ಬಾಗಲಕೋಟೆ: ವರ್ಷಪೂರ್ತಿ ಕಟ್ಟಪಟ್ಟು ಬೆಳೆದ ಬೆಳೆ ಕೈಗೆ ಬರಲಿಲ್ಲ, ಅಕಾಲಿಕ ಮಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದೆ. ಸರ್ಕಾರ ನಮ್ಮತ್ತ ಕಣ್ತೆರೆದು ನೋಡಲಿ.. ಇದು ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ, ಬಾಗಲಕೋಟೆ ತಾಲೂಕಿನ ವಿವಿಧ ಗ್ರಾಮಗಳ ದ್ರಾಕ್ಷಿ ಬೆಳೆಗಾರರ ಒಕ್ಕೊರಲಿನ ಒತ್ತಾಯ.
ಜಮಖಂಡಿ ತಾಲೂಕಿನ ಗೋಠೆ, ಸಾವಳಗಿ ಭಾಗದಲ್ಲಿ ದ್ರಾಕ್ಷಿ ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿದ್ದು, ಇಲ್ಲಿನ ದ್ರಾಕ್ಷಿ, ವಿಜಯಪುರದ ದ್ರಾಕ್ಷಿ ಬೆಳೆಗಾರರೊಂದಿಗೆ ಕೂಡ ವಿದೇಶಕ್ಕೂ ಕಳುಹಿಸುತ್ತಾರೆ.
ಜಿಲ್ಲೆಯ ಜಮಖಂಡಿ ಭಾಗದಲ್ಲಿ ಕಬ್ಬು ಹೊರತುಪಡಿಸಿದರೆ, ದ್ರಾಕ್ಷಿಯೇ ಪ್ರಮುಖ ವಾಣಿಜ್ಯ ಬೆಳೆ ಕೂಡ. ಆದರೆ, ಕಳೆದ ಎರಡು ದಿನಗಳಿಂದ ಸುರಿದ ಆಲಿಕಲ್ಲು ಮಳೆ, ದ್ರಾಕ್ಷಿ ಬೆಳೆಗಾರರನ್ನು ಸಂಪೂರ್ಣ ಕಂಗಾಲು ಮಾಡಿದೆ.
ಪ್ರಮುಖ ವಾಣಿಜ್ಯ ಬೆಳೆ: ದ್ರಾಕ್ಷಿ ಬೆಳೆಯ ಸಿಸಿ ನೆಡುವಿಕೆಯಿಂದ ಹಿಡಿದು, ಅದರ ಆರೈಕೆ ಬಹಳ ಸೂಕ್ಷ್ಮ. ವರ್ಷಕ್ಕೆ ಒಂದೇ ಬೆಳೆ ಕೈಗೆ ಬಂದರೂ ಅದು, ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಒಣ ಬೇಸಾಯ ಭೂಮಿ ಹೊಂದಿರುವ ರೈತರು, ಕಡಿಮೆ ನೀರಿನಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದಾರೆ. ದ್ರಾಕ್ಷಿಯ ಪ್ರಮುಖ ಗುಣಲಕ್ಷಣವೆಂದರೆ, ಇದು ಬೇಸಿಗೆಯಲ್ಲೇ ಕೈಗೆ ಬರುತ್ತದೆ.
ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಕಟಾವು ಮಾಡಿ, ಮಾರುಕಟ್ಟೆಗೆ ಕಳುಹಿಸುತ್ತಾರೆ. ಮುಖ್ಯವಾಗಿ ದ್ರಾಕ್ಷಿಯನ್ನು ಕಟಾವು ಮಾಡಿ ನೇರವಾಗಿ ಮಾರುಕಟ್ಟೆಗೆ ಕಳುಹಿಸುವ ರೈತರ ಸಂಖ್ಯೆ ಒಂದಟ್ಟು ಇದ್ದರೆ, ಇನ್ನೂ ಹಲವು ರೈತರು, ಅದನ್ನು ಒಣ ದ್ರಾಕ್ಷಿ ಮಾಡುವುದು ರೂಢಿಯಲ್ಲಿದೆ. ಹಸಿ ದ್ರಾಕ್ಷಿ ಮಾರಾಟಕ್ಕಿಂತ, ಒಣ ದ್ರಾಕ್ಷಿ ಮಾಡಿ ಮಾರಾಟ ಮಾಡಿದರೇ ಅತಿಹೆಚ್ಚು ಲಾಭ ಕೂಡ. ಹೀಗಾಗಿ ಒಣ ದ್ರಾಕ್ಷಿ ಉತ್ಪಾದಿಸುವವರ ಸಂಖ್ಯೆ ಹೆಚ್ಚಿದೆ.
ನೆಲಕ್ಕುರುಳಿದ ಕಂಬ-ಗಿಡ: ಒಬ್ಬ ರೈತ, ಒಂದು ಎಕರೆ ದ್ರಾಕ್ಷಿ ನಾಟಿ ಮಾಡಬೇಕಾದರೆ ಕನಿಷ್ಠ 8ರಿಂದ 10 ಲಕ್ಷ ವರೆಗೂ ಖರ್ಚು ಮಾಡಬೇಕಾಗುತ್ತದೆ. ಒಮ್ಮೆ ಇಷ್ಟು ಬಂಡವಾಳ ಹಾಕಿದರೆ ಸಾಕು, ಕನಿಷ್ಠ 15ರಿಂದ 20 ವರ್ಷ ಅದರಿಂದ ವಾರ್ಷಿಕ 5ರಿಂದ 8 ಲಕ್ಷ ಆದಾಯ ತೆಗೆಯಬಹುದು. ಹೀಗಾಗಿ ಇದೊಂದು ಲಾಭದಾಯಕ ಆರ್ಥಿಕ ಬೆಳೆಯಾಗಿದ್ದರೆ, ರೈತರು ಎಷ್ಟೇ ಕಷ್ಟವಾದರೂ ಅದನ್ನು ಬೆಳೆಯುತ್ತಿದ್ದಾರೆ.
ಆದರೆ, ಬಿರುಗಾಳಿ, ಮಳೆ, ಆಲಿಕಲ್ಲು ಮಳೆ ಬಿದ್ದರೆ ಸಾಕು ದ್ರಾಕ್ಷಿ ಬೆಳೆಗೆ ತೀವ್ರ ತೊಂದರೆಯಾಗುತ್ತದೆ. ಕಾರಣ, ಈ ಬೆಳೆ ತಂಡು, ತಂತಿ ಬೇಲಿ ಮೇಲೆಯೇ ನಿಂತಿರುತ್ತದೆ. ಜತೆಗೆ 20 ಅಡಿಗೊಂದು ಕಂಬ ಅಳವಡಿಸಲಾಗುತ್ತಿದ್ದು, ಅವುಗಳು ಬಿರುಗಾಳಿಗೆ ಬಿದ್ದರೆ ಸಾಕು, ಇಡೀ ಒಂದು ಲೈನ್ ದ್ರಾಕ್ಷಿ ಬೆಳೆಯೇ ನೆಲಕ್ಕುರುಳುತ್ತದೆ. ಹಾಗೆ ಉರುಳಿದರೆ ಸಾಕು, ಕನಿಷ್ಠ 50 ಸಾವಿರದಿಂದ 1 ಲಕ್ಷ ವರೆಗೆ ನಷ್ಟವಾದಂತೆ.
ಎರಡು ದಿನಗಳಿಂದ ಗೋಠೆ, ಸಾವಳಗಿ ಭಾಗದಲ್ಲಿ ಸುರಿದ ಮಳೆಯಿಂದ ದ್ರಾಕ್ಷಿ ಬೆಳೆ ಅತಿಹೆಚ್ಚು ಹಾನಿಯಾಗಿದೆ. ಗೋಠೆಯ ಸಂಗಪ್ಪ ಸಂಡಗಿ, ಬೀರಪ್ಪ ಗೋಡ್ಸೆ, ಕಾಶಿನಾಥ ಗಾಡಕರ್, ಬಸಪ್ಪ ಹೂಗಾರ, ದೊರೆಪ್ಪ ಮಸಳಿ, ಲಕ್ಷ್ಮಣ ರಾನಗಟ್ಟಿ ಅವರಿಗೆ ಸೇರಿದ ಸುಮಾರು 50 ಎಕರೆಗೂ ಅಧಿಕ ಎಕರೆ ದ್ರಾಕ್ಷಿ ಬೆಳೆ ನಷ್ಟವಾಗಿದೆ. ನೆಲಕ್ಕುರುಳಿದ ದ್ರಾಕ್ಷಿ ಹಣ್ಣು, ಬೆಳೆ, ಬಿರುಗಾಳಿಗೆ ಕಿತ್ತು ಹೋದ ಒಣ ದ್ರಾಕ್ಷಿ ಉತ್ಪಾದಿಸುವ ಶೆಡ್ ನೋಡಿ ಇವರೆಲ್ಲ ಕಣ್ಣೀರು ಹಾಕುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ. ಸರ್ಕಾರ ನಮಗೆ ಪರಿಹಾರ ನೀಡಬೇಕು. ಪ್ರತಿವರ್ಷ ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆಗಾರರಾದ ನಾವು ತೀವ್ರ ಎದುರಿಸುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಮೊನ್ನೆ ಸುರಿದ ಮಳೆ ಹಾಗೂ ಭೀಕರ ನಮ್ಮ ಭಾಗದಲ್ಲಿ ಒಣದ್ರಾಕ್ಷಿ ಪ್ಲಾಂಟ್‌ಗಳು ನಾಶ ಆಗಿವೆ. ಇದರಿಂದ ಲಕ್ಷಾಂತರ ಮೌಲ್ಯದ ಒಣದ್ರಾಕ್ಷಿ ಹಾಳಾಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕು. –
ರಾಮಣ್ಣ ಬಂಡಿವಡ್ಡರ, ಗೋಠೆ ಗ್ರಾಮದ ದ್ರಾಕ್ಷಿ ಬೆಳೆಗಾರ