Advertisement

ಧರ್ಮದ ಹೆಸರಿನಲ್ಲಿ  ಹಿಂಸೆ ಸಲ್ಲದು

10:46 AM Dec 08, 2017 | |

ಪುತ್ತೂರು: ಧರ್ಮ, ದೇವರು, ದೇಶಪ್ರೇಮ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವುದು ದುರದೃಷ್ಟಕರ ಸಂಗತಿ. ಅಂತಹ ಮತೀಯ ಅಶಾಂತಿ ಕದಡುವ ಶಕ್ತಿಗಳನ್ನು ಹಿಮ್ಮೆಟ್ಟಿಸುವ ಉದ್ದೇಶದಿಂದ ಡಿ. 12ರಂದು ಪರಂಗಿಪೇಟೆಯಿಂದ ಮಾಣಿ ತನಕ ಸಾಮರಸ್ಯ ನಡಿಗೆ ಸೌಹಾರ್ದ ಕಡೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು. ಪುತ್ತೂರಿನ ಪ್ರವಾಸಿ ಮಂದಿರದ ಬಳಿ ನಡೆದ ಸಾಮರಸ್ಯ ನಡಿಗೆ, ಸೌಹಾರ್ದ ಕಡೆಗೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 

Advertisement

ಈ ದೇಶಕ್ಕೆ ಸ್ವಾತಂತ್ರ್ಯ ದೊರೆಯುವುದರ ಹಿಂದೆ ಎಲ್ಲ ಜಾತಿ, ಧರ್ಮದವರ ಪಾಲ್ಗೊಳ್ಳುವಿಕೆ ಇದೆ. ನಮ್ಮದು ಬರೀ ಸ್ವಾತಂತ್ರ್ಯ ಚಳವಳಿ ಅಲ್ಲ. ಅದೊಂದು ಜಾತ್ಯತೀತ ಸ್ವಾತಂತ್ರ್ಯ ಚಳವಳಿ. ಅಂತಹ ಸಾಮರಸ್ಯದ ನಾಡಿನ ಸೌಹಾರ್ದವನ್ನು ಉಳಿಸುವ ನಿಟ್ಟಿನಲ್ಲಿ ಪಕ್ಷಭೇದ ಮರೆತು ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಮುನೀರ್‌ ಕಾಟಿಪಳ್ಳ ಮಾತನಾಡಿ, ತುಳುನಾಡು ಅನೇಕ ಮಹಾತ್ಮರ ಆದರ್ಶಗಳನ್ನು, ಸಾಮರಸ್ಯದ ಸಂದೇಶವನ್ನು ಸಾರಿದೆ. ಈ ನಾಡಿನಲ್ಲಿ ಧರ್ಮ, ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ, ಅದರ ಲಾಭ ಬಯಸುವ ಪ್ರಯತ್ನ ಸಾಗಿದೆ. ಪ್ರಜ್ಞಾವಂತ ನಾಗರಿಕರು ಇದರ ವಿರುದ್ಧ ಧ್ವನಿ ಎತ್ತದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅವರು ಹೇಳಿದರು.

ಸಾಮರಸ್ಯ ಸ್ಥಾಪಿಸುವ
ಧರ್ಮದ ಹೆಸರಿನಲ್ಲಿ ಸಂಘಟನೆಗಳನ್ನು ಸ್ಥಾಪಿಸಿ ಸ್ವಾರ್ಥಕ್ಕಾಗಿ ಅಮಾಯಕರನ್ನು ಬಲಿ ತೆಗೆದುಕೊಳ್ಳುವ ವ್ಯವ ಸ್ಥಿತ ಪಿತೂರಿ ಸಮಾಜದ ಅಶಾಂತಿಗೆ ಕಾರಣವಾಗಿದೆ. ಮತೀಯ ವಿಚಾರದಲ್ಲಿ ಸಮಾಜ ದ್ರೋಹಿ ಕೆಲಸ ಮಾಡುವವರ ವಿರುದ್ಧ ಈ ಜಾಥಾ ಸಾಗಿ, ಸಾಮರಸ್ಯವನ್ನು ಪುನರ್‌ ಸ್ಥಾಪಿಸುವ ಬಹುದೊಡ್ಡ ಹೆಜ್ಜೆಯಾಗಲಿ ಎಂದು ಅವರು ಹೇಳಿದರು.

ಶಾಸಕಿ ಶಕುಂತಳಾ ಟಿ. ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಭರತ್‌ ಮುಂಡೋಡಿ, ಸಿಪಿಎಂ ಮುಖಂಡ ಸತೀಶನ್‌, ಧರ್ಮಗುರು ಎಸ್‌.ಬಿ. ದಾರಿಮಿ, ಹುಸೈನ್‌ ರೆಂಜಿಲಾಡಿ, ಅಹಮ್ಮದ್‌ ಹಾಜಿ, ಕೆಪಿಸಿಸಿ ಸದಸ್ಯ ಡಾ| ರಘು, ಮಹಮ್ಮದ್‌ ಸಖಾಫಿ ಉಸ್ತಾದ್‌, ಜಿ.ಪಂ. ಸದಸ್ಯ ಎಂ.ಎಸ್‌. ಮಹಮ್ಮದ್‌, ವಿಟ್ಲ  – ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುರಳೀಧರ ರೈ, ಮಾಜಿ ಅಧ್ಯಕ್ಷ ಪ್ರವೀಣ ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಪ್ರ. ಕಾರ್ಯ ದರ್ಶಿ ಮಹೇಶ್‌ ರೈ ಅಂಕೊತ್ತಿಮಾರ್‌, ವೇದನಾಥ ಸುವರ್ಣ, ಉಲ್ಲಾಸ್‌ ಕೋಟ್ಯಾನ್‌, ತಾ.ಪಂ. ಸದಸ್ಯೆ ಉಷಾ ಅಂಚನ್‌, ನಗರಸಭಾ ಸದಸ್ಯರಾದ ಜೊಹರಾ ನಿಸಾರ್‌, ಸ್ವರ್ಣಲತಾ ಹೆಗ್ಡೆ, ರೋಶನ್‌ ರೈ, ಶ್ರೀರಾಮ ಪಕ್ಕಳ ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು ನಿರೂಪಿಸಿದರು.

Advertisement

ಕೈಜೋಡಿಸಲು ಕರೆ 
ಮನುಷ್ಯ-ಮನುಷ್ಯನ ಮಧ್ಯೆ ಅಪನಂಬಿಕೆ, ಅವಿಶ್ವಾಸ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಮತೀಯವಾದಿಗಳು. ಸಮಾಜ ಅಂತಹವರ ವಿರುದ್ಧ ಪ್ರತಿಭಟಿಸಲೇಬೇಕು ಎಂದ ಸಚಿವ ರೈ, ಕಾಲ್ನಡಿಗೆ ಜಾಥಾದಲ್ಲಿ ಹತ್ಯೆಯಲ್ಲಿ ಭಾಗಿಯಾದ ಸಂಘಟನೆಗಳನ್ನು ಹೊರತುಪಡಿಸಿ ಉಳಿದವರೆಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next