Advertisement

ಗರ್ಭಿಣಿಯರು-ಮಕ್ಕಳಿಗೆ ಕೊಳೆತ ಮೊಟ್ಟೆಯೇ ಪೌಷ್ಟಿಕ ಆಹಾರ!

02:41 PM Oct 08, 2018 | |

ಸಿಂಧನೂರು: ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ಮಾತೃಪೂರ್ಣ ಯೋಜನೆಯಡಿ ಮೊಟ್ಟೆ ನೀಡಲಾಗುತ್ತಿದೆ. ಆದರೆ ತಾಲೂಕಿನ ಕೆಲ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆಗಳನ್ನು ಪೂರೈಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

Advertisement

ಸಿಂಧನೂರು ತಾಲೂಕಿನ ಶ್ರೀಪುರಂ ಜಂಕ್ಷನ್‌ನಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಪೂರೈಸಿದ ಕೆಲ ಮೊಟ್ಟೆಗಳಲ್ಲಿ ಮರಿಗಳು ಬಂದಿದ್ದರೆ, ಮತ್ತೆ ಕೆಲವು ಕೊಳೆತಿವೆ. ಫಲಾನುಭವಿ ಗರ್ಭಿಣಿಯೊಬ್ಬರಿಗೆ ಕೊಟ್ಟ ಎಲ್ಲ ಮೊಟ್ಟೆಗಳು ಕೆಟ್ಟಿದ್ದವು ಎಂದು ತಿಳಿದು ಬಂದಿದೆ. ಹೀಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ನೀಡುವ ಮೊಟ್ಟೆ ತಿನ್ನಲು ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಿಂದೇಟು ಹಾಕುತ್ತಿದ್ದು, ಸರ್ಕಾರದ ಮಹತ್ವಾಕಾಂಕ್ಷಿ ಮಾತೃಪೂರ್ಣ ಯೋಜನೆ ಹಳ್ಳ ಹಿಡಿದಿದೆ.

ಪ್ರತಿ ಮೊಟ್ಟೆಗೆ 5 ರೂ.: ಅಂಗನವಾಡಿಗಳಿಗೆ ಮೊಟ್ಟೆ ಪೂರೈಕೆಗೆ ಅಧಿಕೃತ ಏಜೆನ್ಸಿಗೆ ವಹಿಸಲಾಗಿತ್ತು. ಆದರೆ ಅದು ಯಶಸ್ಸು ಕಾಣಲಿಲ್ಲ. ಹೀಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೇ ಅಂಗನವಾಡಿಗಳಿಗೆ ಮೊಟ್ಟೆ ಪೂರೈಕೆಗೆ ಮುಂದಾಗಿತ್ತು. ಇದು ಕೂಡ ಸಾಫಲ್ಯ ಕಾಣದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮೊಟ್ಟೆ ಖರೀದಿ ಹೊಣೆಯನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗಿದೆ.

ಪ್ರತಿ ಮೊಟ್ಟೆಗೆ 5 ರೂ.ಗಳಂತೆ ಅವರ ಖಾತೆಗೆ ಹಣ ಸಂದಾಯ ಮಾಡಲಾಗುತ್ತಿದೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಗುಣಮಟ್ಟದ ಮೊಟ್ಟೆಗಳನ್ನು ಖರೀದಿಸದೇ ಕೊಳೆತ ಮೊಟ್ಟೆಗಳನ್ನು ಖರೀದಿಸಿ ಮಕ್ಕಳು ಮತ್ತು ಗರ್ಭಿಣಿಯರು, ಬಾಣಂತಿಯರಿಗೆ ನೀಗಿರುವ ಆರೋಗ್ಯವನ್ನು ಹಾಳು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಜೆಡಿಎಸ್‌ ಮುಖಂಡನಿಂದ ವಿತರಣೆ: ಸ್ಥಳೀಯವಾಗಿ ಗುಣಮಟ್ಟದ ಮೊಟ್ಟೆ ಖರೀದಿಮಾಡಲು ಅಂಗನವಾಡಿ ಕಾರ್ಯಕರ್ತೆಯರ ಖಾತೆಗೆ ಹಣ ಸಂದಾಯ ಮಾಡಲಾಗುತ್ತಿದೆ. ಆದರೆ ತಾಲೂಕಿನಲ್ಲಿರುವ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಪುಡಿಗಾಸಿನ ಆಸೆಗಾಗಿ ಒಂದೇ ಕಡೆ ಮೊಟ್ಟೆಗಳನ್ನು ಖರೀದಿ ಮಾಡುತ್ತಿದ್ದಾರೆ.

Advertisement

ಜೆಡಿಎಸ್‌ ಯುವ ಮುಖಂಡರೊಬ್ಬರು ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಸರಬರಾಜು ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಮೊಟ್ಟೆ ಗುಣಮಟ್ಟದ ಬಗ್ಗೆ ಒಂದು ವೇಳೆ ಅಂಗನವಾಡಿ ಕಾರ್ಯಕರ್ತೆಯರು ಪ್ರಶ್ನಿಸಿದರೆ ಸಚಿವರಿಂದ
ಫೋನ್‌ ಮಾಡಿಸುತ್ತಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ನಿರ್ಲಕ್ಷ್ಯ: ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಗುಣಮಟ್ಟದ ಮೊಟ್ಟೆಗಳನ್ನು ನೀಡಲಾಗುತ್ತಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಉದಾಹರಣೆಗಳಿಲ್ಲ. ಹೀಗಾಗಿ ಅವರು ಕೂಡ ಈ ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎನ್ನುವ ಆರೋಪಗಳು ಸಹ ಕೇಳಿ ಬಂದಿವೆ.

ಸರ್ಕಾರದ ಮಹತ್ವಾಕಾಂಕ್ಷಿ ಮಾತೃಪೂರ್ಣ ಯೋಜನೆಯಡಿ ಗೋಲ್‌ಮಾಲ್‌ ನಡೆದಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆಯಾಗಬೇಕಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಣಮಟ್ಟದ ಮೊಟ್ಟೆ ಪೂರೈಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next