ಹೊಸದಿಲ್ಲಿ: ಜೂನ್‌ನಲ್ಲಿ ಮುಕ್ತಾಯಗೊಳ್ಳುವ ಚುನಾವಣೆ ಬಳಿಕ ಹೊಸ ಸರಕಾರದ ಅವಧಿ ಯಲ್ಲಿ ಮೊದಲ 100 ದಿನಗಳಲ್ಲಿ ಅನುಷ್ಠಾನಗೊಳಿಸಬೇಕಾದ ಕಾರ್ಯಸೂಚಿ ಸಿದ್ಧಗೊಳಿ ಸಲು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸದಸ್ಯರಿಗೆ ಸೂಚಿಸಿದ್ದಾರೆ. ಇದರ ಜತೆಗೆ ಮುಂದಿನ 5 ವರ್ಷಗಳಿಗೆ ಅನ್ವಯವಾಗುವಂತೆ ಕರಡು ಕಾರ್ಯ ಸೂಚಿ ಸಿದ್ಧಪಡಿಸುವಂತೆ ರವಿವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
2024 ಲೋಕಸಭೆ ಚುನಾವಣೆಗಾಗಿ ಕೇಂದ್ರ ಚುನಾವಣ ಆಯೋಗವು ದಿನಾಂಕ ಪ್ರಕಟಿಸಿದ ಮರುದಿನ ರವಿವಾರ ಬೆಳಗ್ಗೆ ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು.
ಸಂಬಂಧಪಟ್ಟ ಸಚಿವಾಲಯಗಳ ಕಾರ್ಯ ದರ್ಶಿಗಳು ಮತ್ತು ಇತರ ಅಧಿಕಾರಿ ಗಳ ಜತೆ ಚರ್ಚಿಸಿ ಹೊಸ ಸರಕಾರದ ಮೊದಲ 100 ದಿನಗಳು ಮತ್ತು 5 ವರ್ಷಗಳ ಅಜೆಂಡಾ ಸಿದ್ಧಪಡಿಸು ವಂತೆ ಸಚಿವರಿಗೆ ಪ್ರಧಾನಿ ಮೋದಿ ಟಾಸ್ಕ್ ನೀಡಿದ್ದಾರೆ ಎನ್ನಲಾಗಿದೆ.
ಮಾ.3ರಂದು ನಡೆದಿದ್ದ ಪೂರ್ಣ ಪ್ರಮಾಣದ ಮಂತ್ರಿ ಪರಿಷತ್ ಸಭೆಯಲ್ಲಿ ಸಭೆ ಯಲ್ಲಿ “ವಿಕಸಿತ ಭಾರತ-2047′ ಹಾಗೂ ಮುಂದಿನ 5 ವರ್ಷಗಳ ಕ್ರಿಯಾ ಯೋಜನೆಗಾಗಿ ತಮ್ಮ ಚಿಂತನೆಗಳನ್ನು ಸಚಿವರು ಹಂಚಿಕೊಂಡಿದ್ದರು.
ಜೂನ್‌ನಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದ ಮೊದಲ 100 ದಿನಗಳಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
“ವಿಕಸಿತ ಭಾರತ-20247′ ಮಾರ್ಗಸೂಚಿಯು 2 ವರ್ಷಗಳ ತೀವ್ರ ಸಿದ್ಧತೆಯ ಫಲಿತಾಂಶವಾಗಿದೆ. ಎಲ್ಲ ಸಚಿವಾಲಯಗಳು, ರಾಜ್ಯ ಸರಕಾರಗಳು, ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ಸಂಸ್ಥೆಗಳು, ನಾಗರಿಕ ಸಮಾಜ, ವೈಜ್ಞಾನಿಕ ಸಂಸ್ಥೆಗಳು, ಯುವಕರೊಂದಿಗೆ ನಡೆಸಿದ ವ್ಯಾಪಕ ಸಮಾಲೋಚನೆಗಳನ್ನು ಇದು ಒಳಗೊಂಡಿದೆ. ಇದಕ್ಕಾಗಿ ವಿವಿಧ ಹಂತಗಳಲ್ಲಿ 2,700ಕ್ಕೂ ಹೆಚ್ಚು ಸಭೆಗಳು, ಕಾರ್ಯಾಗಾರಗಳು ಮತ್ತು ಸೆಮಿನಾರ್‌ಗಳನ್ನು ನಡೆಸಲಾಗಿದೆ. 20 ಲಕ್ಷಕ್ಕೂ ಹೆಚ್ಚು ಯುವಕರಿಂದ ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.