Advertisement

ಸಂಗಮ ಕ್ಷೇತ್ರದಲ್ಲಿ 3 ದಿನಗಳ ಕುಂಭಮೇಳಕ್ಕೆ ಸಿದ್ಧತೆ

05:43 AM Jan 01, 2019 | Team Udayavani |

ಮೈಸೂರು: ತಿರುಮಕೂಡಲು ನರಸೀಪುರದ ಕಾವೇರಿ, ಕಪಿಲಾ ಹಾಗೂ ಸ್ಪಟಿಕ ಸರೋವರಗಳ ಸಂಗಮ ಕ್ಷೇತ್ರದಲ್ಲಿ ಫೆ.17ರಿಂದ 19ರವರೆಗೆ ಮೂರು ದಿನಗಳ ಕಾಲ 11ನೇ ಕುಂಭಮೇಳ ನಡೆಯಲಿದ್ದು, 17ರಂದು ಪ್ರಾತಃಕಾಲದಲ್ಲಿ ಅಗಸ್ತ್ಯ ಪುಣ್ಯಸ್ನಾನ, 18ರಂದು ಪೂರ್ಣಾಹುತಿ, ಹೋಮ, ರುದ್ರಹೋಮ, 19 ರಂದು ಚಂಡಿಹೋಮ, ಬೆಳಗ್ಗೆ 9.35ರಿಂದ 9.50ರ ಮೀನ ಲಗ್ನದಲ್ಲಿ ಪುಣ್ಯಸ್ನಾನ ನಡೆಯಲಿದೆ. 

Advertisement

ಕುಂಭಮೇಳ ಸಂಬಂಧ ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ಸ್ವಾಮೀಜಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಅಧಿಕಾರಿಗಳು ಭಾಗಿಯಾಗಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಕುಂಭಮೇಳ ಟ್ರಸ್ಟ್‌ ರಚನೆ: ಉತ್ತರ ಭಾರತದ ಪುಣ್ಯನದಿಗಳ ಸಂಗಮ ಕ್ಷೇತ್ರಗಳಾದ ಅಲಹಾಬಾದ್‌, ಹರಿದ್ವಾರ, ಪ್ರಯಾಗ್‌ ಮುಂತಾದ ಕಡೆಗಳಲ್ಲಿ ಕುಂಭಮೇಳ ನಡೆಯುತ್ತಿದ್ದು, ಇಂತಹ ಪುಣ್ಯ ತೀರ್ಥ ಮಾಘಸ್ನಾನ ಲಕ್ಷಾಂತರ ಜನರನ್ನು ಸೆಳೆಯುತ್ತಿದೆ.

ಈ ಸದಾವಕಾಶ ದಕ್ಷಿಣ ಭಾರತದ ಭಕ್ತಾದಿಗಳಿಗೂ ದೊರಕಬೇಕೆಂಬ ಆಶಯದಿಂದ ತಿರಮಕೂಡಲು ನರಸೀಪುರದ ಸಂಗಮ ಕ್ಷೇತ್ರದಲ್ಲಿ 1989ರಲ್ಲಿ ಪ್ರಪ್ರಥಮ ಬಾರಿಗೆ ಕುಂಭಮೇಳ ಆರಂಭಿಸಲಾಯಿತು. ಬಳಿಕ ಆದಿಚುಂಚನಗಿರಿ, ಸುತ್ತೂರುಮಠ, ಓಂಕಾರ ಆಶ್ರಮದ ಸ್ವಾಮೀಜಿಗಳ ನೇತೃತ್ವದಲ್ಲಿ ಕುಂಭಮೇಳ ಟ್ರಸ್ಟ್‌ ರಚಿಸಿಕೊಂಡು ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳ ನಡೆಸಿಕೊಂಡು ಬರಲಾಗುತ್ತಿದೆ. 

ಇಲಾಖೆಗಳಿಗೆ ಜವಾಬ್ದಾರಿ: ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಕುಂಭಮೇಳದ ಯಶಸ್ಸಿನ ದೃಷ್ಟಿಯಿಂದ ಯಾವ್ಯಾವ ಇಲಾಖೆಗಳಿಗೆ ಏನೇನು ಜವಾಬ್ದಾರಿ ನೀಡಬೇಕು ಎಂಬ ವಿಚಾರಗಳನ್ನು ಚರ್ಚಿಸಲಾಗಿದೆ. ಜ.2ರಂದು ಪುರಸಭೆ, ಜಿಲ್ಲಾ ಪಂಚಾಯ್ತಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮುಜರಾಯಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕುಂಭಮೇಳದ ಕುರಿತು ಪ್ರಸ್ತಾವನೆ ಸಲ್ಲಿಸಲಿದ್ದಾರೆ.

Advertisement

ಅಂದು ನರಸೀಪುರದಲ್ಲಿ ನಡೆಯುವ ಸಭೆಯಲ್ಲಿ ಏನೆಲ್ಲಾ ಸಿದ್ಧತೆ ಆಗಬೇಕು, ಎಷ್ಟು ಅನುದಾನ ಅಗತ್ಯವಿದೆ ಎಂಬುದು ಗೊತ್ತಾಗಲಿದೆ. ಬಳಿಕ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. 

ಬೆಂಗಳೂರಿನ ಕೈಲಾಶ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿ, ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನ ಮಠದ ಶಿವಾನಂದಪುರಿ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಆತ್ಮಾನಂದಜೀ ಮಹಾರಾಜ್‌, ಓಂಕಾರ ಆಶ್ರಮದ ಮಧು ಸೂದನಾನಂದ ಸ್ವಾಮೀಜಿ,

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಲಕ್ಷ್ಮೀಜಿ, ಶಾಸಕ ಎಂ.ಅಶ್ವಿ‌ನ್‌ ಕುಮಾರ್‌, ಜಿಲ್ಲಾ ಪಂಚಾಯ್ತಿ ಸದಸ್ಯ ಮಂಜುನಾಥ್‌, ಉಪವಿಭಾಗಾಧಿಕಾರಿ ಶಿವೇಗೌಡ, ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್‌.ಪಿ. ಮಂಜುನಾಥ್‌, ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸಿ.ಜಿ.ಬೆಟಸೂರ್‌ಮಠ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್ಪಿ ಸ್ನೇಹ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ಕಾವೇರಿ, ಕಪಿಲಾ ಹಾಗೂ ಸ್ಪಟಿಕ ಸರೋವರ ಹರಿಯುವ ಸಂಗಮ ಕ್ಷೇತ್ರದಲ್ಲಿ ಕುಂಭಮೇಳದ ನಿಮಿತ್ತ ಮೂರು ದಿನಗಳ ಕಾಲ ನಾನಾ ಧಾರ್ಮಿಕ ಕಾರ್ಯಗಳು ಜರುಗಲಿದೆ.
-ನಿರ್ಮಲಾನಂದನಾಥ ಶ್ರೀ, ಆದಿಚುಂಚನಗಿರಿ ಮಠಾಧೀಶ

ತಿರುಮಕೂಡಲು ನರಸೀಪುರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕುಂಭಮೇಳಕ್ಕೆ ಇನ್ನು 45 ದಿನಗಳು ಮಾತ್ರ ಬಾಕಿ ಉಳಿದಿದೆ. ಹಾಗಾಗಿ, ಸಿದ್ಧತೆಗಳನ್ನು ತ್ವರಿತಗತಿಯಲ್ಲಿ ಮಾಡಿಕೊಳ್ಳಬೇಕಿದೆ.
-ಶಿವರಾತ್ರಿ ಸ್ವಾಮೀಜಿ, ಸುತ್ತೂರು ಮಠ

Advertisement

Udayavani is now on Telegram. Click here to join our channel and stay updated with the latest news.

Next