಡಿದರೆ ವಿವಿಧ ರೀತಿಯ ಆಹಾರ ಹಾಗೂ ಅದೇ ಸಂಘಗಳಿಗೆ ಆಹಾರ ಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಸಹ ಅವಕಾಶ ನೀಡಬಹುದು. ಸಿರಿಧಾನ್ಯಗಳಿಂದ ವಿಶೇಷ ಆಹಾರ ತಿನಿಸುಗಳು ಸೇರಿದಂತೆ ಎಲ್ಲಾ ರೀತಿಯ ಆರೋಗ್ಯಕರ ಉತ್ತಮ ತಿನಿಸುಗಳಿಗೆ ಅವಕಾಶ ನೀಡಿ. ಆಹಾರ ಮೇಳದಲ್ಲಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದರು.

ಯೋಗ ದಸರಾ: ಯೋಗ ದಸರಾ ಈ ಬಾರಿ 7 ದಿನಗಳ ಕಾಲ ಆಯೋಜಿಸಲು ಚಿಂತನೆ ನಡೆಸಿ. ವಿವಿಧ ರೀತಿಯ ಯೋಗ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಿ. ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ರಾಷ್ಟ್ರೀಯ ಮಟ್ಟದ ಯೋಗಪಟುಗಳನ್ನು ಆಹ್ವಾನಿಸಿ ವಿಶೇಷವಾಗಿ ಆಚರಿಸುವಂತೆ ತಿಳಿಸಿದರು.

ಫ‌‌ಲಪುಷ್ಪ: ಫ‌‌ಲಪುಷ್ಪ ಪ್ರದರ್ಶನವನ್ನು ಜನರಿಗೆ ಮಾಹಿತಿ ನೀಡುವ ರೀತಿ ಆಚರಿಸಿ. ಔಷಧೀಯ ಸಸ್ಯಗಳ ಪ್ರದರ್ಶನ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಬಿ.ಆರ್‌.ಪೂರ್ಣಿಮಾ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಮುಡಾ ಆಯುಕ್ತ ಕಾಂತರಾಜು ಪಿ.ಎಸ್‌., ಅಧೀಕ್ಷಕ ಇಂಜಿನಿಯರ್‌ ಸುರೇಶ್‌ ಬಾಬು, ನಗರ ಯೋಜನೆ ಜಂಟಿ ನಿರ್ದೇಶಕ ಗಿರೀಶ್‌, ಮೈಸೂರು ಉಪ ವಿಭಾಗಾಧಿಕಾರಿ ಶಿವೇಗೌಡ, ಜಂಟಿ ಕೃಷಿ ನಿರ್ದೇಶಕ ಮಹಾಂತೇಶಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next