Advertisement

ಅಂಜೂರ ಹಣ್ಣಿನಿಂದಲೂ ವೈನ್‌ ತಯಾರಿ…ತಯಾರಿಕೆ ಹೇಗೆ?

10:57 AM Dec 08, 2022 | Team Udayavani |

ರಾಯಚೂರು: ಅಂಜೂರ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ಇಲ್ಲಿನ ಕೃಷಿ ವಿವಿಯ ಸಂಸ್ಕರಣಾ ಹಾಗೂ ಆಹಾರ ತಂತ್ರಜ್ಞಾನ ವಿಭಾಗದ ಅಧಿಕಾರಿಗಳು ವೈನ್‌ ತಂತ್ರಜ್ಞಾನ ಆವಿಷ್ಕರಿಸಿದ್ದು, ಪ್ಯಾಕೇಜ್‌ ಆಫ್‌ ಪ್ರ್ಯಾಕ್ಟಿಸ್‌ (ಪಿಒಪಿ) ಬಿಡುಗಡೆ ಮಾಡಲಾಗಿದೆ. ವೈನ್‌ ಬೋರ್ಡ್‌ನಿಂದ ಮಾನ್ಯತೆ ಕೂಡ ಪಡೆದಿದ್ದಾರೆ.

Advertisement

ಸಾಮಾನ್ಯವಾಗಿ ತೋಟಗಾರಿಕೆ ಬೆಳೆಗಾರರಿಗೆ ತಮ್ಮ ಬೆಳೆ ಸಂರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗಿರುತ್ತದೆ. ಹಣ್ಣುಗಳನ್ನು ಹೆಚ್ಚು ದಿನ ಉಳಿಸಲಾಗದು. ಅದರಲ್ಲೂ ಅಂಜೂರ ಬೆಳೆಯ ಜೀವಿತಾವಧಿಯೇ ಮೂರರಿಂದ ನಾಲ್ಕು ದಿನಗಳು ಮಾತ್ರ. ಒಮ್ಮೆ ಹಣ್ಣುಗಳು ಕೊಳೆತು ಹೋದರೆ ಮುಗಿಯಿತು. ಕಷ್ಟಪಟ್ಟು ಬೆಳೆದ ಹಣ್ಣುಗಳನ್ನೆಲ್ಲ ರಸ್ತೆಗೆ ಎಸೆಯದೇ ಬೇರೆ ವಿಧಿಯಿಲ್ಲ. ರೈತರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೃಷಿ ವಿವಿಯ ವಿಜ್ಞಾನಿಗಳು ಕಳೆದ ಒಂದೂವರೆ ವರ್ಷಗಳಿಂದ ಪ್ರಯೋಗ ನಡೆಸಿದ್ದು, ಈಚೆಗೆ ಅಂಜೂರ ಹಣ್ಣಿನಿಂದ ವೈನ್‌ ತಯಾರಿಸುವ ಮಾದರಿ ಕಂಡು ಹಿಡಿದಿದ್ದಾರೆ. ಅಂಜೂರ ವೈನ್‌ ಕೂಡ ಉತ್ತಮ ಸ್ವಾದ ಹೊಂದಿದ್ದು, ಆಸಕ್ತರು ಅಬಕಾರಿ ಇಲಾಖೆಯಿಂದ ಅನುಮತಿ ಪಡೆದು ಕೃಷಿ ವಿವಿಯ ಆವಿಷ್ಕಾರದ ನೆರವಿನೊಂದಿಗೆ ವೈನ್‌ ತಯಾರಿಕೆ ಮಾಡಬಹುದಾಗಿದೆ.

ತಯಾರಿಕೆ ಹೇಗೆ?
ಅಂಜೂರ ವೈನ್‌ ತಯಾರಿಕೆ ಕ್ರಮ ಹಾಗೂ ವೆಚ್ಚ ಕೂಡ ಕಡಿಮೆಯಾಗಿದೆ. ಈ ವೈನ್‌ ತಯಾರಿಸಲು ವರ್ಷಗಟ್ಟಲೇ ಕಾಯಬೇಕಿಲ್ಲ. 25 ದಿನಗಳಲ್ಲೇ ತಯಾರಿಸಬಹುದು. ಒಂದು ಕೆಜಿ ಅಂಜೂರ ಹಣ್ಣಿನಿಂದ ಸುಮಾರು ಒಂದೂವರೆ ಲೀಟರ್‌ ವೈನ್‌ ಉತ್ಪಾದನೆಯಾಗುತ್ತದೆ. ಒಂದು ಲೀಟರ್‌ ಉತ್ಪಾದನೆಗೆ ಅಂದಾಜು 100 ರೂ. ಖರ್ಚಾಗಬಹುದು. ಇದನ್ನು ಮಾರುಕಟ್ಟೆಯಲ್ಲಿ 300-400 ರೂ.ವರೆಗೆ ಮಾರಾಟ ಮಾಡಬಹುದು. ಶೇ.5ಕ್ಕಿಂತ ಹೆಚ್ಚು ಆಲ್ಕೋಹಾಲ್‌ ಅಂಶವಿರುವ ಮದ್ಯ ಉತ್ಪಾದನೆ ಮಾಡಬೇಕಾದರೆ ಅಬಕಾರಿ ಇಲಾಖೆ ಅನುಮತಿ ಕಡ್ಡಾಯವಾಗಿ ಪಡೆಯಬೇಕಿದೆ. ಇಲ್ಲಿ ಉತ್ಪಾದನೆಯಾಗಿರುವ ಅಂಜೂರ ವೈನ್‌ನಲ್ಲಿ ಶೇ.12 ಅಲ್ಕೋಹಾಲ್‌ ಅಂಶ ಕಂಡು ಬಂದಿದೆ. ಹೀಗಾಗಿ ಉತ್ಪಾದಕರು ಅಬಕಾರಿ ಇಲಾಖೆಯಿಂದ ಅನುಮತಿ ಪಡೆದುಕೊಂಡಲ್ಲಿ ಕೃಷಿ ವಿವಿ ಇಂತಿಷ್ಟು ಶುಲ್ಕ ಪಡೆದು ವೈನ್‌ ಉತ್ಪಾದನಾ ಮಾದರಿ ನೀಡಲು ಸಿದ್ಧವಿದೆ.

ಬಾರೆಹಣ್ಣಿನ ವೈನ್‌ ಕೂಡ ತಯಾರಿಸಲಾಗಿತ್ತು
ಕೃಷಿ ವಿವಿಯಲ್ಲಿ ವೈನ್‌ ತಯಾರಿಕೆ ಮಾಡಿರುವುದು ಇದೇ ಮೊದಲಲ್ಲ. ಈ ಮುಂಚೆ ಕೂಡ ಈ ಭಾಗದಲ್ಲಿ ಹೆಚ್ಚಾಗಿ ಸಿಗುವ ಬಾರೆಹಣ್ಣಿನ ವೈನ್‌ ತಯಾರಿಕೆ ತಂತ್ರಜ್ಞಾನ ಆವಿಷ್ಕರಿಸಿದ್ದರು. 2018ರಲ್ಲಿ ಕಂಡು ಹಿಡಿಯಲಾಗಿತ್ತು. ಬಾರೆ ಹಣ್ಣು ಕೂಡ ಬೇಗ ಕೊಳೆತು ಹೋಗುತ್ತದೆ. ವಿನೂತನ ತಂತ್ರಜ್ಞಾನದ ಮೂಲಕ ತಯಾರಿಸಲಾಗಿತ್ತು. ಉಮ್ರಾನ್‌ ಮಾದರಿಯ ಹಣ್ಣುಗಳನ್ನು ಬಳಸಿ ಮಾಡಲಾಗಿತ್ತು.

Advertisement

ಶೇ.12.1 ಆಲ್ಕೊಹಾಲ್‌ ಅಂಶ ಒಳಗೊಂಡಿತ್ತು. ಇದು ಕೂಡ ಪಿಒಪಿ ಬಿಡುಗಡೆ ಮಾಡಲಾಗಿದೆ. ಬಾರೆಹಣ್ಣಿಗೂ ವಾಣಿಜ್ಯೀಕ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಈ ಪ್ರಯೋಗ ಮಾಡಲಾಗಿತ್ತು ಎಂದು ವಿವರಿಸುತ್ತಾರೆ ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನದ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ರಾಮಪ್ಪ ಕೆ.ಟಿ.

ಅಂಜೂರ ಹಣ್ಣಿನಿಂದ ವೈನ್‌ ಉತ್ಪಾದನೆ ಮಾಡುವ ತಂತ್ರಜ್ಞಾನ ಕಂಡು ಹಿಡಿಯಲಾಗಿದೆ. ವೈನ್‌ ಬೋರ್ಡ್‌ನಿಂದಲೂ ಅಂಗೀಕೃತಗೊಂಡಿದ್ದು, ಕೃಷಿ ವಿವಿಯಿಂದ ಪಿಒಪಿ ಕೂಡ ಬಿಡುಗಡೆ ಮಾಡಿದ್ದೇವೆ. ಆದರೆ, ಉತ್ಪಾದನೆ, ಮಾರಾಟಕ್ಕೆ ನಮಗೆ ಅವಕಾಶ ಇರುವುದಿಲ್ಲ. ಹೀಗಾಗಿ ಆಸಕ್ತರು ಅಬಕಾರಿ ಇಲಾಖೆ ಅನುಮತಿ ಪಡೆದಲ್ಲಿ ಅವರಿಗೆ ವೈನ್‌ ಉತ್ಪಾದನಾ ಮಾದರಿ ನೀಡಲಾಗುವುದು.
●ಡಾ| ಉದಯಕುಮಾರ ನಿಡೋಣಿ, ಮುಖ್ಯಸ್ಥರು,
ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನದ ವಿಭಾಗ, ಕೃಷಿ ವಿವಿ ರಾಯಚೂರು

ಅಂಜೂರ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ದೃಷ್ಟಿಯಲ್ಲಿಟ್ಟುಕೊಂಡು ಕಳೆದ ಒಂದೂವರೆ ವರ್ಷದಿಂದ ಪ್ರಯೋಗ ನಡೆಸಿ ವೈನ್‌ ಉತ್ಪಾದನೆ ತಂತ್ರಜ್ಞಾನ ಕಂಡು ಹಿಡಿಯಲಾಗಿದೆ. ಶೇ.12ರಷ್ಟು ಅಲ್ಕೋಹಾಲ್‌ ಅಂಶದ ಸ್ವಾದಿಷ್ಟ ವೈನ್‌ ತಯಾರಿಸಬಹುದು. ರಾಜ್ಯದಲ್ಲಿ ಇದೇ ಮೊದಲ ಪ್ರಯೋಗವಾಗಿದೆ.
●ಸ್ವಪ್ನ ವಿದ್ಯಾಸಾಗರ, ಸಹಾಯಕ ಪ್ರಾಧ್ಯಾಪಕಿ,
ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನದ ವಿಭಾಗ, ಕೃಷಿ ವಿವಿ ರಾಯಚೂರು

ಸಿದ್ದಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next