ಹುಬ್ಬಳ್ಳಿ: ಕೋವಿಡ್ ಸೋಂಕು ತಡೆಯುವ ದಿಸೆಯಲ್ಲ ನೈಋತ್ಯ ರೈಲ್ವೆ ಸಿಬ್ಬಂದಿ 75,000 ಮಾಸ್ಕ್ಗಳು ಹಾಗೂ 10,000 ಲೀಟರ್ ಸ್ಯಾನಿಟೈಸರ್ ಉತ್ಪಾದಿಸಿದ್ದಾರೆ.
ಮಾಸ್ಕ್ ಹಾಗೂ ಸ್ಯಾನಿಟೈಸರ್‌ನ್ನು ರೈಲ್ವೆ ಅಧಿಕಾರಿಗಳು, ಸಿಬ್ಬಂದಿ, ಭದ್ರತಾ ಸಿಬ್ಬಂದಿ ಸುರಕ್ಷತೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ನೈಋತ್ಯ ರೈಲ್ವೆ ಸಿಬ್ಬಂದಿ ಜುಲೈ 5ರವರೆಗೆ 74,918 ಮಾಸ್ಕ್ಗಳನ್ನು ಹಾಗೂ 9937 ಲೀಟರ್ ಸ್ಯಾನಿಟೈಸರ್ ಉತ್ಪಾದಿಸಿದ್ದಾರೆ. ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರು ಸ್ವಯಂ ಪ್ರೇರಿತರಾಗಿ ಕೋವಿಡ್ -19 ನಿರ್ಮೂಲನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಹುಬ್ಬಳ್ಳಿ ವರ್ಕ್‌ಶಾಪ್ ಸಿಬ್ಬಂದಿ 20,035 ಮಾಸ್ಕ್ ಗಳು ಹಾಗೂ 2960 ಲೀಟರ್ ಸ್ಯಾನಿಟೈಸರ್, ಹುಬ್ಬಳ್ಳಿ ವಿಭಾಗ 13, 437 ಮಾಸ್ಕ್ಗಳು ಹಾಗೂ 3990 ಲೀಟರ್ ಸ್ಯಾನಿಟೈಸರ್, ಬೆಂಗಳೂರು ವಿಭಾಗ 28,916 ಮಾಸ್ಕ್ ಗಳು, 1870 ಲೀಟರ್ ಸ್ಯಾನಿಟೈಸರ್, ಮೈಸೂರು ವರ್ಕ್ ಶಾಪ್ ನಲ್ಲಿ 7730 ಮಾಸ್ಕ್ಗಳು ಹಾಗೂ 1085 ಲೀಟರ್ ಸ್ಯಾನಿಟೈಸರ್, ಮೈಸೂರು ಡಿವಿಜನ್ 4800 ಮಾಸ್ಕ್ಗಳು ಹಾಗೂ 32 ಲೀಟರ್ ಸ್ಯಾನಿಟೈಸರ್ ಉತ್ಪಾದಿಸಿವೆ. ಮಾಸ್ಕ್ಗಳನ್ನು ವರ್ಕ್‌ಶಾಪ್‌ನ ಹೊಲಿಗೆ ವಿಭಾಗದಲ್ಲಿ ತಯಾರಿಸಲಾಗಿದೆ. ಹತ್ತಿಯ ಬಟ್ಟೆಯನ್ನು ಬಳಕೆ ಮಾಡಿ ತಯಾರಿಸಲಾಗಿದೆ. ರೈಲ್ವೆ ನಿವೃತ್ತ ಸಿಬ್ಬಂದಿ ಹಾಗೂ ಸಿಬ್ಬಂದಿ ಕುಟುಂಬದ ಸದಸ್ಯರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಕೋವಿಡ್-19 ಸಂದರ್ಭದಲ್ಲಿ ರೈಲ್ವೆಯ ನಿವೃತ್ತ ಸಿಬ್ಬಂದಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದನ್ನು ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಶ್ಲಾಘಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗದರ್ಶನದನ್ವಯ ರೈಲ್ವೆ ವರ್ಕ್‌ಶಾಪ್‌ಗ್ಳು ಸ್ಪಿರಿಟ್, ಅಲೋವೆರಾ ಜೆಲ್, ಗ್ಲಿಸರಾಲ್ ಹಾಗೂ ಸೇಂಟ್ ಬಳಕೆ ಮಾಡಿ ಸ್ಯಾನಿಟೈಸರ್ ಉತ್ಪಾದಿಸಿವೆ. ರೈಲ್ವೆ ಸಿಬ್ಬಂದಿ ಮಾತ್ರವಲ್ಲದೇ ಲೋಡಿಂಗ್ ಹಾಗೂ ಅನ್ ಲೋಡಿಂಗ್ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ಕೂಡ ಮಾಸ್ಕ್ ಹಾಗೂ ಸ್ಯಾನಿಟೈಸರ್ ಒದಗಿಸಲಾಗುತ್ತದೆ.