ಹಾಸನ: ಜಿಲ್ಲೆಯ 4 ತಾಲೂಕುಗಳಲ್ಲಿ ಎರಡನೇ ಹಂತದಲ್ಲಿ ನಡೆಯಲಿರುವ 120 ಗ್ರಾಪಂ ಚುನಾವಣೆಗೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಸೀಕೆರೆ, ಬೇಲೂರು, ಆಲೂರು ಮತ್ತು ಹೊಳೆನರಸೀಪುರ ತಾಲೂಕಿನ 120 ಗ್ರಾಪಂನ 1648 ಸದಸ್ಯ ಸ್ಥಾನಗಳಿಗೆ ಡಿ.27ರಂದು ಚುನಾವಣೆ ನಡೆಯಲಿದ್ದು, ಒಟ್ಟು 4041 ಅಭ್ಯರ್ಥಿಗಳುಸ್ಪರ್ಧಾಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆದ ಕಾರಣ ಎರಡು ಸದಸ್ಯ ಸ್ಥಾನಗಳು ಖಾಲಿ ಉಳಿದಿವೆ. ಈಗಾಗಲೇ 178 ಸದಸ್ಯರು ಅವಿರೋಧವಾಗಿಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಅಯಾಯ ತಾಲೂಕು ಕೇಂದ್ರಗಳಲ್ಲಿ ಡಿ.26ರಂದು ಬೆಳಗ್ಗೆಯಿಂದಲೇ ಮಸ್ಟರಿಂಗ್ ನಡೆಯಲಿದ್ದು, ಯಾವುದೇ ಗೊಂದಲಗಳಿಲ್ಲದಂತೆ ನಿರ್ವಹಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ. 220 ಸೂಕ್ಷ್ಮ ಮತಗಟ್ಟೆ ಸೇರಿ 905 ಮತಗಟ್ಟೆಗಳಲ್ಲಿ 4,92,536 ಅರ್ಹ ಮತದಾರರು ಮತದಾನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಮತಪೆಟ್ಟಿಗೆಗಳು ಸೇರಿ ಮತದಾನ ಪರಿಕರಗಳೊಂದಿಗೆ 3,982ಚುನಾವಣಾ ಸಿಬ್ಬಂದಿಯನ್ನು ನಿಯೋಜಿತ ಸ್ಥಳಕ್ಕೆ ಕೊಂಡೊಯ್ಯಲು 127ಕೆಎಸ್‌ಆರ್‌ಟಿಸಿ ಬಸ್, 37 ಮ್ಯಾಕ್ಸಿಕ್ಯಾಬ್, 49 ಜೀಪ್ ಸೇರಿ ಒಟ್ಟು 213 ವಾಹನ ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
4 ತಾಲೂಕುಗಳಲ್ಲಿ 76 ಮಂದಿ ಕೋವಿಡ್ ಸೋಂಕಿತ ಮತದಾರರನ್ನು ಗುರುತಿಸಿದ್ದು, ಅವರು ಮತ ಚಲಾವಣೆ ಮಾಡಲು ಇಚ್ಛಿಸಿದರೆ ಸಂಬಂಧಪಟ್ಟ ಚುನಾವಣಾಧಿಕಾರಿಗಳಲ್ಲಿ ಧೃಢೀಕರಣ ಪತ್ರದೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ಸೋಂಕಿತರು ಮತದಾನ ಮಾಡಲು ಜಿಲ್ಲಾಡಳಿತವು ವ್ಯವಸ್ಥೆ ಮಾಡಲಿದೆ ಎಂದು ಡೀಸಿ ಸ್ಪಷ್ಟಪಡಿಸಿದರು. ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಎಎಸ್ಪಿ ಬಿ.ಎನ್.ನಂದಿನಿ, ಡಿಎಚ್‌ಒ ಡಾ.ಸತೀಶ್‌ಕುಮಾರ್ ಹಾಜರಿದ್ದರು.