ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕು ದಿಕ್ಕುಗಳಿಂದ ಬಿಜೆಪಿ ನಡೆಸಲು ಉದ್ದೇಶಿಸಿರುವ ರಥಯಾತ್ರೆಯ ಅಂತಿಮ ರೂಪುರೇಷೆ ಸಿದ್ಧವಾಗಿದೆ. ಫೆಬ್ರವರಿ ಅಂತ್ಯದಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವ ದಲ್ಲಿ ಆರಂಭವಾಗಲಿದೆ ಎಂದು ಮೂಲಗಳು ಹೇಳಿವೆ.
ರಥಯಾತ್ರೆ ಸಿದ್ಧತೆಗೆ ಸಂಬಂಧಪಟ್ಟಂತೆ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಮಹತ್ವದ ಸಭೆ ನಡೆದಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ಕಟೀಲು ಸಹಿತ ಹಿರಿಯ ಮುಖಂಡರು ಭಾಗವಹಿಸಿ ಚರ್ಚಿಸಿದ್ದಾರೆ.
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಬೊಮ್ಮಾಯಿ, ಜನವರಿ ಮತ್ತು ಫೆಬ್ರವರಿಯಲ್ಲಿ ಹಮ್ಮಿ ಕೊಳ್ಳುವ ಕಾರ್ಯಕ್ರಮಗಳು, ಅಧಿವೇಶನದ ಜತೆಗೇ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಫೆಬ್ರವರಿ ಅಂತ್ಯ ದವರೆಗೆ ಜನ ಸಂಕಲ್ಪ ಯಾತ್ರೆ ಮುಂದುವರಿಯ ಲಿದ್ದು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಣಾಳಿಕೆ ಸಿದ್ಧಪಡಿ ಸಲಾಗುವುದು. ರಾಷ್ಟ್ರೀಯ ನಾಯಕರ ಕಾರ್ಯಕ್ರಮ ಆಯೋಜನೆ ಬಗ್ಗೆಯೂ ಚರ್ಚಿಸಲಾಯಿತು ಎಂದರು.
ಶನಿವಾರ ಪ್ರಾರಂಭವಾಗುವ ಬೂತ್ ಮಟ್ಟದ ವಿಜಯಸಂಕಲ್ಪ ಯಾತ್ರೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಾಲ್ಗೊಳ್ಳುವರು. ನಾನು ತುಮಕೂರಿನಲ್ಲಿ ಯಾತ್ರೆಯನ್ನು ಆರಂಭಿಸುತ್ತಿವೆ ಎಂದು ತಿಳಿಸಿದರು.
ರಾಜ್ಯ ಹಾಗೂ ಕೇಂದ್ರ ಸರಕಾರದ ಕಾರ್ಯಕ್ರಮಗಳ ಪಟ್ಟಿಯನ್ನು ಮನೆಮನೆಗೆ ತಲುಪಿಸುವುದು, ತಾಲೂಕು ಮಟ್ಟದ ಸಮ್ಮೇಳನ, ಹಲವು ಮೋರ್ಚಾಗಳ ಜಿಲ್ಲಾ ಮಟ್ಟದ ಸಮಾವೇಶ ಆಯೋಜನೆಗೂ ನಿರ್ಧರಿಸಲಾಗಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ವರಿಷ್ಠರು ನಿರ್ಧರಿಸುವರು. ಚುನಾವಣೆ ತಯಾರಿ, ಪಕ್ಷದ ಸಂಘಟನೆ ಹಾಗೂ ಜನಸಂಪರ್ಕದ ಬಗ್ಗೆ ಪ್ರಾಥಮಿಕ ಹಂತದ ಚರ್ಚೆ ಮಾಡಿದ್ದೇವೆ ಎಂದರು.
ಮೊದಲ ಸಭೆಗೇ ಬಿಎಸ್‌ವೈ ಗೈರು
ಚುನಾವಣ ದೃಷ್ಟಿಯಿಂದ ಆಯೋಜಿಸಿದ್ದ ಬಿಜೆಪಿಯ ಮೊದಲ ಸಭೆಗೆ ಬಿ.ಎಸ್. ಯಡಿಯೂರಪ್ಪ ಗೈರಾದ ಬಿಸಿ ತಟ್ಟಿತು. ಅವರನ್ನು ಆಹ್ವಾನಿಸದಿದ್ದುದು ಪಕ್ಷದ ವಲಯದಲ್ಲಿ ಚರ್ಚೆ ಹುಟ್ಟು ಹಾಕಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಸಿಎಂ ಬೊಮ್ಮಾಯಿ, ಇದು ಪ್ರಾಥಮಿಕ ಹಂತದ ಸಭೆ. ಹೀಗಾಗಿ ಯಡಿಯೂರಪ್ಪ ಅವರು ಬಂದಿಲ್ಲ. ರಥಯಾತ್ರೆಯ ದಿನಾಂಕ ಇತ್ಯಾದಿ ನಿಗದಿಯಾದ ಬಳಿಕ ಯಡಿಯೂರಪ್ಪ ಅವರ ಜತೆಯಾಗಿಯೇ ಯಾತ್ರೆ ನಡೆಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಯಾರು ಉಳಿಯಲಿದ್ದಾರೆ ಎಂಬುದನ್ನು ಅವರು ಗಮನಿಸಲಿ. ಡಿ.ಕೆ. ಶಿವಕುಮಾರ್ ಹತಾಶೆಯಿಂದ ಈ ರೀತಿ (ಹಾವೇರಿಯಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆಬರುತ್ತಾರೆ) ಮಾತನಾಡುತ್ತಿದ್ದಾರೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ