Advertisement

ಸಂತಾನ ಸೌಭಾಗ್ಯ; ಬಂಜೆತನ ನಿವಾರಣೆ

06:15 AM Sep 17, 2017 | |

ನನ್ನ ಪತಿಗೆ ಮತ್ತು ನನಗೆ 35 ರ ಆಸುಪಾಸಿನ ವಯಸ್ಸು, ಸುಮಾರು ಒಂದು ವರ್ಷದಿಂದ ನಾವು ಮಗುವನ್ನು ಪಡೆಯಲು ಪ್ರಯತ್ನಿಸುತ್ತಾ ಇದ್ದೇವೆ. ನಾವು ಈಗ ಒಬ್ಬ ಫ‌ರ್ಟಿಲಿಟಿ ವೈದ್ಯರನ್ನು ಭೇಟಿ ಮಾಡಬೇಕೆ?

Advertisement

ಹೌದು. ಒಂದು ವರ್ಷದವರೆಗೆ ಅಸುರಕ್ಷಿತ ಲೈಂಗಿಕಕ್ರಿಯೆ ನಡೆಸಿದ ಬಳಿಕವೂ ಗರ್ಭಧಾರಣೆ ಆಗದೆ ಇರುವುದನ್ನು ಬಂಜೆತನ ಎಂದು ಹೇಳುತ್ತೇವಾದರೂ, ಮಹಿಳೆಗೆ 35 ವರ್ಷ ಮೀರಿದ್ದು, 6 ತಿಂಗಳ ಪ್ರಯತ್ನದ ನಂತರ ಗರ್ಭಧಾರಣೆ ಸಾಧ್ಯ ಆಗದಿದ್ದರೆ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬ ಸಲಹೆಯನ್ನು ನೀಡಲಾಗುತ್ತದೆ. ಮಹಿಳೆಗೆ ಅನಿಯಮಿತ ಮಾಸಿಕ ಸ್ರಾವ ಮತ್ತು/ಅಥವಾ ಪೆಲ್ವಿಕ್‌ ನೋವು, ಪುರುಷನಿಗೆ ಲೈಂಗಿಕ ನಿರ್ವಹಣೆಯ ಸಮಸ್ಯೆ ಇದ್ದರೆ ಮತ್ತು ದಂಪತಿಗಳು ತಮಗೆ ಮಕ್ಕಳಾಗಿಲ್ಲ ಎಂಬ ವಿಚಾರದಲ್ಲಿ ಒತ್ತಡಕ್ಕೆ ಒಳಗಾಗಿದ್ದರೆ ಅಂತಹವರು ಒಂದು ವರ್ಷಕ್ಕೆ ಮೊದಲೇ ವೈದ್ಯರ ಹತ್ತಿರ ಪರೀಕ್ಷೆ ಮಾಡಿಸಿಕೊಳ್ಳಬೇಕು.  

ನಾನು ವಿವಾಹಿತ ಮಹಿಳೆ, ನನ್ನ ವಯಸ್ಸು  25 ವರ್ಷ. ನನಗೆ ಅನಿಯಮಿತ ಮಾಸಿಕ ಸ್ರಾವದ ಸಮಸ್ಯೆ ಇದೆ. ಇದರಿಂದ ನನಗೆ ಗರ್ಭಧಾರಣೆ ಆಗಲು ತೊಂದರೆ ಆಗುವುದೇ?   
       ಅನಿಯಮಿತ ಮಾಸಿಕ ಸ್ರಾವದ ಸಮಸ್ಯೆ ಇರುವ ಮಹಿಳೆಯರಿಗೂ ಸಹ ಸ್ವಾಭಾವಿಕ ರೀತಿಯಲ್ಲಿ ಗರ್ಭಧಾರಣೆ ಆಗುವ ಸಾಧ್ಯತೆ ಇದೆ. ಆದರೆ ಮಹಿಳೆಯಲ್ಲಿ ಪದೇ ಪದೇ ಮತ್ತು ಅಕಾಲಿಕ ಸ್ರಾವ ಆಗುತ್ತಿದ್ದರೆ ಆಗ ಗರ್ಭಧಾರಣೆ ಅಷ್ಟು ಸುಲಭ ಸಾಧ್ಯವಾಗದು. ಇಂತಹ ಸಂದರ್ಭದಲ್ಲಿ ಹಿನ್ನೆಲೆಯ ಯಾವುದಾದರೂ ಕಾರಣದಿಂದ ಅನಿಯಮಿತ ಮಾಸಿಕಸ್ರಾವ ಆಗುತ್ತಿದೆಯೇ ಎಂದು ಕಂಡುಹಿಡಿದು ಅದಕ್ಕೆ ಚಿಕಿತ್ಸೆ ನೀಡಬೇಕಾಗುವುದು.  ಥೈರಾಯ್ಡ ಗ್ರಂಥಿಯ ಚಟುವಟಿಕೆಯ ಅಸಹಜತೆ ಅಥವಾ ಪ್ರೊಲ್ಯಾಕ್ಟಿನ್‌ ಮಟ್ಟದಲ್ಲಿ ಏರಿಕೆಯಾಗುವಂತಹ ತೊಂದರೆಗಳಿವೆಯೇ, ಚಿಕಿತ್ಸೆಯ ಅಗತ್ಯವಿದೆಯೇ ಎಂದು ತಿಳಿಯಲು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಹಿಳೆಗೆ ಪಾಲಿಸಿಸ್ಟಿಕ್‌ ಓವರಿ ಕಾಯಿಲೆ ಇದ್ದಲ್ಲಿ, ಮಧುಮೇಹ ಕಾಣಿಸಿಕೊಳ್ಳಲು ಮತ್ತು ಅವರ ಅನಿಯಮಿತ ಮಾಸಿಕ ಸ್ರಾವಕ್ಕೆ ಇದೂ ಒಂದು ಕಾರಣ ಆಗಿರಬಹುದು. ಒಂದುವೇಳೆ ಎಲ್ಲಾ ಪರೀಕ್ಷೆಗಳ ಫ‌ಲಿತಾಂಶಗಳು ಸಹಜವಾಗಿವೆ ಎಂದು ಕಂಡುಬಂದರೆ, ಈಗಾಗಲೇ ಇರುವ ಅನಿಯಮಿತ ಮಾಸಿಕ ಚಕ್ರದ ತೊಂದರೆಯನ್ನು ಸರಿಪಡಿಸಲು ವೈದ್ಯರು ನಿಮಗೆ ಕೆಲವು ಔಷಧಿ ಚಿಕಿತ್ಸೆಯನ್ನು ಆರಂಭಿಸುತ್ತಾರೆ. 

ನನಗೆ 31 ವರ್ಷ ವಯಸ್ಸು , ನನ್ನ ಗಂಡನಿಗೆ 34 ವರ್ಷ. ನಾವು ಮಗುವನ್ನು ಪಡೆಯಲು ಸುಮಾರು ಎರಡು ವರ್ಷದಿಂದ ಪ್ರಯತ್ನಿಸುತ್ತಾ ಇದ್ದೇವೆ. ಈಗಾಗಲೇ ಅನೇಕ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದೇವೆ ಮತ್ತು ಇದುವರೆಗೂ ಎಲ್ಲಾ ಪರೀಕ್ಷೆಯ ಫ‌ಲಿತಾಂಶಗಳು ಸಹಜವಾಗಿವೆ. ಸಹಜ ಗರ್ಭಧಾರಣೆ ಆಗಲು ನಾವು ಇನ್ನೂ ಎಷ್ಟು  ವರ್ಷ ಪ್ರಯತ್ನಿಸಬೇಕು? 
      ಚಿಕಿತ್ಸೆಯ ಆರಂಭಕ್ಕೆ ಇದು ಸಕಾಲ. ಫ‌ರ್ಟಿಲಿಟಿ ಕ್ಲಿನಿಕ್‌ನಲ್ಲಿ ಕೆಲವು ಔಷಧಿ ಮತ್ತು ಸರಳ ಚಿಕಿತ್ಸಾ ಪ್ರಕ್ರಿಯೆಗಳು ಇರುತ್ತವೆ. ಇದರ ಜೊತೆಗೆ ಇಂಟ್ರಾಯುಟೇರಿಯನ್‌ ಇನ್‌ ಸೆಮಿನೇಷನ್‌ (ನಿಮ್ಮ ಪತಿಯ ಶುದ್ಧೀಕರಿಸಿದ ವೀರ್ಯಾಣುವನ್ನು ನಿಮ್ಮ ಗರ್ಭಾಶಯದಲ್ಲಿ ಇರಿಸುವುದು) ಎಂಬ ಸಣ್ಣ ಪ್ರಕ್ರಿಯೆಯನ್ನೂ ಸಹ ನಡೆಸುತ್ತಾರೆ. ನಿಮ್ಮ ಗರ್ಭಾಶಯವು ಸಹಜವಾಗಿದ್ದರೆ, ನಾಳಗಳು ಸಹಜವಾಗಿದ್ದರೆ ಮತ್ತು ವೀರ್ಯ ವಿಶ್ಲೇಷಣೆಯಲ್ಲಿ ನಿಮ್ಮ ಪತಿಯ ವೀರ್ಯಾಣುಗಳ ಗುಣಮಟ್ಟವು ಉತ್ತಮವಾಗಿದ್ದರೆ ಮಾತ್ರವೇ ಇಂಟ್ರಾಯುಟೇರಿಯನ್‌ ಇನ್‌ ಸೆಮಿನೇಷನ್‌ ಎಂಬ ಪ್ರಕ್ರಿಯೆಯನ್ನು ನಡೆಸಲು ಸಾಧ್ಯವಾಗುತ್ತದೆ. ಈ ಚಿಕಿತ್ಸೆಯನ್ನು ನಡೆಸದಿದ್ದರೆ, ಪ್ರತೀ ಚಕ್ರದಲ್ಲಿ ನೀವು ಗರ್ಭಧರಿಸುವ ಸಾಧ್ಯತೆಯು ಸುಮಾರು 12%ನಷ್ಟು ಇರಬಹುದು, ಈಗಲೂ ನೀವು ಗರ್ಭಧರಿಸುವ ಸಾಧ್ಯತೆ ಇದೆ, ಆದರೆ ಖಂಡಿತವಾಗಿಯೂ ಅದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು. ಅದೃಷ್ಟವಶಾತ್‌, ನಿಮಗೀಗ 31 ವಯಸ್ಸು, ಗರ್ಭಧಾರಣೆಯ ವಯಸ್ಸಿನ ಪ್ರಮಾಣಕ ತುಲನೆಯಲ್ಲಿ ನೀವಿನ್ನೂ ಗರ್ಭಧರಿಸುವ ಸಾಧ್ಯತೆ ಇದೆ ಮತ್ತು ನಿಮಗೆ ಇನ್ನೂ ವಯಸ್ಸಿದೆ. 

ನಾನು 5 ವರ್ಷಕ್ಕೂ ಹೆಚ್ಚು ಸಮಯದಿಂದ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿ ದ್ದೇನೆ. ಇದೀಗ ನಾನು ಗರ್ಭಿಣೆ ಆಗಬೇಕೆಂದಿದ್ದೇನೆ. ಆದರೆ ನಾನು ಇಷ್ಟು ಸಮಯದಿಂದ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದುದರಿಂದ ಅದು ನನ್ನ ಗರ್ಭಧಾರಣೆಗೆ ಅಡ್ಡಿಪಡಿಸಬಹುದೇ ಎಂಬುದು ನನ್ನ ಆತಂಕ? 
     ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಬಂಜೆತನ ಉಂಟಾಗುವುದಿಲ್ಲ. ಗರ್ಭನಿರೋಧಕ ಮಾತ್ರೆಗಳನ್ನು ನಿಲ್ಲಿಸಿದ ನಂತರ ಫ‌ಲವಂತಿಕೆ ಅಥವಾ ಫ‌ರ್ಟಿಲಿಟಿಯನ್ನು ಮತ್ತೆ ಸಂಪೂರ್ಣವಾಗಿ ಗಳಿಸಬಹುದು.  

Advertisement

ನಾನು 28 ವರ್ಷದ ಮಹಿಳೆ, ಮದುವೆಯಾಗಿ ನಾಲ್ಕು ವರ್ಷವಾಯಿತು. ಆದರೆ ಮಕ್ಕಳಾಗಿಲ್ಲ. ಸಮಸ್ಯೆ ನನ್ನಲ್ಲಿದೆಯೇ ಅಥವಾ ನನ್ನ ಗಂಡನಲ್ಲಿ ಇದೆಯೇ ಎಂಬುದು ನನಗೆ ತಿಳಿದಿಲ್ಲ. ಕ್ಲಿನಿಕ್‌ನಲ್ಲಿ ಬಂಜೆತನಕ್ಕೆ ಕಾರಣ ಏನು ಎಂಬುದನ್ನು ಹೇಗೆ ಕಂಡುಹಿಡಿಯುತ್ತಾರೆ? ನಾನು ಮತ್ತು ನನ್ನ ಗಂಡ ಜೊತೆಯಾಗಿ  ಚೆಕ್‌ಅಪ್‌ಗೆ ಬರಬೇಕೆ? 
    ಒಂದು ಸಂಪೂರ್ಣ ವೈದ್ಯಕೀಯ ಪರೀಕ್ಷೆಯು ಬಂಜೆತನಕ್ಕೆ ಕಾರಣವಾಗಿರಬಹುದಾದ ಪ್ರಮುಖ ಅಂಶವನ್ನು ಗುರುತಿಸುತ್ತದೆ. ನಿಯಮಿತವಾದ ಮತ್ತು ಸಕಾಲಿಕ‌ ಮಾಸಿಕ ಸ್ರಾವವನ್ನು ಹೊಂದಿರುವುದು ಮಹಿಳೆಯಲ್ಲಿ ಸರಿಯಾಗಿ ಅಂಡಾಣು ಬಿಡುಗಡೆ ಆಗುತ್ತಿರುವುದಕ್ಕೆ ಉತ್ತಮ ಪುರಾವೆ ಎಂದು ಹೇಳಬಹುದು. ವೀರ್ಯಾಣುಗಳಿಗೆ ಸಂಬಂಧಿಸಿದ ವಿಶ್ಲೇಷಣಾ ಪರೀಕ್ಷೆಗಳು, ವೀರ್ಯಾಣುಗಳ ಸಂಖ್ಯೆ, ಚಲನೆ ಮತು ಸಂರಚನೆ ಇತ್ಯಾದಿ ಅಂಶಗಳ ವಿವರಗಳನ್ನು ಒದಗಿಸುತ್ತವೆ ಮತ್ತು ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಿರಬಹುದಾದ ಸಮಸ್ಯೆಗಳನ್ನು ಬಹಿರಂಗಪಡಿಸುತ್ತವೆ. ಹಿಸ್ಟೆರೋಸಾಲ್ಪಿಂಜೋಗ್ರಾಂ (ಎಕ್ಸರೇ ಮೂಲಕ ಗರ್ಭನಾಳ ಪರೀಕ್ಷೆ)ಪರೀಕ್ಷೆಯ ಮೂಲಕ ಗರ್ಭಾಶಯ ಮತ್ತು ಫೆಲೋಪಿಯನ್‌ ನಾಳದ ಪರಿಸ್ಥಿತಿಯನ್ನು ಪರೀಕ್ಷೆ ಮಾಡುತ್ತಾರೆ. ಹಿಸ್ಟೆರೋಸ್ಕೋಪಿ ಅಥವಾ ಲ್ಯಾಪರೋಸ್ಕೋಪಿ, ಹಾರ್ಮೋನ್‌ ಮಟ್ಟದ ಪರೀಕ್ಷೆ ಇತ್ಯಾದಿ ಹೆಚ್ಚುವರಿ ಪರೀಕ್ಷೆಗಳನ್ನು ಸೂಚಿಸಬಹುದು.  ಗರ್ಭಾಶಯ ಮತ್ತು ಪೆಲ್ವಿಸ್‌ನಲ್ಲಿನ ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡಲು ಮತ್ತು ಚಿಕಿತ್ಸೆ ನೀಡಲು ಕ್ರಮವಾಗಿ ಹಿಸ್ಟೆರೋಸ್ಕೋಪಿ ಮತ್ತು ಲ್ಯಾಪರೋಸ್ಕೋಪಿ ಪ್ರಕ್ರಿಯೆಗಳನ್ನು ನಡೆಸುತ್ತಾರೆ. ಇಲ್ಲಿ ತೆಳುವಾದ ಆಪ್ಟಿಕ್‌ ಸ್ಕೋಪ್‌ ಅನ್ನು ಬಳಸುತ್ತಾರೆ. ಸಂತಾನೋತ್ಪತ್ತಿ ವ್ಯೂಹದ ಈ ಭಾಗದ ರೋಗ ಪರಿಸ್ಥಿತಿಗಳು ಅಂದರೆ ಅಂಡಾಶಯಗಳಲ್ಲಿನ ಪಾಲಿಪ್ಸ್‌, ನಾರುಗೆಡ್ಡೆಗಳು (ಫೈಬ್ರಾಯ್ಡ್ಸ್), ನೀರುಳ್ಳೆಗಳು (ಸಿಸ್ಟ್‌) ಮತ್ತು ಎಂಡೊಮೆಟ್ರಿಯೋಸಿಸ್‌. ಗುರುತಿಸಲಾದ ನಿರ್ದಿಷ್ಟ ರೋಗಪರಿಸ್ಥಿತಿಗೆ ಚಿಕಿತ್ಸೆ ನೀಡುವ ಬಗ್ಗೆ ದಂಪತಿಗಳೊಂದಿಗೆ ವೈದ್ಯರು ಚರ್ಚಿಸುತ್ತಾರೆ. ಈ ಚಿಕಿತ್ಸಾ ಆಯ್ಕೆಗಳಲ್ಲಿ ಫ‌ಲವಂತಿಕೆಯ ಔಷಧಿಗಳು, ಕೃತಕ ವೀರ್ಯಸೇಚನೆ (ಇನ್‌ಸೆಮಿನೇಷನ್‌), ಕಡಿಮೆ ಛೇದನಕಾರಿ ಶಸ್ತ್ರಚಿಕಿತ್ಸೆ ಅಥವಾ ಇನ್‌ ವಿಟ್ರೋಫ‌ರ್ಟಿಲೈಸೇಷನ್‌ ಐವಿಎಫ್-ಪ್ರನಾಳ ಶಿಶುಗಳು ಸೇರಿರಬಹುದು. ಐವಿಎಫ್-ಪ್ರನಾಳ ಶಿಶುವಿನಲ್ಲಿಯೂ ದಾನಿ ವೀರ್ಯಾಣು (ಡೋನರ್‌ ಸ್ಪರ್ಮ್), ದಾನಿ ಅಂಡಾಣು (ಡೋನರ್‌ ಎಗ್‌)ಮತ್ತು ಸರೋಗೆಸಿ ಇತ್ಯಾದಿ ಬೇರೆ ಬೇರೆ ವೈಶಿಷ್ಟ್ಯಗಳಿವೆ. ತಜ್ಞರು ಸಮಸ್ಯೆಯನ್ನು ಗುರುತಿಸುವುದಕ್ಕಾಗಿ ಮತ್ತು ಸೂಕ್ತ ಚಿಕಿತ್ಸೆಯನ್ನು ಸೂಚಿಸುವುದಕ್ಕಾಗಿ ನೀವು ನಿಮ್ಮ ಪತಿಯ ಜೊತೆಗೆ ಕ್ಲಿನಿಕ್‌ಗೆ ಹೋಗುವುದು ಉತ್ತಮ ಎಂದು ಶಿಫಾರಸು ಮಾಡಲಾಗುತ್ತದೆ. 

-ಡಾ| ಪ್ರತಾಪ್‌ ಕುಮಾರ್‌,
ಪ್ರೊಫೆಸರ್‌, MಅRಇ,
ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ

– ಡಾ| ಸತೀಶ್‌ ಅಡಿಗ,
ಪ್ರೊಫೆಸರ್‌, ಕ್ಲಿನಿಕಲ್‌ಎಂಬ್ರಿಯೋಲಜಿ
ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next