Advertisement

ಜನಸಾಮಾನ್ಯರ ಸಮಸ್ಯೆ ಪರಿಹಾರಕ್ಕೆ ಆದ್ಯತೆ

11:26 AM Jun 23, 2018 | |

ಶಿವಮೊಗ್ಗ: ಇದು ಶಾಸಕರ ಕಚೇರಿಯಷ್ಟೇ ಅಲ್ಲ. ಜನ ಸಾಮಾನ್ಯರ ಕಚೇರಿ. ಜನ ಸಾಮಾನ್ಯರು ನೇರವಾಗಿ ಕಚೇರಿಗೆ ಆಗಮಿಸಿ ತಮ್ಮ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಪಡೆಯಬಹುದು ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ನಗರದ ಶಿವಪ್ಪ ನಾಯಕ ಮಾರುಕಟ್ಟೆ ಸಂಕೀರ್ಣದ ಪಕ್ಕದ ಮಹಾನಗರ ಪಾಲಿಕೆ ಕಟ್ಟಡದಲ್ಲಿ ತಮ್ಮ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮನ್ನು ಭಾರೀ ಅಂತರದಿಂದ ಗೆಲ್ಲಿಸಿದ ಸಂಘಟನೆ ಹಾಗೂ ಮತದಾರರ ಋಣ ತೀರಿಸುವುದಾಗಿ ಹೇಳಿದರು.

ಸಂಘಟನೆಯ ಹಿರಿಯರ ಅಪೇಕ್ಷೆಗೆ ತಕ್ಕಂತೆ ಕರ್ತವ್ಯ ನಿರ್ವಹಿಸುವೆ. ಮತ ನೀಡಿರುವ ಜನರಿಗೆ ಯಾವುದೇ ಕಾರಣಕ್ಕೂ ಬೇಸರವಾಗಬಾರದು. ಜನರ ಕೆಲಸ ಮಾಡುವುದು ತಮ್ಮ ಕರ್ತವ್ಯ. ಯಾವುದೇ ಸಂಕೋಚವಿಲ್ಲದೆ ಕಚೇರಿಗೆ ಬಂದು ಸಮಸ್ಯೆಗಳನ್ನು ತಿಳಿಸಿ, ಪರಿಹಾರ ಕಂಡುಕೊಳ್ಳಬೇಕು ಎಂದರು. 

ಈ ಬಾರಿ ಕ್ಷೇತ್ರದ ಜನತೆ 1.04 ಲಕ್ಷ ಮತ ನೀಡಿದ್ದಾರೆ. ಇಷ್ಟೊಂದು ಮತ ದಿಢೀರ್‌ ಎಂದು ಬಂದಿಲ್ಲ, ಇದಕ್ಕೆ ಸಂಘದ ಹಿರಿಯರ ಸುಧೀರ್ಘ‌ ಶ್ರಮ ಇದೆ. ಹಿಂದೆ ಬಿಜೆಪಿಗೆ ಅಭ್ಯರ್ಥಿಗಳೇ ಸಿಗುತ್ತಿರಲಿಲ್ಲ, ಹಿರಿಯರ ಶ್ರಮದಿಂದ ಈಗ
ಪಕ್ಷಕ್ಕೆ ಭಾರೀ ಅಂತರದ ಗೆಲುವು ಸಿಗುತ್ತಿದೆ. ಈ ಬಾರಿ ಕ್ಷೇತ್ರದಲ್ಲಿ ಹಿಂದುತ್ವ, ಸಂಘಟನೆ ಹಾಗೂ ಮೋದಿಗಾಗಿ ಜನರು ಮತ ನೀಡಿದ್ದಾರೆ ಎಂದರು.

ಕಾರ್ಯಾಲಯ ಉದ್ಘಾಟಿಸಿ ಆರ್‌ಎಸ್‌ಎಸ್‌ ಹಿರಿಯ ಕಾರ್ಯಕರ್ತ ನಾಗಭೂಷಣ ಭಟ್‌ ಮಾತನಾಡಿ, ಈ ಬಾರಿಯ ಚುನಾವಣೆ ಗಮನಿಸಿದರೆ ಹಿಂದೂ ಸಮಾಜ ಒಂದಾಗಿದೆ, ಕೆಳ ಮಟ್ಟಕ್ಕೂ ಬಿಜೆಪಿ ತಲುಪಿದೆ ಎಂಬುದು ತಿಳಿದುಬರುತ್ತದೆ. ಈಶ್ವರಪ್ಪನವರು ಎಲ್ಲಾ ಜನರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಹಾರೈಸಿದರು.

Advertisement

ಆರ್‌ಎಸ್‌ಎಸ್‌ನ ಮತ್ತೋರ್ವ ಹಿರಿಯ ಕಾರ್ಯಕರ್ತ ಭ.ಮ. ಶ್ರೀಕಂಠಯ್ಯ ಮಾತನಾಡಿ, ದೇಶದ ಹಿತಕ್ಕಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿ ಮತ್ತೂಮ್ಮೆ ದೇಶದ ಪ್ರಧಾನಿಯಾಗುವಂತೆ ಈಗಿಂದಲೇ ಕಾರ್ಯಕರ್ತರು ಕೆಲಸ ಮಾಡಬೇಕು. ಮುಂದಿನ ಮಹಾಯುದ್ಧಕ್ಕೆ ಸಿದ್ಧರಾಬೇಕು ಎಂದು ಕರೆನೀಡಿದರು.

ಎಂ.ಬಿ. ಭಾನುಪ್ರಕಾಶ್‌ ಮಾತನಾಡಿ, ಶಾಸಕರ ಕಚೇರಿ ಜನರ ಕೆಲಸ ಮಾಡುವ ದೇವಸ್ಥಾನವಾಗಲಿ.
ಜನ ಸಾಮಾನ್ಯರಿಗೆ ಸದಾ ಕಚೇರಿ ತೆರೆದಿರಲಿ. ಸಾಮಾನ್ಯರ ಪಕ್ಷ ನಮ್ಮದು. ಜನಸಾಮಾನ್ಯರ ನಾಯಕ ಈಶ್ವರಪ್ಪ. ತಮ್ಮ ಪ್ರಯತ್ನ ಹಾಗೂ ಸಂಘಟನೆ ಶ್ರಮದಿಂದ ಉನ್ನತ ಸ್ಥಾನಗಳನ್ನು ಪಡೆಯುತ್ತಾ ಬಂದಿದ್ದಾರೆ ಎಂದರು.
ವಿಧಾನ ಪರಿಷತ್‌ ಸದಸ್ಯ ಅರುಣ್‌ ಷಾಪುರ, ಶಾಸಕ ಅಶೋಕನಾಯ್ಕ, ಬಿಜೆಪಿ ಪ್ರಮುಖರಾದ ಎಸ್‌.ಎನ್‌. ಚನ್ನಬಸಪ್ಪ, ನಾಗರಾಜ್‌, ಈಶ್ವರಪ್ಪನವರ ಪತ್ನಿ ಜಯಲಕ್ಷ್ಮೀ ,ಪುತ್ರ ಹಾಗೂ ಜಿಪಂ ಸದಸ್ಯ ಕಾಂತೇಶ್‌, ಸೊಸೆ ಶಾಲಿನಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.