ರಾಯ್ ಪುರ್(ಚತ್ತೀಸ್ ಗಢ): ತಾನು ತಂದೆಯಾಗಬೇಕೆಂಬ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ವಾಮಾಚಾರದ ಮೊರೆ ಹೋಗಿದ್ದ 35 ವರ್ಷದ ವ್ಯಕ್ತಿಯೊಬ್ಬ ಜೀವಂತ ಕೋಳಿ ಮರಿಯನ್ನು ನುಂಗಿ ಉಸಿರುಗಟ್ಟಿ ಕೊನೆಯುಸಿರೆಳೆದಿರುವ ವಿಲಕ್ಷಣ ಘಟನೆ ಚತ್ತೀಸ್ ಗಢದಲ್ಲಿ ನಡೆದಿದೆ.
ಈ ಘಟನೆ ಅಂಬಿಕಾಪುರ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ. ಆದರೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಶಾಕ್ ಗೆ ಒಳಗಾಗಿದ್ದರಂತೆ…ಅದಕ್ಕೆ ಕಾರಣ ವ್ಯಕ್ತಿಯ ಗಂಟಲಲ್ಲಿ ಜೀವಂತ ಕೋಳಿ ಮರಿ ಪತ್ತೆಯಾಗಿರುವುದು!
ಮೃತ ವ್ಯಕ್ತಿಯನ್ನು ಚಿಂಡ್ಕಲೋ ಗ್ರಾಮದ ನಿವಾಸಿ ಆನಂದ್ ಯಾದವ್ ಎಂದು ಗುರುತಿಸಲಾಗಿದೆ. ಜೀವಂತ ಕೋಳಿ ಮರಿ ನುಂಗಿ ಮನೆಯಲ್ಲಿ ಕುಸಿದು ಬಿದ್ದಿದ್ದ ಯಾದವ್ ನನ್ನು ಅಂಬಿಕಾಪುರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದರು. ಈತ ಸ್ನಾನ ಮಾಡಿ ಹೊರಬಂದಾಗ ತಲೆಸುತ್ತು ಬಂದು ಬಿದ್ದಿರುವುದಾಗಿ ಕುಟುಂಬ ಸದಸ್ಯರು ವೈದ್ಯರಿಗೆ ತಿಳಿಸಿದ್ದರು.!
ಈತನ ಪರೀಕ್ಷೆ ನಡೆಸಿದ ವೈದ್ಯರು ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದು, ಶವ ಪರೀಕ್ಷೆ ನಡೆಸಿದಾಗ ವೈದ್ಯರಿಗೆ ಆರಂಭದಲ್ಲಿ ಸಾವಿನ ಕಾರಣ ಸ್ಪಷ್ಟವಾಗಿಲ್ಲವಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವೇಳೆ ಗಂಟಲು ಸೀಳಿದಾಗ ಜೀವಂತ ಕೋಳಿ ಮರಿ ಕಂಡು ಬಂದಿರುವುದಾಗಿ ವರದಿ ವಿವರಿಸಿದೆ.
ಯಾದವ್ ಮರಣೋತ್ತರ ಪರೀಕ್ಷೆ ನಡೆಸಿದ ಡಾ.ಸಂತು ಬಾಗ್ ಅವರ ಹೇಳಿಕೆ ಪ್ರಕಾರ, ಆತನ ಗಂಟಲೊಳಗೆ 20 ಸೆಂಟಿ ಮೀಟರ್ ಉದ್ದದ ಕೋಳಿ ಮರಿ ಸಿಲುಕಿಕೊಂಡಿದ್ದು, ಇದು ಉಸಿರಾಟ ಸಂಚಾರದ ಮತ್ತು ಆಹಾರ ಸರಬರಾಜಾಗುವ ನಡುವೆ ಸಿಲುಕಿಕೊಂಡಿದ್ದರಿಂದ ಉಸಿರುಗಟ್ಟಿ ಸಾವಿಗೀಡಾಗಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ನನ್ನ ಜೀವಮಾನದಲ್ಲಿ ಇಂತಹ ಪ್ರಕರಣ ಮೊದಲ ಬಾರಿ ಎದುರಿಸಿದ್ದೇನೆ. ನಾನು ಈವರೆಗೆ ಸುಮಾರು 15,000ಕ್ಕೂ ಅಧಿಕ ಮರಣೋತ್ತರ ಪರೀಕ್ಷೆ ನಡೆಸಿದ್ದೇನೆ. ಆದರೆ ಇದು ನಮ್ಮೆಲ್ಲರನ್ನೂ ಆಘಾತಕ್ಕೆ ಒಳಗಾಗಿಸಿದೆ ಎಂದು ವೈದ್ಯರಾದ ಬಾಗ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಆನಂದ್ ಯಾವುದೋ ಸ್ಥಳೀಯ ಮಾಂತ್ರಿಕ ಸಲಹೆ ಮೇರೆಗೆ ಮೂಢನಂಬಿಕೆಯಿಂದ ಜೀವಂತ ಕೋಳಿ ಮರಿ ನುಂಗಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.