ನಟ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 25ನೇ ಚಿತ್ರ “ಪ್ರೇಮಂ ಪೂಜ್ಯಂ’ ತೆರೆಗೆ ಬರೋದಕ್ಕೆ ತಯಾರಿ ಶುರುವಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ “ಪ್ರೇಮಂ ಪೂಜ್ಯಂ’ ತೆರೆಗೆ ಬರಲು ತಯಾರಿ ಮಾಡಿಕೊಂಡಿರುವ ಚಿತ್ರತಂಡ, ಇದೇ ದಸರಾ ಹಬ್ಬದ ಸಂದರ್ಭದಲ್ಲಿ “ಪ್ರೇಮಂ ಪೂಜ್ಯಂ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಮತ್ತಷ್ಟು ವೇಗ ಕೊಟ್ಟಿದೆ.
ಇನ್ನು ಬಿಡುಗಡೆಯಾಗಿರುವ “ಪ್ರೇಮಂ ಪೂಜ್ಯಂ’ ಟ್ರೇಲರ್‌ಗೆ ಸೋಶಿಯಲ್ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಟ ಲವ್ಲಿ ಸ್ಟಾರ್ ಪ್ರೇಮ್ ಲುಕ್, ಚಿತ್ರದ ಛಾಯಾಗ್ರಹಣ, ಹಿನ್ನೆಲೆ ಸಂಗೀತದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ.
“ಪ್ರೇಮಂ ಪೂಜ್ಯಂ’ ಟ್ರೇಲರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡುವ ನಿರ್ದೇಶಕ ಡಾ. ರಾಘವೇಂದ್ರ ಬಿ. ಎಸ್ , “ಮೊದಲಿನಿಂದಲೂ ವಿಭಿನ್ನ ರೀತಿಯಲ್ಲಿ ನಮ್ಮ ಸಿನಿಮಾದ ಪ್ರಮೋಶನ್ಸ್ ಕಾರ್ಯಗಳನ್ನು ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೆವು. ಅದರಂತೆ ಆರಂಭದಲ್ಲಿ ಪೋಸ್ಟರ್, ಟೀಸರ್, ಆನಂತರ ಹಾಡುಗಳನ್ನು ಬಿಡುಗಡೆ ಮಾಡಿದ್ದೆವು. ಅದಕ್ಕೆ ಆಡಿಯನ್ಸ್ ಕಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು.
ಈಗ ದಸರಾ ಹಬ್ಬದ ಸಂದರ್ಭದಲ್ಲಿ ಟ್ರೇಲರ್ ರಿಲೀಸ್ ಮಾಡಿದ್ದೇವೆ. ನಮ್ಮ ನಿರೀಕ್ಷೆಗೂ ಮೀರಿ “ಪ್ರೇಮಂ ಪೂಜ್ಯಂ’ ಟ್ರೇಲರ್‌ಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಆಡಿಯನ್ಸ್ ಕಡೆಯಿಂದ, ಇಂಡಸ್ಟ್ರಿ ಕಡೆಯಿಂದ ಎಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಟ್ರೇಲರ್‌ನಂತೆಯೇ ಸಿನಿಮಾ ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ಇದೆ’ ಎಂದು ವಿಶ್ವಾಸದ ಮಾತುಗಳನ್ನಾಡುತ್ತಾರೆ.
ಚಿತ್ರದ ಹೆಸರೇ ಹೇಳುವಂತೆ, “ಪ್ರೇಮಂ ಪೂಜ್ಯಂ’ ರೊಮ್ಯಾಂಟಿಕ್ ಲವ್ ಸ್ಟೋರಿ ಹೊಂದಿರುವ ಚಿತ್ರ. ಚಿತ್ರದಲ್ಲಿ ಪ್ರೀತಿಯ ಆರಾಧಕನಾಗಿ ಲವ್ಲಿ ಸ್ಟಾರ್ ಪ್ರೇಮ್ ಕಾಣಿಸಿಕೊಂಡರೆ, ನವ ನಾಯಕಿಯಾಗಿ ಬೃಂದಾ ಆಚಾರ್ಯ ಅಭಿನಯಿಸಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರಾಘವೇಂದ್ರ ಬಿ.ಎಸ್ “ಪ್ರೇಮಂ ಪೂಜ್ಯಂ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಸ್ಯಾಂಡಲ್‌ವುಡ್ ಅಂಗಳಕ್ಕೆ ನಿರ್ದೇಶಕನಾಗಿ ಪರಿಚಯವಾಗುತ್ತಿದ್ದಾರೆ. “ಕೆಡಂಬಾಡಿ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ “ಪ್ರೇಮ ಪೂಜ್ಯಂ’ ಚಿತ್ರಕ್ಕೆ ಡಾ. ರಕ್ಷಿತ್ ಕೆಡಂಬಾಡಿ, ಡಾ. ರಾಜಕುಮಾರ್ ಜಾನಕಿರಾಮನ್, ಮನೋಜ್ ಕೃಷ್ಣನ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಮಾಧವ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ.
“ಪ್ರೇಮ ಪೂಜ್ಯಂ’ ಚಿತ್ರದಲ್ಲಿ ಪ್ರೇಮ್, ಬೃಂದಾ ಆಚಾರ್ಯ ಅವರೊಂದಿಗೆ ಐಂದ್ರಿತಾ ರೇ, ಮಾಸ್ಟರ್ ಆನಂದ್, ಸಾಧುಕೋಕಿಲ, ಅವಿನಾಶ್, ಮಾಳವಿಕಾ, ಅನು ಪ್ರಭಾಕರ್ ಹೀಗೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.