ಹುಣಸೂರು: ಲಕ್ಷ್ಮಣತೀರ್ಥ ನದಿಯ ಪ್ರವಾಹ ಸಂತ್ರಸ್ತರಿಗೆ ಶೀಘ್ರ ಮತ್ತು ಪರಿಣಾಮಕಾರಿಯಾಗಿ ನೆರವಾಗಲು ಇಲಾಖಾವಾರು ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲಾ ಸಮಿತಿಯವರು ಸೋಮವಾರ ಸಂಜೆಯೊಳಗೆ ಪರಿಸ್ಥಿತಿಯ ಕುರಿತು ಪ್ರಥಮ ಹಂತದ ವರದಿ ನೀಡಬೇಕೆಂದು ತಹಶೀಲ್ದಾರ್ ಐ.ಇ.ಬಸವರಾಜು ತಾಕೀತು ಮಾಡಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಾದ್ಯಂತ ರಸ್ತೆ ಹಾಳಾಗಿರುವ ಕುರಿತು ಸಮಗ್ರ ಮಾಹಿತಿ ನೀಡಬೇಕು. ಸಣ್ಣ ನೀರಾವರಿ ಇಲಾಖೆ ನಾಲೆಗಳ ಸ್ಥಿತಿಗತಿಗಳ ಕುರಿತು ಮಾಹಿತಿ ಒದಗಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಪರಿಹಾರ ಕೇಂದ್ರಗಳ ಸಮಗ್ರ ನಿರ್ವಹಣೆ, ಸಂತ್ರಸ್ತರನ್ನು ಗುರುತಿಸಿ ಪರಿಹಾರ ಕೇಂದ್ರಕ್ಕೆ ಕರೆತರುವ ಕಾರ್ಯ ನಡೆಸಬೇಕೆಂದರು.
ಮನೆಗಳ ನಷ್ಟದ ವರದಿ ನೀಡಿ: ಜಿಪಂ ಎಇಇ ಕಚೇರಿ ವತಿಯಿಂದ ತಾಲೂಕಾದ್ಯಂತ ನೆರೆಯಿಂದ ಹಾನಿಯಾಗಿರುವ ಮನೆಗಳ ಕುರಿತು ಮಾಹಿತಿ ನೀಡಬೇಕು. ನಗರಸಭೆ ಪೌರಾಯುಕ್ತರು ಹುಣಸೂರು ನಗರದಲ್ಲಿ ಮಳೆಯಿಂದಾಗಿ ಹಾನಿಗೊಳಗಾಗಿರುವ ಮನೆಗಳ ಮಾಹಿತಿ ನೀಡಬೇಕು. ಅಗ್ನಿಶಾಮಕದಳ ಮತ್ತು ಪೊಲೀಸ್ ಇಲಾಖೆ ದಿನದ 24 ಗಂಟೆಯೂ ಕಾರ್ಯಸನ್ನದ್ಧªವಾಗಿರಬೇಕು ಎಂದು ಸೂಚಿಸಿದರು.
ಪಿಡಿಒಗಳಿಂದ ಮಾಹಿತಿ ಪಡೆಯಿರಿ: ಮಳೆಯಿಂದ ಸಂಕಷ್ಟಕ್ಕೊಳಗಾಗಿರುವ ಎಲ್ಲರಿಗೂ ಸಮರ್ಪಕವಾಗಿ ಸವಲತ್ತು ವಿತರಣೆಯಾಗಬೇಕು. ಈ ಹಿನ್ನೆಲೆಯಲ್ಲಿ ಗ್ರಾಪಂ ಪಂಚಾಯಿತಿ ವ್ಯಾಪ್ತಿಯಲ್ಲಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದು, ಯಾವುದೇ ದಾಖಲೆಗಳಿಲ್ಲದೇ ಇದ್ದ ಮನೆಗಳು ಹಾನಿಗೊಳಗಾಗಿದ್ದರೆ ಅಂತಹ ಮನೆಗಳನ್ನು ಆಯಾ ಪಂಚಾಯಿತಿಯ ಪಿಡಿಒ ಮೂಲಕ ದೃಢೀಕರಣಪತ್ರ ದೊರಕಿಸುವ ಮೂಲಕ ಪರಿಹಾರ ಸಿಗುವಂತೆ ಮಾಡಬೇಕು.
ದಾನಿಗಳು ನೀಡುವ ಪರಿಹಾರ ಸಾಮಗ್ರಿಗಳು, ಆಹಾರ ಇನ್ನಿತರ ಪದಾರ್ಥಗಳನ್ನು ಆಹಾರ ಶಿರಸ್ತೇದಾರ್ ನಿರ್ವಹಣೆ ಮಾಡಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ತಾಲೂಕಾದ್ಯಂತ ಬೆಳೆನಷ್ಟ ಕುರಿತಾದ ಸಮೀಕ್ಷೆ ನಡೆಸಿ ವರದಿ ನೀಡಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಅವರಿಗೆ ಸೂಚಿಸಿದರು. ಸಭೆಯಲ್ಲಿ ತಾಪಂ ಇಒ ಗಿರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ನಾಗರಾಜು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಂಗಸ್ವಾಮಿ, ಅಗ್ನಿಶಾಮಕ ಅಧಿಕಾರಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ನೆರೆ ಹಾನಿ ಸ್ಥಳಗಳಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಛತೆ: ನಗರದ ದೇವರಾಜ ಅರಸು ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶಯ್ಯ ನೇತೃತ್ವದಲ್ಲಿ ತಾಲೂಕಿನ ವಿವಿಧ ಕಾಲೇಜುಗಳ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಮತ್ತು ಆರೋಗ್ಯ ಸಿಬ್ಬಂದಿಗಳ ತಂಡ ರಚಿಸಲಾಗಿದೆ. ಇವರೆಲ್ಲರೂ ಒಂದುಗೂಡಿ ಹಾನಿಗೊಳಗಾದ ಗ್ರಾಮಗಳಲ್ಲಿ ಸಂಚರಿಸಿ ಸ್ವಚ್ಛತೆ ಅರಿವು, ಆರೋಗ್ಯ ಶಿಬಿರ ಆಯೋಜನೆ ಮತ್ತು ಅಗತ್ಯವಿದ್ದಲ್ಲಿ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡಸುವಂತೆ ತಿಳಿಸಲಾಯಿತು.
ಹನಗೋಡು ಭಾಗಕ್ಕೆ ಹೆಚ್ಚಿನ ಸಿಬ್ಬಂದಿ: ತಾಲೂಕಿನಲ್ಲಿ ಮಳೆಯಿಂದಾಗಿ ಅತಿಹೆಚ್ಚು ಹಾನಿಗೊಳಗಾಗಿರುವ ಹನಗೋಡು ಹೋಬಳಿಗೆ ಹಾನಿ ಸಮೀಕ್ಷಾ ಕಾರ್ಯಕ್ಕಾಗಿ ಹೆಚ್ಚುವರಿಯಾಗಿ ತಲಾ ಇಬ್ಬರು ರಾಜಸ್ವ ನಿರೀಕ್ಷಕ ಮತ್ತು ಗ್ರಾಮಲೆಕ್ಕಿಗನನ್ನು ನಿಯೋಜಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.